– ಬುರುಡೆ ಗ್ಯಾಂಗ್‌ನಿಂದ 50 ಲಕ್ಷದ ಆಫರ್
– ಹೈಕೋರ್ಟ್‌ಗೆ ಚಿನ್ನಯ್ಯನಿಂದ ರಿಟ್ ಅರ್ಜಿ
ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದ(Dharmasthala Temple) ಹೆಸರಿಗೆ ಕಳಂಕ ತರಲು ತೆರೆಯ ಮರೆಯಲ್ಲಿ ನಡೆದಿದ್ದ ಮಹಾ ಸಂಚೊಂದು ಈಗ ಸಂಪೂರ್ಣವಾಗಿ ಬಟಾಬಯಲಾಗಿದೆ. ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ‘ಬುರುಡೆ ಕೇಸ್’ಗೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿಗೆ (PUBLiC TV) ಅತ್ಯಂತ ಸ್ಫೋಟಕ ಮತ್ತು ಎಕ್ಸ್‌ಕ್ಲೂಸಿವ್ ದಾಖಲೆಗಳು ಲಭ್ಯವಾಗಿದ್ದು, ಇಡೀ ಗ್ಯಾಂಗ್‌ನ ಅಂತರರಾಜ್ಯ ಮಟ್ಟದ ಹುನ್ನಾರ ಸಾರ್ವಜನಿಕವಾಗಿ ಅನಾವರಣಗೊಂಡಿದೆ.
ಧರ್ಮಸ್ಥಳದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ರೂಪಿಸಲು ಬರೋಬ್ಬರಿ 200 ಕೋಟಿ ರೂಪಾಯಿಗಳ ಬೃಹತ್ ಪ್ರಾಜೆಕ್ಟ್ ಸಿದ್ಧವಾಗಿತ್ತು ಎಂಬ ಆಘಾತಕಾರಿ ಮಾಹಿತಿ ಈಗ ಹೊರಬಿದ್ದಿದೆ.
ಈ ಮಹಾ ಸಂಚಿನ ಕೇಂದ್ರ ಬಿಂದುವಾಗಿರುವ ಪ್ರಕರಣದ ಆರೋಪಿ ಚಿನ್ನಯ್ಯ(Chinnaiah) ಹೈಕೋರ್ಟ್‌ಗೆ (High Court) ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಹಲವು ಸ್ಫೋಟಕ ಸತ್ಯಗಳನ್ನು ಬಿಚ್ಚಿಟ್ಟಿದ್ದಾನೆ. ಕ್ಷೇತ್ರಕ್ಕೆ ಕಳಂಕ ತರುವ ಈ ಕುತಂತ್ರದ ಹಿಂದೆ ಅಂತರರಾಜ್ಯ ಮಟ್ಟದ ದೊಡ್ಡ ಆರ್ಥಿಕ ವಹಿವಾಟು ನಡೆದಿರುವುದು ಬೆಳಕಿಗೆ ಬಂದಿದೆ. ಧರ್ಮಸ್ಥಳದ ವಿರುದ್ಧ ಹೋರಾಟ ನಡೆಸಲು ಕೇರಳದಿಂದ (Kerala) ಹಣದ ಹರಿವು ಹರಿದುಬಂದಿದ್ದು, ಈ ಕಾರ್ಯಾಚರಣೆ ಯಶಸ್ವಿಯಾದರೆ ಚಿನ್ನಯ್ಯನಿಗೆ 50 ಲಕ್ಷ ರೂ.ನೀಡುವುದಾಗಿ ಗ್ಯಾಂಗ್ ಆಮಿಷ ಒಡ್ಡಿತ್ತು ಎಂದು ಆರೋಪಿಸಿದ್ದಾನೆ.

ಷಡ್ಯಂತ್ರದ ರೂವಾರಿಗಳು ಯಾರು?
ಚಿನ್ನಯ್ಯ ತನ್ನ ಅರ್ಜಿಯಲ್ಲಿ ಪ್ರಮುಖವಾಗಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠಲಗೌಡ, ಜಯಂತ್ ಹೆಸರನ್ನು ಉಲ್ಲೇಖಿಸಿದ್ದಾನೆ.
ತಾನು ನಿಜವಾದ ಆರೋಪಿಗಳ ಹೆಸರುಗಳನ್ನು ಬಹಿರಂಗಪಡಿಸಿದರೂ ಸಹ ವಿಶೇಷ ತನಿಖಾ ದಳ (SIT) ಅವರ ವಿರುದ್ಧ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಚಿನ್ನಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಹೀಗಾಗಿ ಪ್ರಕರಣದ ತನಿಖೆಯ ಪ್ರಗತಿಯ ಮಾಹಿತಿ ನೀಡುವಂತೆ ಕೋರಿ ಆತ ನ್ಯಾಯಾಲಯದ ಮೊರೆ ಹೋಗಿದ್ದಾನೆ.
‘ಪ್ರಕಾಶ್ ರಾಜ್’ ಯಾರು?
ಚಿನ್ನಯ್ಯ ಸಲ್ಲಿಸಿರುವ ಅರ್ಜಿಯಲ್ಲಿ ಮತ್ತೊಂದು ಅತ್ಯಂತ ರೋಚಕ ತಿರುವು ಸಿಕ್ಕಿದ್ದು ‘ಪ್ರಕಾಶ್ ರಾಜ್’ ಎಂಬ ವ್ಯಕ್ತಿಯ ಹೆಸರು ಉಲ್ಲೇಖವಾಗಿದೆ. ಚಿನ್ನಯ್ಯನ ಜೊತೆ ಅತ್ಯಂತ ಆಪ್ತವಾಗಿ, ತಮಿಳು ಭಾಷೆಯಲ್ಲಿ ಮಾತನಾಡಿದ್ದ ಈ ಪ್ರಕಾಶ್ ರಾಜ್, “ಬುರುಡೆ ಗ್ಯಾಂಗ್ ಹೇಳಿದಂತೆ ನೀನು ಕೇಳಿದರೆ, ನಿನ್ನನ್ನು ನಾನು ಅಪ್ಪಿಕೊಳ್ಳುತ್ತೇನೆ. ಜೂನ್ 29ನೇ ತಾರೀಖು ಬಂದು ನಿನ್ನನ್ನು ತಬ್ಬಿಕೊಳ್ಳುತ್ತೇನೆ” ಎಂದು ಭರವಸೆ ನೀಡಿದ್ದ ಎಂದು ಹೇಳಿದ್ದಾನೆ.
ಚಿನ್ನಯ್ಯನ ಬಳಿ ತಮಿಳಿನಲ್ಲಿ ಮಾತನಾಡಿದ ಈ ಪ್ರಕಾಶ್ ರಾಜ್ ಯಾರು? ಬುರುಡೆ ಕೇಸ್‌ಗೂ ಈ ವ್ಯಕ್ತಿಗೂ ಇರುವ ನಂಟೇನು ಎಂಬುದನ್ನು ಚಿನ್ನಯ್ಯ ತನ್ನ ಅರ್ಜಿಯಲ್ಲಿ ಎಲ್ಲೂ ಸ್ಪಷ್ಟಪಡಿಸಿಲ್ಲ. ಇದು ಸದ್ಯಕ್ಕೆ ದೊಡ್ಡ ಸಸ್ಪೆನ್ಸ್ ಆಗಿ ಉಳಿದಿದೆ.
ಚಿನ್ನಯ್ಯ ಸಲ್ಲಿಸಿರುವ ಈ ರಿಟ್ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಬುರುಡೆ ಪ್ರಕರಣದ ತನಿಖೆಯ ಸದ್ಯದ ಸ್ಥಿತಿ ಹಾಗೂ ಪ್ರಗತಿಯ ಕುರಿತು ಮಾಹಿತಿ ನೀಡುವಂತೆ ರಾಜ್ಯ ಸರ್ಕಾರ ಮತ್ತು ವಿಶೇಷ ತನಿಖಾ ತಂಡಕ್ಕೆ (SIT) ನೋಟಿಸ್ ಜಾರಿ ಮಾಡಿದೆ. ಅಲ್ಲದೆ ಪ್ರಕರಣದ ಮುಂದಿನ ವಿಚಾರಣೆಯನ್ನು ಜೂನ್ 29ಕ್ಕೆ ಮುಂದೂಡಿದೆ.
