ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕಸರತ್ತು (Karnataka Cabinet Expansion) ನಡೆಯುತ್ತಿದೆ. ಇಂದು (ಜು.29) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಸಮ್ಮುಖದಲ್ಲಿ ಅಂತಿಮ ಚರ್ಚೆ ನಡೆಯಲಿದೆ. ಗುರುವಾರ (ಜು.30) ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಯುತ್ತಿದೆ.
ಈಗಾಗಲೇ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ನಿವಾಸದಲ್ಲಿ ರಾಜ್ಯ ನಾಯಕರು ಸಭೆ ನಡೆಸಿದ್ದರು. ಸಭೆಯಲ್ಲಿ ಉಸ್ತುವಾರಿ ರಣದೀಪ್ ಸುರ್ಜೆವಾಲಾ, ಸಿಎಂ ಡಿ.ಕೆ ಶಿವಕುಮಾರ್ (D.K Shivakumar), ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಭಾಗಿಯಾಗಿದ್ದರು. ಸಭೆಯಲ್ಲಿ ಸಿಎಂ ಮತ್ತು ಮಾಜಿ ಸಿಎಂ ತಂದ ಪಟ್ಟಿಗಳ ಹೆಸರುಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಜಿಲ್ಲಾವಾರು ಜಾಗೂ ಜಾತಿವಾರು ಹೆಸರುಗಳನ್ನು ಪರಿಶೀಲಿಸಿ ಕೆಲವು ಹೆಸರುಗಳನ್ನು ಅಂತಿಮ ಹಂತಕ್ಕೆ ತರಲಾಗಿದೆ. ಕೆಲವು ಹೆಸರುಗಳನ್ನು ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಸಮ್ಮುಖದಲ್ಲಿ ಚರ್ಚಿಸಲು ನಿರ್ಧರಿಸಲಾಗಿದೆ. ಇದನ್ನೂ ಓದಿ: CWRC ತೀರ್ಮಾನ ಸಮಾಧಾನ ತಂದಿಲ್ಲ – ಮೇಲ್ಮನವಿ ಸಲ್ಲಿಸುತ್ತೇವೆ: ರಾಮಲಿಂಗಾರೆಡ್ಡಿ
ನಾಳೆಯೇ ಪ್ರಮಾಣ ವಚನ ಕಾರ್ಯಕ್ರಮ?
ಇಂದು ಸಂಜೆ 4:30ರ ನಂತರ ಸಭೆ ಸೇರಲು ನಿರ್ಧರಿಸಿದ್ದು ಮಲ್ಲಿಕಾರ್ಜುನ್ ಖರ್ಗೆ ನಿವಾಸದಲ್ಲಿ ರಾಹುಲ್ ಗಾಂಧಿ ಸಮ್ಮುಖದಲ್ಲಿ ಸಭೆ ನಡೆಸಿ ಪಟ್ಟಿಯನ್ನು ಅಂತಿಮಗೊಳಿಸಬಹುದು. ಈ ನಡುವೆ ಗುರುವಾರ ಸಂಜೆ ಐದು ಗಂಟೆಗೆ ಪ್ರಮಾಣ ವಚನ ಕಾರ್ಯಕ್ರಮಕ್ಕೆ ತಯಾರಿ ಮಾಡಿಕೊಳ್ಳಲಾಗುತ್ತಿದೆ.
ಇನ್ನೆರೆಡು ಡಿಸಿಎಂ ಹುದ್ದೆ ಸೃಷ್ಠಿಸುವ ಬಗ್ಗೆ ಚರ್ಚೆ
ಇನ್ನೆರೆಡು ಡಿಸಿಎಂ ಹುದ್ದೆಗಳನ್ನು ಸೃಷ್ಠಿಸುವ ಬಗ್ಗೆಯೂ ಸಿಎಂ ಡಿ.ಕೆ ಶಿವಕುಮಾರ್ ಅವರು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇದಕ್ಕೆ ವಿರೋಧಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಡಿಸಿಎಂ ಹುದ್ದೆಯ ಬದಲು ಉತ್ತಮ ಖಾತೆಗಳನ್ನು ನೀಡಬಹುದು ಅನಗತ್ಯ ಡಿಸಿಎಂ ಹುದ್ದೆ ಸೃಷ್ಠಿ ಬೇಡ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು ರಾಹುಲ್ ಸಮ್ಮುಖದಲ್ಲಿ ಈ ವಿಚಾರವೂ ಇತ್ಯರ್ಥವಾಗುವ ಸಾಧ್ಯತೆಗಳಿದೆ. ಈ ಎಲ್ಲಾ ವಿಚಾರ ಇಂದು ಸಂಜೆಯ ಸಭೆಯಲ್ಲಿ ತಾರ್ಕಿಕ ಅಂತ್ಯಕ್ಕೆ ಬರುವ ಸಾಧ್ಯತೆಗಳಿದೆ. ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು – ಜು.31ಕ್ಕೆ ಮಂಡ್ಯದಲ್ಲಿ ಬೃಹತ್ ಹೋರಾಟಕ್ಕೆ ಕರೆಕೊಟ್ಟ ವಿಜಯೇಂದ್ರ
