ತಮಿಳುನಾಡು ರಾಜಕಾರಣ ಮತ್ತು ಸಿನಿಮಾ ರಂಗದ ಮೇಲೆ ಕರ್ನಾಟಕದ ಜನರಿಗೆ ಯಾವಾಗಲೂ ಒಂದು ವಿಶೇಷ ಕಣ್ಣಿರುತ್ತದೆ. ಅದರಲ್ಲೂ ತಮಿಳು ಚಿತ್ರರಂಗದ ದಳಪತಿ ವಿಜಯ್ ಈಗ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವುದರಿಂದ ಸಹಜವಾಗಿಯೇ ಕುತೂಹಲ ದುಪ್ಪಟ್ಟಾಗಿದೆ. ಕರ್ನಾಟಕದಲ್ಲೂ ಅಪಾರ ಅಭಿಮಾನಿ ಬಳಗ ಹೊಂದಿರುವ ಜೋಸೆಫ್ ವಿಜಯ್, ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಕರ್ನಾಟಕಕ್ಕೆ ಕಾಲಿಡುತ್ತಿದ್ದಾರೆ. ಆದರೆ, ಅವರು ಬರುತ್ತಿರುವುದು ಯಾವುದೇ ಸರ್ಕಾರಿ ಕಾರ್ಯಕ್ರಮಕ್ಕಾಗಲಿ ಅಥವಾ ರಾಜ್ಯ ಸರ್ಕಾರದ ಜೊತೆಗಿನ ಮಾತುಕತೆಗಾಗಲಿ ಅಲ್ಲ. ಬದಲಿಗೆ ಉಡುಪಿ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕೊಲ್ಲೂರು((Mookambika Devi Temple) ಮೂಕಾಂಬಿಕಾ ದೇವಿಯ ದರ್ಶನಕ್ಕೆ!
ಕೌತುಕ ಮೂಡಿಸಿದ ಸಡನ್ ವಿಸಿಟ್!
ಮೇ 10ರಂದು ತಮಿಳುನಾಡಿನ((Tamil Nadu) ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ವಿಜಯ್ (Joseph Vijay) ತೀವ್ರ ಕಾರ್ಯನಿರತರಾಗಿದ್ದಾರೆ. ಈಗಾಗಲೇ ಎರಡ್ಮೂರು ಬಾರಿ ದೆಹಲಿ ಪ್ರವಾಸ ಮಾಡಿ ಸರ್ಕಾರದ ಕೆಲಸ ಕಾರ್ಯಗಳನ್ನು ನಿಭಾಯಿಸಿರುವ ಅವರಿಗೆ, ಸ್ವಂತ ರಾಜ್ಯದಲ್ಲೇ ಸುತ್ತಾಡಲು ಇನ್ನು ಸಮಯ ಸಿಕ್ಕಿಲ್ಲ. ಇಂತಹ ಸನ್ನಿವೇಶದಲ್ಲಿ ಅವರು ನೆರೆ ರಾಜ್ಯ ಕರ್ನಾಟಕದ ಕೊಲ್ಲೂರಿಗೆ ಬರುತ್ತಿರುವುದು ತೀವ್ರ ಕೌತುಕ ಮೂಡಿಸಿದೆ.
ಚುನಾವಣಾ ಫಲಿತಾಂಶಕ್ಕೂ ಮುನ್ನ ತಿರುಚೆಂದೂರಿನ ಮುರುಗನ್ ದೇವಸ್ಥಾನ ಹಾಗೂ ಶಿರಡಿ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿ ಟೆಂಪಲ್ ರನ್ ಮಾಡಿದ್ದ ವಿಜಯ್, ಸಿಎಂ ಆದ ಬಳಿಕ ಯಾವುದೇ ದೇವಸ್ಥಾನಕ್ಕೆ ಹೋಗಿರಲಿಲ್ಲ. ಇದೀಗ ಅಧಿಕಾರ ವಹಿಸಿಕೊಂಡ ಕೇವಲ ಒಂದು ತಿಂಗಳಲ್ಲೇ ಶಕ್ತಿ ಆರಾಧನೆಗೆ ಪ್ರಶಸ್ತ ದಿನವಾದ ಶುಕ್ರವಾರ ಮೂಕಾಂಬಿಕೆಯ ಸನ್ನಿಧಿಗೆ ಬರುತ್ತಿದ್ದಾರೆ. ಜೋಸೆಫ್ ವಿಜಯ್ ಅವರಿಗೆ ಕೊಲ್ಲೂರು ದೇವಿಯ ಮೇಲೆ ನಂಬಿಕೆ ಬಂದಿದ್ದೇಗೆ? ಯಾರಾದರೂ ಸಲಹೆ ನೀಡಿದ್ದಾರಾ ಅಥವಾ ಹರಕೆ ಇತ್ತೇ? ಎಂಬ ಪ್ರಶ್ನೆಗಳು ಈಗ ಎಲ್ಲೆಡೆ ಹರಿದಾಡುತ್ತಿವೆ.

ವೇಳಾಪಟ್ಟಿ ಹೇಗೆ?
ಮಧ್ಯಾಹ್ನ 12:30: ಚೆನ್ನೈನಿಂದ ನೇರವಾಗಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮನ. ಮಧ್ಯಾಹ್ನ 3:00: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ಮತ್ತು ವಿಶೇಷ ಪೂಜೆ. ಸಂಜೆ: ಪೂಜೆ ಮುಗಿಸಿ ನೇರವಾಗಿ ಮಂಗಳೂರು ಮಾರ್ಗವಾಗಿ ಚೆನ್ನೈಗೆ ವಾಪಸ್ ಆಗಲಿದ್ದಾರೆ. ತಮಿಳುನಾಡು ಸಿಎಂ ಭೇಟಿಯ ಹಿನ್ನೆಲೆಯಲ್ಲಿ ಕೊಲ್ಲೂರಿನಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳುವಂತೆ ಈಗಾಗಲೇ ಪೊಲೀಸ್ ಇಲಾಘೆಗೆ ಹಿರಿಯ ಅಧಿಕಾರಿಗಳಿಂದ ಸೂಚನೆ ಬಂದಿದೆ.
ವಿಜಯ್ ಕೊಲ್ಲೂರಿಗೆ ಬರುತ್ತಿರುವ ವಿಚಾರ ತಮಿಳುನಾಡಿನಲ್ಲೂ ದೊಡ್ಡ ಸದ್ದು ಮಾಡುತ್ತಿದೆ. ಏಕೆಂದರೆ, ತಮಿಳುನಾಡನ್ನು ಆಳಿದ ಘಟಾನುಘಟಿ ನಾಯಕರಿಗೂ ಮತ್ತು ಕೊಲ್ಲೂರು ಕ್ಷೇತ್ರಕ್ಕೂ ಅವಿನಾಭಾವ ಸಂಭಂಧವಿದೆ.
ಚಿನ್ನದ ಖಡ್ಗ ಕೊಟ್ಟಿದ್ದ ಎಂಜಿಆರ್
ವಿಜಯ್ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಗೆ ಬರುತ್ತಿರುವ ವಿಚಾರ ತಮಿಳುನಾಡಿನಲ್ಲೂ ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ ತಮಿಳುನಾಡನ್ನು ಆಳಿದ ರಾಜಕಾರಣಿಗಳಿಗೂ ಮತ್ತು ಕೊಲ್ಲೂರು ಕ್ಷೇತ್ರಕ್ಕೂ ಇರುವ ಸಂಬಂಧ. ಕೊಲ್ಲೂರು ದೇವಸ್ಥಾನಕ್ಕೆ ತಮಿಳುನಾಡಿನಿಂದಲೂ ಅಪಾರ ಭಕ್ತರು ಬರುತ್ತಾರೆ. ಅಲ್ಲಿನ ಮುಖ್ಯಮಂತ್ರಿಗಳೇ ಕೊಲ್ಲೂರಿನ ಪರ್ಮನೆಂಟ್ ಭಕ್ತರೂ ಆಗಿದ್ದಾರೆ. ಅದಕ್ಕೆ ಉತ್ತಮ ಉದಾಹರಣೆಯೇ ಮಾಜಿ ಸಿಎಂ ಎಂ. ಜಿ. ರಾಮಚಂದ್ರನ್.
ಎಂಜಿಆರ್(MGR) ತಮಿಳುನಾಡಿನ ಸುಪ್ರಸಿದ್ಧ ಸಿನಿಮಾ ನಟ. ತಮಿಳು ಚಿತ್ರರಂಗದ ಮೇರು ನಟ ಮತ್ತು ದಂತಕತೆ. ಇವರು ಕೂಡ ಸ್ವಂತ ಪಕ್ಷವನ್ನು ಕಟ್ಟಿ ತಮಿಳುನಾಡಿನಲ್ಲಿ ರಾಜ್ಯಭಾರ ಮಾಡಿದವರು. ಸಿನಿಮಾದಲ್ಲಿನ ತನ್ನ ಅಪಾರ ಜನಪ್ರಿಯತೆಯನ್ನು ಬಳಸಿಕೊಂಡು ಸ್ವಂತ ಪಕ್ಷ ಸ್ಥಾಪಿಸಿ ಮುಖ್ಯಮಂತ್ರಿಯಾಗಿದ್ದಾರೆ. ಎಂಜಿಆರ್ ಹತ್ತನ್ನೆರಡು ವರ್ಷಗಳ ಕಾಲ ತಮಿಳುನಾಡು ರಾಜ್ಯವನ್ನು ಆಳಿದ್ದಾರೆ. ಇವತ್ತಿಗೂ ಎಂಜಿಆರ್ ದ್ರಾವಿಡರ ಪಾಲಿಗೆ ಅತ್ಯಂತ ಜನಪ್ರಿಯ ಮುಖ್ಯಮಂತ್ರಿಯಾಗಿ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ. ಈ ಎಂಜಿಆರ್ ಕೂಡ ತಾವು ಸಿಎಂ ಆಗಿದ್ದಾಗಲೇ ಇದೇ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬರುತ್ತಿದ್ದರು. ಬರೀ ಒಮ್ಮೆ ಮಾತ್ರ ಬಂದು ಹೋಗಿದ್ದಲ್ಲ, ತನ್ನ ಆಡಳಿತದ ಅವಧಿಯಲ್ಲಿ ಹಲವು ಬಾರಿ ಬಂದು ಹೋಗಿದ್ದಾರೆ.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ದೇವಿಗೆ ಅರ್ಪಿತವಾಗಿ ಚಿನ್ನದ ಖಡ್ಗವೊಂದಿದೆ. ಆ ಖಡ್ಗವನ್ನು ದಾನವಾಗಿ ನೀಡಿದವರು ಇದೇ ಎಂಜಿ ರಾಮಚಂದ್ರನ್. ತಾವು ಮುಖ್ಯಮಂತ್ರಿಯಾಗಿದ್ದ ವೇಳೆ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಾನಕ್ಕೆ ಬಂದು ಒಂದು ಕೆಜಿ ತೂಕದ ಚಿನ್ನದ ಖಡ್ಗವನ್ನು ನೀಡಿದ್ದರು. ಇದನ್ನೂ ಓದಿ: ಶುಕ್ರವಾರ ತಮಿಳುನಾಡು ಸಿಎಂ ಕೊಲ್ಲೂರು ಭೇಟಿ – ಮಧ್ಯಾಹ್ನ 12ರಿಂದ ಸಂಜೆ 5ರವರೆಗೆ ಭಕ್ತರಿಗಿಲ್ಲ ದರ್ಶನ

ಚಂಡಿಕಾ ಹೋಮ ಮಾಡಿಸಿದ್ದ ಜಯಲಲಿತಾ
ಎಂಜಿಆರ್ ಬಳಿಕ ಅವರ ಶಿಷ್ಯೆ ಮತ್ತು ಉತ್ತರಾಧಿಕಾರಿ ಪುರಚ್ಚಿ ತಲೈವಿ ಜಯಲಲಿತಾ( Jayalalithaa) ಕೂಡ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಂದಿದ್ದರು. ಜಯಲಲಿತಾ ತಮ್ಮ ರಾಜಕೀಯ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡವರು. ಬಂಧನಕ್ಕೊಳಗಾಗಿ ಜೈಲಿಗೂ ಹೋಗಿ ಬಂದಿದ್ದವರು. ತನ್ನ ಜೀವನದಲ್ಲಿ ಸವಾಲುಗಳು ಎದುರಾದಾಗ ಜಯಲಲಿತಾಗೆ ನೆನಪಾಗಿದ್ದೇ ಕೊಲ್ಲೂರು ಮೂಕಾಂಬಿಕೆ. ಧರ್ಮ ಜ್ಯೋತಿಷ್ಯದ ಮೇಲೆ ಜಯಲಲಿತಾಗೆ ಅಪಾರ ನಂಬಿಕೆ ಇತ್ತು. ತನ್ನ ಜ್ಯೋತಿಷಿಯೊಬ್ಬರ ಸಲಹೆ ಮೇರೆಗೆ ಜಯಲಲಿತಾ ಕೂಡ 2004ರಲ್ಲಿ ಕೊಲ್ಲೂರು ಮೂಕಾಂಬಿಕೆಯ ದೇವಸ್ಥಾನಕ್ಕೆ ಬಂದಿದ್ದರು. ಆವತ್ತು ಕೊಲ್ಲೂರಿಗೆ ಬಂದಿದ್ದಾಗ ಜಯಲಲಿತಾ ದೇವಿಗೆ ಪ್ರಿಯವಾದ ಚಂಡಿಕಾ ಹೋಮವನ್ನು ಕೂಡ ಮಾಡಿಸಿದ್ದರು. ಕಷ್ಟಗಳು, ಸವಾಲುಗಳು ದೂರವಾಗಿ ಈಷ್ಟಾರ್ಥಗಳು ನೆರವೇರಲಿ ಅಂತ ಮೂಕಾಂಬಿಕೆಗೆ ಚಂಡಿಕಾ ಹೋಮ ಮಾಡಿಸಿದ್ದರು. ಬಳಿಕ ಶುಕ್ರವಾರದ ವಿಶೇಷ ಅನ್ನ ಸಂತರ್ಪಣೆಗೆ 30 ಸಾವಿರ ರೂಪಾಯಿ ದೇಣಿಗೆ ಮತ್ತು 1 ಟನ್ ತುಪ್ಪವನ್ನು ಅರ್ಪಿಸಿದ್ದರು. ಜಯಲಲಿತಾ ಅವರ ಕಾಲದಲ್ಲೇ ತಮಿಳುನಾಡಿನ ಹಲವು ನಗರಗಳಿಂದ ಕೊಲ್ಲೂರಿಗೆ ನೇರ ಸರ್ಕಾರಿ ಬಸ್ ಸೌಕರ್ಯವನ್ನೂ ಕಲ್ಪಿಸಲಾಗಿತ್ತು.
ಜಯಲಲಿತಾ ಕೊಲ್ಲೂರು ದೇವಸ್ಥಾನಕ್ಕೆ ಬಂದು ಹೋದ ಮೇಲೆ ತಮಿಳುನಾಡಿನಲ್ಲೂ ಈ ದೇಗುಲ ಸಾಕಷ್ಟು ಪ್ರಸಿದ್ಧಿ ಪಡೆಯಿತು. ತಮಿಳುನಾಡಿನಿಂದ ಕೊಲ್ಲೂರಿಗೆ ಬರುವ ಭಕ್ತರ ಸಂಖ್ಯೆಯಲ್ಲೂ ಭಾರೀ ಪ್ರಮಾಣದಲ್ಲಿ ಏರಿಕೆಯಾಯ್ತು. ಹೀಗೆ ತಮಿಳುನಾಡಿನ ರಾಜಕಾರಣಿಗಳಿಗೂ ಕೊಲ್ಲೂರು ಮೂಕಾಂಬಿಕೆಗೂ ವಿಶೇಷ ನಂಟಿದೆ. ಈಗ ದ್ರಾವಿಡ ನಾಡಿನ ಹೊಸ ಮುಖ್ಯಮಂತ್ರಿ ಜೋಸೆಫ್ ವಿಜಯ್ ಈ ನಂಟನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಅಧಿಕಾರ ವಹಿಸಿಕೊಂಡ ಒಂದೇ ತಿಂಗಳಲ್ಲೇ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಗೆ ಓಡೋಡಿ ಬರುತ್ತಿದ್ದಾರೆ.

