ಚಂಡೀಗಢ: ಹರಿಯಾಣದಲ್ಲಿ (Haryana) ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ (Bishnoi Gang) ಸದಸ್ಯರು ಜಿಮ್ ಮಾಲೀಕನೊಬ್ಬನನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಕೇವಲ 5 ಸೆಕೆಂಡುಗಳಲ್ಲಿ ಸುಮಾರು 10 ಗುಂಡು ಹಾರಿಸಿ ಈ ಕೃತ್ಯ ಎಸಗಿದ್ದಾರೆ.
ಕಪಿಲ್ ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ವ್ಯಕ್ತಿ. ಈ ಕೊಲೆಯನ್ನು ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ತಾವೇ ಮಾಡಿರುವುದಾಗಿ ಒಪ್ಪಿಕೊಂಡಿದೆ. ಈ ಗ್ಯಾಂಗಿನ ಹರಿ ಬಾಕ್ಸರ್ ಎಂಬಾತ ಈ ಬಗ್ಗೆ ಆಡಿಯೋವೊಂದನ್ನು ಬಿಡುಗಡೆ ಮಾಡುವ ಮೂಲಕ ವಿಷಯವನ್ನು ಬಹಿರಂಗಪಡಿಸಿದ್ದಾನೆ. ಇದನ್ನೂ ಓದಿ: ದೆಹಲಿ | ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಇಬ್ಬರು ಶಾರ್ಪ್‌ಶೂಟರ್ಸ್ ಅರೆಸ್ಟ್ - ಓರ್ವನಿಗೆ ಗುಂಡೇಟು
ಗುರುವಾರ ಮುಂಜಾನೆ 5:30ರ ಸುಮಾರಿಗೆ ಹನ್ಸಿಯ ಫವ್ವಾರಾ ಚೌಕ್ ಬಳಿ ಘಟನೆ ನಡೆದಿದೆ. ಕಪಿಲ್ ತಮ್ಮ ಜಿಮ್ ಬಳಿ ಯುವಕ, ಯುವತಿಯರಿಗೆ ತರಬೇತಿ ನೀಡುತ್ತಿದ್ದಾಗ ಹೆಲ್ಮೆಟ್ ಧರಿಸಿ ಬೈಕಿನಲ್ಲಿ ಬಂದ ಕಿಡಿಗೇಡಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಬಹಳ ಹತ್ತಿರದಿಂದ ಕಪಿಲ್ ತಲೆಗೆ ಗುಂಡು ಹಾರಿಸಿದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಜಿಮ್ ಮಾಲೀಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಲ್ಲೇ ಪಕ್ಕದಲ್ಲಿ ವರ್ಕ್ಔಟ್ ಮಾಡುತ್ತಿದ್ದ ಶಿಖಾ ಎಂಬ ಮಹಿಳೆಗೂ ಗುಂಡಿನ ಚೂರುಗಳು ತಗುಲಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ಅವರನ್ನು ಹಿಸ್ಸಾರ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಆಡಿಯೋದಲ್ಲಿ ಹೇಳಿದ್ದೇನು?
ನಾನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಹರಿ ಬಾಕ್ಸರ್. ಹನ್ಸಿಯಲ್ಲಿ ರೆಡ್ ಜಿಮ್ ಆಪರೇಟರ್ ಕಪಿಲ್ ಅವರನ್ನು ಕೊಲೆ ಮಾಡಿರುವುದು ನಾವೇ. ನಾನು, ಆರ್‌ಡಿ ಧಲಿವಾಲ್, ಹರ್ಮನ್ ಸಂಧು ಮತ್ತು ವಿಕ್ರಮ್ ಕಾದಲ್ ಹತ್ಯೆಗೈದಿದ್ದೇವೆ.
ಕಪಿಲ್ ಈ ಹಿಂದೆ ಶೇಖ್‌ಪುರ ಧರಿಕ್‌ಪುರಿಯಾದಲ್ಲಿ ನಡೆದಿದ್ದ ಗುಂಡಿನ ದಾಳಿಯಲ್ಲಿ ಭಾಗಿಯಾದವರನ್ನು ಸಂಪೂರ್ಣವಾಗಿ ಬೆಂಬಲಿಸಿದ್ದಾನೆ. ನಾವು ನಮ್ಮ ಗ್ಯಾಂಗಿನ ಮತ್ತೊಬ್ಬ ಸಹಚರ ಸುಂದರ್ ಹನ್ಸಿ ಮೂಲಕ ಅವನಿಗೆ ಎರಡು ಬಾರಿ ಎಚ್ಚರಿಕೆ ನೀಡಿದ್ದೆವು. ಆದರೆ ಆತ ಈ ಬಗ್ಗೆ ನಿರ್ಲಕ್ಷಿಸಿದ್ದ. ಶೇಖ್‌ಪುರ ಧರಿಕ್‌ಪುರಿಯಾದ ಪಿತೂರಿಯ ಭಾಗಿಯಾಗಿರುವ ಎಲ್ಲರನ್ನೂ ಗುರುತಿಸಲಾಗಿದೆ. ಅವರನ್ನು ಕೂಡ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ.
ಈ ಆಡಿಯೋದಲ್ಲಿ ದೆಹಲಿಯಲ್ಲಿ ಇತ್ತೀಚಿಗೆ ನಡೆದಿದ್ದ ಮತ್ತೊಂದು ದಾಳಿಯ ಬಗ್ಗೆ ಹರಿ ಬಾಕ್ಸರ್ ಮಾತನಾಡಿ, ಈ ದಾಳಿಯೂ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ನಡೆದಿತ್ತು. ಅನಿಲ್ ಪಂಡಿತ್, ಆರ್‌ಡಿ ಧಲಿವಾಲ್ ಮತ್ತು ಹರ್ಮನ್ ಸಂಧು ಈ ಕೃತ್ಯದಲ್ಲಿ ಭಾಗಿಯಾಗಿದ್ದರು. ದೆಹಲಿಯಲ್ಲಿ ಟಾರ್ಗೆಟ್ ಆದ ವ್ಯಕ್ತಿ ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ತೀರಾ ಆಪ್ತನಾಗಿದ್ದ. ಎಷ್ಟೇ ಭದ್ರತೆ ಇದ್ದರೂ ಯಾರನ್ನೂ ಉಳಿಸುವುದಿಲ್ಲ ಎಂದು ನೇರ ಎಚ್ಚರಿಕೆ ನೀಡಿದ್ದಾನೆ.
ಸದ್ಯ ಈ ತಂಡ ವಿದೇಶದಲ್ಲಿದೆ ಎನ್ನಲಾಗಿದೆ. ಪ್ರಕರಣದ ಗಂಭೀರತೆಯನ್ನು ಅರಿತಿರುವ ಪೊಲೀಸರು ಕ್ರೈಮ್ ಇನ್ವೆಸ್ಟಿಗೇಷನ್ ಏಜೆನ್ಸಿ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ತಂಡಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ಬಗ್ಗೆ ತನಿಖೆಗೆ ಚುರುಕೊಂಡಿದೆ. ಇದನ್ನೂ ಓದಿ: ಬಿಷ್ಣೋಯ್ ಗ್ಯಾಂಗ್ ಹೆಸರಲ್ಲಿ ರಣವೀರ್ ಸಿಂಗ್‌ಗೆ ಬೆದರಿಕೆ – ವಾಯ್ಸ್ ಮೆಸೇಜ್‌ನಲ್ಲಿ ಕೋಟಿ ಕೋಟಿ ಡಿಮ್ಯಾಂಡ್
