– ನಾರಾಯಣಪುರ ಜಲಾಶಯದಿಂದ 4.105 ಟಿಎಂಸಿ ಬಿಡುಗಡೆ
ಕಲಬುರಗಿ: ಮಹಾರಾಷ್ಟ್ರದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಕೃಷ್ಣಾ ನದಿಯಲ್ಲಿ ನೀರಿನ ಹರಿವು ಗಣನೀಯವಾಗಿ ಹೆಚ್ಚಾಗಿದ್ದು, ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಏರಿಕೆಯಾಗಿದೆ. ಜಲಾಶಯ ಗರಿಷ್ಠ ಮಟ್ಟದತ್ತ ಸಾಗುತ್ತಿರುವುದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ನಾರಾಯಣಪುರ ಜಲಾಶಯದಿಂದ ಒಟ್ಟು 4.105 ಟಿಎಂಸಿ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ಬಿಡುಗಡೆ ಮಾಡಲು ಸರ್ಕಾರ ಅನುಮೋದನೆ ನೀಡಿದೆ.
ಕಲಬುರಗಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಬೇಡಿಕೆ ಹೆಚ್ಚುತ್ತಿದ್ದು, ಅಫಜಲಪುರ, ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿ, ಜೇವರ್ಗಿ ಹಾಗೂ ಯಡ್ರಾಮಿ ತಾಲೂಕುಗಳ ನಗರ ಮತ್ತು ಗ್ರಾಮೀಣ ಪ್ರದೇಶಗಳ ಜನರು ಹಾಗೂ ಜಾನುವಾರುಗಳಿಗೆ ಅಗತ್ಯ ಪ್ರಮಾಣದಲ್ಲಿ ನೀರು ಪೂರೈಸಲು ಈ ನಿರ್ಧಾರ ಕೈಗೊಳ್ಳಲಾಗಿದೆ. ನಾರಾಯಣಪುರ ಜಲಾಶಯದಿಂದ ಐಬಿಸಿ (IBC) ಹಾಗೂ ಜೆಬಿಸಿ (JBC) ಕಾಲುವೆಗಳ ಮೂಲಕ ನೀರು ಹರಿಸಲಾಗುವುದು.
ಪ್ರಾದೇಶಿಕ ಆಯುಕ್ತರು ಸಲ್ಲಿಸಿದ್ದ ಪ್ರಸ್ತಾವನೆಗೆ ಸರಕಾರ ಅನುಮೋದನೆ ನೀಡಿದ್ದು, ಸಂಬಂಧಪಟ್ಟ ಇಲಾಖೆಗಳು ನೀರನ್ನು ಸಮರ್ಪಕವಾಗಿ ಬಳಸುವಂತೆ ಹಾಗೂ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
4.105 ಟಿಎಂಸಿ ನೀರು ಎಲ್ಲಿಗೆ?
ನಾರಾಯಣಪುರ ಜಲಾಶಯದಿಂದ ಬಿಡುಗಡೆಯಾಗುವ 4.105 ಟಿಎಂಸಿ ನೀರನ್ನು ಅಫಜಲಪುರ, ಕಲಬುರಗಿ ಮಹಾನಗರ ಪಾಲಿಕೆ, ಜೇವರ್ಗಿ ಹಾಗೂ ಯಡ್ರಾಮಿ ತಾಲೂಕುಗಳ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರಿಗಾಗಿ ಬಳಸಲಾಗುತ್ತದೆ. ಐಬಿಸಿ ಹಾಗೂ ಜೆಬಿಸಿ ಕಾಲುವೆಗಳ ಮೂಲಕ ನೀರು ಹರಿಸಿ, ಜನರು ಹಾಗೂ ಜಾನುವಾರುಗಳ ಕುಡಿಯುವ ನೀರಿನ ಅವಶ್ಯಕತೆ ಪೂರೈಸಲು ಸಂಬಂಧಿತ ಇಲಾಖೆಗಳಿಗೆ ಸರ್ಕಾರ ನಿರ್ದೇಶನ ನೀಡಿದೆ.
