– ತುಮಕೂರು ಡಿಸಿ ಅಮಾನತಿಗೆ ಭುವನಾ ಕುಟುಂಬಸ್ಥರಿಂದ ಆಗ್ರಹ
– ಮೃತ ವಿಎ ಭುವನಾ ಮನೆಗೆ ಡಿಸಿಎಂ ಪರಂ ಭೇಟಿ, ಸಾಂತ್ವನ.
ನೆಲಮಂಗಲ: ಕರ್ತವ್ಯದ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದುರಂತ ಅಂತ್ಯ ಕಂಡ ಗ್ರಾಮ ಆಡಳಿತಾಧಿಕಾರಿ (ಹಾಗೂ ಬಿಎಲ್‌ಒ ಸೂಪ್ರವೈಸರ್) ಭುವನಾ (VA Bhuvana) ಅವರ ನಿವಾಸಕ್ಕೆ ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ (G Parameshwar) ಅವರು ಭೇಟಿ ನೀಡಿ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ತುಮಕೂರಿನ ಗೂಳೂರಿನ ಬಳಿ ನಡೆದ ಲಾರಿ ಅಪಘಾತದಲ್ಲಿ (Accident) ವಿಎ ಭುವನಾ ಅವರು ಮೃತಪಟ್ಟಿದ್ದರು. ಈ ಹಿನ್ನೆಲೆ ನೆಲಮಂಗಲ ತಾಲೂಕಿನ ವರದನಾಯಕನಹಳ್ಳಿಯಲ್ಲಿರುವ ಭುವನಾ ಅವರ ನಿವಾಸಕ್ಕೆ ಭೇಟಿ ನೀಡಿದ ಡಿಸಿಎಂ, ಮೃತರ ತಂದೆ-ತಾಯಿ ಹಾಗೂ ಕುಟುಂಬಸ್ಥರನ್ನ ಭೇಟಿಯಾಗಿ ಧೈರ್ಯ ತುಂಬಿದರು. ಇದನ್ನೂ ಓದಿ: ಮೃತ ಭುವನಾ ಕುಟುಂಬಕ್ಕೆ 1 ಕೋಟಿ ವಿಮೆ, ಒಬ್ಬರಿಗೆ ಸರ್ಕಾರಿ ಕೆಲಸ – ಪರಮೇಶ್ವರ್ ಭರವಸೆ ಬೆನ್ನಲ್ಲೇ ಪ್ರತಿಭಟನೆ ವಾಪಸ್

ಭುವನಾ ಅವರ ಅಕಾಲಿಕ ನಿಧನದಿಂದ ಕಂಗಾಲಾಗಿರುವ ಕುಟುಂಬಸ್ಥರು, ಭುವನಾ ಸಾವಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿದ್ರಯ. ತುಮಕೂರು ಜಿಲ್ಲಾಧಿಕಾರಿಗಳನ್ನ ಕೂಡಲೇ ಅಮಾನತು ಮಾಡಬೇಕು. ನಮ್ಮ ಕುಟುಂಬಕ್ಕೆ ಆದ ಅನ್ಯಾಯ ಬೇರಾರಿಗೂ ಆಗಬಾರದು ಎಂದು ಉಪ ಮುಖ್ಯಮಂತ್ರಿಗಳಲ್ಲಿ ಕಣ್ಣೀರುಡುತ್ತಾ ಮನವಿ ಮಾಡಿಕೊಂಡರು. ಇದನ್ನೂ ಓದಿ: SIR ವಿಷಯದಲ್ಲಿ ಅಧಿಕಾರಿಗಳ ದುರ್ಬಳಕೆಗೆ ಕೋರ್ ಕಮಿಟಿ ಸಭೆ ಆಕ್ಷೇಪ – ವಿಜಯೇಂದ್ರ
ಸರ್ಕಾರದ ಭರವಸೆ
ಕುಟುಂಬದ ಅಳಲನ್ನು ಆಲಿಸಿದ ಡಿಸಿಎಂ, ʻಸರ್ಕಾರ ನಿಮ್ಮೊಂದಿಗಿದೆ. ಭುವನಾ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಹಾಗೂ ನಿಯಮಾನುಸಾರ ಸರ್ಕಾರದಿಂದ ಮೃತರ ಕುಟುಂಬಕ್ಕೆ ಸಿಗಬೇಕಾದ ಎಲ್ಲಾ ರೀತಿಯ ಪರಿಹಾರ ಮತ್ತು ಸವಲತ್ತುಗಳನ್ನು ಶೀಘ್ರದಲ್ಲೇ ಒದಗಿಸಿಕೊಡಲಾಗುವುದು, ಎಂದು ಭರವಸೆ ನೀಡಿದರು.
