ಮಲಯಾಳಂ ಚಿತ್ರರಂಗದ ಬಿಗ್ ಬಜೆಟ್ ವ್ಯಾಂಪೈರ್ ಆಕ್ಷನ್ ಥ್ರಿಲ್ಲರ್ ‘ಹಾಫ್’ ಸಿನಿಮಾವು (HALF Movie) ಜಾಗತಿಕ ಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿದೆ. ‘ಫ್ರಾಗ್ರೆಂಟ್ ನೇಚರ್ ಫಿಲ್ಮ್ ಕ್ರಿಯೇಷನ್ಸ್’ ನಿರ್ಮಿಸಿರುವ ಈ ಚಿತ್ರವು ಸೆಪ್ಟೆಂಬರ್‌ನಲ್ಲಿ ಕೆನಡಾದಲ್ಲಿ ನಡೆಯಲಿರುವ ಪ್ರತಿಷ್ಠಿತ ‘ಟೊರೊಂಟೊ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್’ನ (TIFF) ‘ನೈಟ್ ಮ್ಯಾಡ್ನೆಸ್’ ವಿಭಾಗದಲ್ಲಿ ತನ್ನ ವರ್ಲ್ಡ್ ಪ್ರೀಮಿಯರ್ ಕಾಣಲು ಅಧಿಕೃತವಾಗಿ ಆಯ್ಕೆಯಾಗಿದೆ. ಇದರ ಬೆನ್ನಲ್ಲೇ ಚಿತ್ರದ ಉತ್ತರ ಭಾರತದ ವಿತರಣೆಗಾಗಿ ಬಾಲಿವುಡ್ ಅನ್ನು ಪ್ರಸಿದ್ಧ ನಿರ್ಮಾಣ ಸಂಸ್ಥೆ ‘ಎಕ್ಸೆಲ್ ಎಂಟರ್ಟೈನ್ಮೆಂಟ್’ ಮತ್ತು ‘ಎಎ ಫಿಲ್ಮ್ಸ್’ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಮಲಯಾಳಂ ಚಿತ್ರರಂಗದ ಸಿನಿಮಾವೊಂದಕ್ಕೆ ಎಕ್ಸೆಲ್ ಎಂಟರ್ಟೈನ್ಮೆಂಟ್ ಸಾಥ್ ನೀಡುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಸಮ್ಜಾದ್ ನಿರ್ದೇಶನದ ಈ ಚಿತ್ರಕ್ಕೆ ಪ್ರವೀಣ್ ವಿಶ್ವನಾಥ್ ಮತ್ತು ಸಮ್ಜಾದ್ ಜಂಟಿಯಾಗಿ ಕಥೆ-ಚಿತ್ರಕಥೆ ಬರೆದಿದ್ದಾರೆ. ಆನ್ ಸಜೀವ್ ಹಾಗೂ ಸಜೀವ್ ಪಿ.ಕೆ. ನಿರ್ಮಿಸಿರುವ ಈ ಸಿನಿಮಾದಲ್ಲಿ ರಂಜಿತ್ ಸಜೀವ್, ಐಶ್ವರ್ಯ ರಾಜ್, ಅಬ್ಬಾಸ್ ಮತ್ತು ಅಮಲಾ ಪೌಲ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇಬ್ಬರು ಅರ್ಧ ರಕ್ತದ ರಕ್ತಪಿಶಾಚಿಗಳ ರಕ್ತದಾಸೆ, ರೋಡ್ ಆಕ್ಷನ್ ಮತ್ತು ಸೇಡಿನ ಕಥೆಯನ್ನೊಳಗೊಂಡ ಹೈ-ಕಾನ್ಸೆಪ್ಟ್ ಶೈಲಿಯಲ್ಲಿ ಈ ಸಿನಿಮಾ ಮೂಡಿಬಂದಿದೆ. 2024ರ ಹಿಟ್ ‘ಗೋಲಮ್’ ಸಿನಿಮಾದ ನಂತರ ನಿರ್ಮಾಣ ಸಂಸ್ಥೆ ಮತ್ತು ನಿರ್ದೇಶಕರ ಕ್ರಿಯೇಟಿವ್ ತಂಡ ಮತ್ತೆ ಒಂದಾಗಿರುವ ಎರಡನೇ ಚಿತ್ರ ಇದಾಗಿದೆ. ಎಕ್ಸೆಲ್ ಎಂಟರ್ಟೈನ್ಮೆಂಟ್‌ನ ರಿತೇಶ್ ಸಿಧ್ವಾನಿ ಮಾತನಾಡಿ, ವಿಭಿನ್ನ ಕಥಾಹಂದರ ಹೊಂದಿರುವ ಸಿನಿಮಾಗಳು ನನಗೆ ಯಾವಾಗಲೂ ಕುತೂಹಲ ಮೂಡಿಸುತ್ತವೆ. ‘ಹಾಫ್’ ಸಿನಿಮಾವನ್ನು ಮೊದಲ ಬಾರಿ ನೋಡಿದ ತಕ್ಷಣವೇ ಅದರ ವಿಶಿಷ್ಟ ಚಿತ್ರಕಥೆ ಮತ್ತು ಬಲವಾದ ಸೃಜನಶೀಲ ದೃಷ್ಟಿಕೋನ ನನ್ನ ಗಮನ ಸೆಳೆಯಿತು. ಈ ಚಿತ್ರಮಂದಿರಗಳ ಪ್ರಯಾಣಕ್ಕೆ ಬೆಂಬಲ ನೀಡಲು ನಮಗೆ ಹೆಮ್ಮೆಯಿದೆ ಎಂದು ಹೇಳಿದ್ದಾರೆ. ಎಕ್ಸೆಲ್ ಎಂಟರ್ಟೈನ್ಮೆಂಟ್‌ನ ಫರ್ಹಾನ್ ಅಖ್ತರ್ ಅವರು, ಸಮ್ಜಾದ್ ಅವರ ಚಿತ್ರಕಥೆ ಪ್ರಸ್ತುತಪಡಿಸುವ ಶೈಲಿಯಲ್ಲಿ ತೀವ್ರತೆ ಮತ್ತು ರೋಮಾಂಚನವಿದೆ. ಪ್ರೇಕ್ಷಕರನ್ನು ಕಟ್ಟಿಹಾಕುವಂತಹ ಸಾಮರ್ಥ್ಯ ಈ ಚಿತ್ರಕ್ಕಿದ್ದು, ಇದನ್ನು ಪ್ರೇಕ್ಷಕರ ಬಳಿಗೆ ಕೊಂಡೊಯ್ಯುತ್ತಿರುವುದಕ್ಕೆ ಸಂತೋಷವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಂತೋಷ್ ಬಾಲರಾಜ್ ಬೆಂಟ್ಲಿ ಟ್ರೇಲರ್ ರಿಲೀಸ್
‘ದಿ ರೈಡ್ 2’ ಮತ್ತು ‘ದಿ ನೈಟ್ ಕಮ್ಸ್ ಫಾರ್ ಅಸ್’ ಖ್ಯಾತಿಯ ಅಂತರರಾಷ್ಟ್ರೀಯ ಸಾಹಸ ನಿರ್ದೇಶಕ ವೆರಿ ಟ್ರಿ ಯುಲಿಸ್ಮನ್ ಈ ಚಿತ್ರಕ್ಕೆ ಆಕ್ಷನ್ ಕೊರಿಯೋಗ್ರಫಿ ಮಾಡಿದ್ದಾರೆ. ನಟರಾದ ರಂಜಿತ್ ಸಜೀವ್ ಮತ್ತು ಐಶ್ವರ್ಯ ರಾಜ್ ಅವರಿಗೆ ಹಲವು ತಿಂಗಳು ತರಬೇತಿ ನೀಡಿ ಡೂಪ್ ಇಲ್ಲದೆ ಸಾಹಸ ದೃಶ್ಯಗಳಲ್ಲಿ ನಟಿಸುವಂತೆ ಮಾಡಲಾಗಿದೆ. ಸಾಮಾನ್ಯವಾಗಿ ಭಾರತೀಯ ಆಕ್ಷನ್ ಸಿನಿಮಾಗಳಲ್ಲಿ ಕಂಡುಬರುವ ಯಾವುದೇ ಸ್ಲೋ-ಮೋಷನ್ ದೃಶ್ಯಗಳು ಈ ಸಿನಿಮಾದಲ್ಲಿ ಇರುವುದಿಲ್ಲ ಎನ್ನುವುದು ಈ ಚಿತ್ರದ ಪ್ರಮುಖ ವಿಶೇಷತೆಯಾಗಿದೆ. ಚಿತ್ರದ ದೃಶ್ಯ ವೈಭವಕ್ಕಾಗಿ ರಾಜಸ್ಥಾನದ ಮರುಭೂಮಿ, ಕೇರಳದ ಗಿರಿಧಾಮಗಳು ಹಾಗೂ ಕಝಕಿಸ್ತಾನ್‌ನ ಹಿಮಾವೃತ ಪ್ರದೇಶಗಳಲ್ಲಿ ಸುಮಾರು 117 ದಿನಗಳ ಕಾಲ ಸುದೀರ್ಘ ಚಿತ್ರೀಕರಣ ನಡೆಸಲಾಗಿದೆ. ಸಂಕಲನವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ಮಹೇಶ್ ಭುವನೆಂದ್ ಮಾಡಿದ್ದರೆ, ಕಲಾ ನಿರ್ದೇಶನವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ಮೋಹನ್ದಾಸ್ ನಿಭಾಯಿಸಿದ್ದಾರೆ. ಶಬ್ದ ವಿನ್ಯಾಸವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ವಿಷ್ಣು ಗೋವಿಂದ್ ಮಾಡಿದ್ದು, ಸಂಗೀತವನ್ನು ಮಿಥುನ್ ಮುಕುಂದನ್ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ‘ಹಾಫ್’, ಕನ್ನಡ, ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಭಾರತೀಯ ಹಾಗೂ ಅಂತರರಾಷ್ಟ್ರೀಯ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಚಿತ್ರತಂಡ ಪ್ರಕಟಿಸಲಿದೆ.



