ಭಾಗ -1: ಶಾಂತಿಕ್ರಾಂತಿ ಮರು ಬಿಡುಗಡೆಗೆ ಹಲವು ವಿಘ್ನ – ಮೇಕಿಂಗ್ ಹಿಂದಿದೆ ಕರಾಳ ಕಥೆ
ಕನ್ನಡ ಚಿತ್ರೋದ್ಯಮವೇ ಹೆಮ್ಮೆ ಪಡುವಂಥ ಚಿತ್ರಕ್ಕೆ ಮುಂದಾಗಿದ್ದರು ರವಿಚಂದ್ರನ್. ಶಾಂತಿ ಮತ್ತು ಕ್ರಾಂತಿಯ ಎರಡೂ ರೂಪವನ್ನ ತೋರಿಸಲು ಹೊರಟಿದ್ದರು. ಆದರೆ, ಸಿನಿಮಾವನ್ನ ಪ್ರೇಕ್ಷಕರು ಒಪ್ಪಿಕೊಳ್ಳಲಿಲ್ಲ. ಈ ಸೋಲನ್ನು ಕೇವಲ ಪ್ರೇಕ್ಷಕರ ಮೇಲಷ್ಟೇ ಹೊರೆಸೋದು ಸರಿನೂ ಅಲ್ಲ. ಸ್ವತಃ ಸಿನಿಮಾ ರಂಗದವರೇ ಈ ಚಿತ್ರವನ್ನ ಮುಗಿಸೋಕೆ ಪ್ಲ್ಯಾನ್ ಮಾಡಿದ್ದರು. ಹೆಜ್ಜೆ ಹೆಜ್ಜೆಗೂ ರವಿಚಂದ್ರನ್ ಅವರಿಗೆ ತೊಂದರೆ ಕೊಡುತ್ತಿದ್ದರು. ಹಾಗಾದರೆ, ಈ ಸೋಲಿನ ಹೊಣೆಯನ್ನ ಹೊರೋದು ಯಾರು..? ಸದ್ಯ ರೀರಿಲೀಸ್ ಅಂತಿರೋ ಪ್ರೇಕ್ಷಕರು ರವಿಚಂದ್ರನ್ ಅವರನ್ನ ಕೈ ಹಿಡೀತಾರಾ? ಇಂತಹ ಪ್ರಶ್ನೆಗಳು ಹಲವರನ್ನು ಕಾಡುತ್ತಿವೆ.


ರವಿಚಂದ್ರನ್ ಅವರ ವೃತ್ತಿ ಜೀವನದ ಅತ್ಯಂತ ದುಬಾರಿ ಸಿನಿಮಾ ಶಾಂತಿ ಕ್ರಾಂತಿ. ಈ ಸಿನಿಮಾದಿಂದ ಅವರಿಗಾದ ಲಾಸ್ ಅನ್ನು ಭರಿಸೋಕೆ ಅವರು ಹಲವಾರು ವರ್ಷಗಳ ಕಾಲ ಒದ್ದಾಡಬೇಕಾಯಿತು. ಆದರೂ, ಕನ್ನಡಕ್ಕೊಂದು ಹೆಮ್ಮೆ ತರಬಲ್ಲಂತ ಸಿನಿಮಾ ಕನಸನ್ನು ಅವರು ಕಂಡಿದ್ದರು. ತಮಿಳು ಸಿನಿಮಾದ ಹೊರತಾಗಿ ಇತರ ಮೂರು ಭಾಷೆಗಳ ಚಿತ್ರಕ್ಕೂ ಅವರು ಶಾಂತಿ ಕ್ರಾಂತಿ ಎಂದೇ ಹೆಸರಿಟ್ಟಿದ್ದರು. ಅಷ್ಟರ ಮಟ್ಟಿಗೆ ಪಕ್ಕಾ ಪ್ಲ್ಯಾನ್ ಮಾಡಿಕೊಂಡು ಮೇಕಿಂಗ್‌ಗೆ ಇಳಿದಿದ್ದರು. ರಜನಿಕಾಂತ್, ನಾಗಾರ್ಜುನ್ ರೀತಿಯ ಸ್ಟಾರ್‌ಗಳು ಇದ್ದ ಮೇಲೆ ಬಜೆಟ್‌ಗೆ ಲೆಕ್ಕ ಹಾಕಬಾರದು ಅನ್ನೋದು ಅವರ ಮೊದಲ ಉದ್ದೇಶವಾಗಿತ್ತು. ಇಂತಹ ಹುಂಬುತನವೇ ಅವರನ್ನ ಹಾನಿಯ ಸುಳಿಗೆ ಸಿಲುಕಿಸಿತ್ತು.

ರವಿಚಂದ್ರನ್ ಅವರು ಎಷ್ಟು ದುಬಾರಿಯ ಕನಸು ಕಂಡಿದ್ದರು ಅಂದರೆ, ಈ ಸಿನಿಮಾದಲ್ಲಿ ಮಧ್ಯರಾತ್ರಿಲೀ ಹೈವೇ ರಸ್ತೆಲಿ.. ಅನ್ನುವ ಹಾಡೊಂದು ಬರುತ್ತದೆ. ಬರೋಬ್ಬರಿ ಎಂಟು ನಿಮಿಷಗಳ ಹಾಡದು. ಈ ಗೀತೆಯನ್ನು ಚಿತ್ರೀಕರಣ ಮಾಡಿದ್ದು, ಬೆಂಗಳೂರಿನ ಪ್ರತಿಷ್ಠಿತ ಎಂಜಿ ರಸ್ತೆಯಲ್ಲಿ. ಇಡೀ ರೋಡಿಗೆ ಆಗಿನ ಕಾಲಕ್ಕೆ ಐದು ಲಕ್ಷ ರೂಪಾಯಿ ಖರ್ಚು ಮಾಡಿ ನೀರು ಸುರಿಸಿದ್ದರು. ಒಂದು ಟ್ಯಾಂಕ್ ನೀರು ಕೂಡ ಕಮ್ಮಿ ಆಗಬಾರದು, ಅವನು ಏನು ಕೇಳ್ತಾನೆ, ಅದನ್ನು ಕೊಡಿ ಅಂತ ಪ್ರೊಡಕ್ಷನ್ ಅವರಿಗೆ ಸ್ವತಃ ವೀರಸ್ವಾಮಿ ಅವರೇ ಹೇಳಿದ್ದರಂತೆ. ಜೊತೆಗೆ ಅವತ್ತಿದ್ದ ಸೌಲಭ್ಯಗಳಲ್ಲಿ 25 ಕ್ಯಾಮೆರಾ ಇಟ್ಟುಕೊಂಡು ಶಾಂತಿ ಕ್ರಾಂತಿ ಸಿನಿಮಾದ ಕ್ಲೈಮ್ಯಾಕ್ಸ್ ಶೂಟ್ ಮಾಡಿದರು ರವಿಚಂದ್ರನ್. ಕ್ಲೈಮ್ಯಾಕ್ಸ್ ಚಿತ್ರೀಕರಣ ಮಾಡುವುದಕ್ಕಾಗಿಯೇ ಬರೋಬ್ಬರಿ ಐವತ್ತು ಎಕರೆ ಜಾಗದಲ್ಲಿ ಸೆಟ್ ಹಾಕಲಾಗಿತ್ತು.
ಇಷ್ಟೆಲ್ಲ ಖರ್ಚು ಮಾಡಿ ಸಿನಿಮಾದ ಚಿತ್ರೀಕರಣ ಮಾಡುವಾಗ ಅನೇಕ ಅಡೆತಡೆಗಳನ್ನು ರವಿಚಂದ್ರನ್ ಎದುರಿಸಿದ್ದಾರೆ. ಸಡನ್ನಾಗಿ ರವಿಚಂದ್ರನ್ ಮೇಲೆ ಆರೋಪ ಹೊರಿಸಿ ಚಿತ್ರೀಕರಣಕ್ಕೆ ತೊಂದರೆ ಮಾಡಿದವರು ಇದ್ದಾರೆ. ಚಿತ್ರೋದ್ಯಮ ಬಂದ್ ಹೆಸರಿನಲ್ಲಿ ಬೇಕು ಅಂತಾನೇ ಕಿರುಕುಳ ಕೊಟ್ಟವರು ಇದ್ದಾರೆ. `ನಮ್ಮ ಸಿನಿಮಾಕ್ಕೆ ಒಂದು ದಿನ ತೊಂದರೆ ಕೊಟ್ಟುಬಿಟ್ಟರೆ ಸಾಕು, ಸಿನಿಮಾ ಒಂದು ವರ್ಷ ತಡವಾಗಿಬಿಡುತ್ತಿತ್ತು. ನಾನು ಮತ್ತೆ ರಜನೀಕಾಂತ್, ನಾಗಾರ್ಜುನ, ಜೂಹಿ ಚಾವ್ಲಾ ಇವರುಗಳ ಡೇಟ್ಸ್‌ಗಳನ್ನೆಲ್ಲ ತೆಗೆದುಕೊಂಡು ಮತ್ತೆ ಚಿತ್ರೀಕರಣ ಮಾಡಬೇಕಿತ್ತು. ಇಂಡಸ್ಟ್ರಿಯವರಿಂದ ಅನುಭವಿಸಿದ ಆ ಸಿನಿಮಾಕ್ಕೆ ಅನುಭವಿಸಿದ ಕಷ್ಟ-ಅಷ್ಟಿಷ್ಟಲ್ಲ. ಪ್ರತಿ ಹೆಜ್ಜೆಯಲ್ಲೂ ಅಸಹಕಾರ ಮಾಡಿದರು’ ಅಂತ ಸ್ವತಃ ರವಿಚಂದ್ರನ್ ಅವರೇ ಅನೇಕ ಸಂದರ್ಭಗಳಲ್ಲಿ ಹೇಳಿದ್ದೂ ಇದೆ.

ದುಬಾರಿ ವೆಚ್ಚದಲ್ಲಿ ಸಿನಿಮಾ ಮಾಡಿದ್ದ ರವಿಚಂದ್ರನ್, ಈ ಸಿನಿಮಾದ ಟಿಕೆಟ್ ದರ ಹೆಚ್ಚಳಕ್ಕೆ ಮನವಿ ಮಾಡಿಕೊಂಡರು. ಸಿನಿಮಾದ ಟಿಕೆಟ್ ಅನ್ನು ಮೂರು ರುಪಾಯಿ ಹೆಚ್ಚು ಮಾಡಿ ಐದು ರೂಪಾಯಿ ಟಿಕೆಟ್‌ಗೆ ಮಾರುತ್ತೇನೆ ಎಂದು ಚಿತ್ರೋದ್ಯಮವನ್ನ ಕೇಳಿಕೊಂಡರು. ಆದರೆ ಯಾರೂ ಒಪ್ಪಲಿಲ್ಲ. ಅಂದು ಅವರು ಒಪ್ಪಿದ್ದಿದ್ದರೆ, ಶಾಂತಿ-ಕ್ರಾಂತಿ ಸಿನಿಮಾದ ಸಾಲವನ್ನ ಇನ್ನೊಂದು 5 ವರ್ಷ ಬೇಗ ತೀರಿಸುತ್ತಿದ್ದರಂತೆ ರವಿಚಂದ್ರನ್. ಸಿನಿಮಾ ನಷ್ಟ ಒಂದು ಕಡೆಯಾದರೆ, ಆಗಿರುವ ಅವಮಾನ ಅದಕ್ಕಿಂತ ದೊಡ್ಡದು. ಹಾಗಿರುವಾಗ ಶಾಂತಿಕ್ರಾಂತಿ ರೀರಿಲೀಸ್ ಮಾಡಿ, ಪ್ರೇಕ್ಷಕರು ಚಿತ್ರವನ್ನ ಗೆಲ್ಲಿಸಿದರೆ ಖಂಡಿತಾ ರವಿಚಂದ್ರನ್ ಖುಷಿ ಪಡುತ್ತಾರೆ. ಆದರೆ, ಸಿನಿಮಾದ ನೆಗೆಟಿವ್ ಇಲ್ಲ ಅನ್ನುವ ಮಾಹಿತಿ ಇದೆ. ನೆಗೆಟಿವ್ ಇಲ್ಲದೇ ಇರುವ ಕಾರಣದಿಂದಾಗಿ ಸದ್ಯ ಲಭ್ಯ ಇರುವ ಸಿನಿಮಾವನ್ನ ಅಪ್ ಗ್ರೇಡ್ ಮಾಡಿಸಿ, ಬಿಡುಗಡೆ ಮಾಡೋದು ಕಷ್ಟಸಾಧ್ಯ.

ಸಿನಿಮಾದ ನೆಗೆಟಿವ್ ಇಲ್ಲದ ಕಾರಣ, ಲಭ್ಯ ಇರುವ ವಿಡಿಯೋವನ್ನೇ ಬಳಸಿಕೊಂಡು ಥಿಯೇಟರ್ ಪ್ರಿಂಟ್‌ಗೆ ಬದಲಾಯಿಸೋಕೆ ಕೋಟಿ ಕೋಟಿ ಹಣಬೇಕು. ಜೊತೆಗೆ ಸಾಕಷ್ಟು ಸಮಯವೇ ಬೇಕಾಗುತ್ತದೆ. ಆ ತಾಳ್ಮೆಯನ್ನು ತಗೆದುಕೊಂಡು ಮಾಡೋರು ಯಾರು? ರವಿಚಂದ್ರನ್ ಪುತ್ರ ವಿಕ್ರಮ್ ಈ ದೆಸೆಯಲ್ಲಿ ಹೆಜ್ಜೆ ಇಟ್ಟಿದ್ದಾರೆ ಅನ್ನೋ ಮಾಹಿತಿ ಇದೆ. ಏನೇ ಆದರೂ, ಸದ್ಯಕ್ಕಂತೂ ಸಿನಿಮಾ ಬಿಡುಗಡೆ ಆಗೋದು ಅನುಮಾನ.
ಒಂದು ವೇಳೆ ಬಂದರೂ, ಪ್ರೇಕ್ಷಕರು ಕೈ ಹಿಡಿತಾರಾ? ಅನ್ನೋದು ಮತ್ತೊಂದು ಅನುಮಾನ. ಕ್ರೇಜ್‌ಗಳು ಯಾವಾಗಲೂ ಪೂರ್ಣ ಸಮಯದಲ್ಲಿ ನಿಂತುಕೊಳ್ಳಲ್ಲ. ಸದ್ಯಕ್ಕಿರುವ ಕ್ರೇಜ್ ಇನ್ನಷ್ಟು ತಿಂಗಳು ಇದ್ದರೆ, ಬಚಾವ್ ಇಲ್ಲದೇ ಇದ್ದರೆ ಮತ್ತೆ ಶಾಂತಿಕ್ರಾಂತಿ ರವಿಚಂದ್ರನ್ ಪಾಲಿಗೆ ಕರಾಳ ಕನಸಾಗಲಿದೆ.

