ತುಮಕೂರು: ಮೃತ ವಿಎ ಭುವನಾ (VA Bhuvana) ಕುಟುಂಬಕ್ಕೆ 1 ಕೋಟಿ ವಿಮೆ ಹಣ 15 ದಿನಗಳಲ್ಲಿ ಬರುತ್ತದೆ. ಅಲ್ಲದೇ ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರ ಉದ್ಯೋಗ ಕೊಡುತ್ತೇವೆ. ಚುನಾವಣಾ ಆಯೋಗದಿಂದ 30 ಲಕ್ಷ ರೂ. ಮಂಜೂರು ಮಾಡಿಸುತ್ತೇವೆ ಎಂದು ಕಂದಾಯ ಸಚಿವರೂ ಆದ ಡಿಸಿಎಂ ಪರಮೇಶ್ವರ್ (G Parameshwar) ಭರವಸೆ ನೀಡಿದರು.
ತುಮಕೂರಿನಲ್ಲಿ (Tumakuru) ವಿಎ ಭುವನಾ ಸಾವು ಖಂಡಿಸಿ ಕಂದಾಯ ನೌಕರರ ಸಂಘದಿಂದ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಡಿಸಿಎಂ ಶೀಘ್ರದಲ್ಲೇ ಪರಿಹಾರ ಕೊಡಿಸುವ ಹಾಗೂ ನೌಕರರ ಬೇಡಿಕೆ ಈಡೇರಿಸುವ ಭರವಸೆ ನೀಡಿದರು.

ಭುವನಾ ಕುಟುಂಬಕ್ಕೆ 1 ಕೋಟಿ ವಿಮೆ ಹಣ 15 ದಿನಗಳಲ್ಲಿ ಬರುತ್ತದೆ. ಅಲ್ಲದೇ ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ಕೊಡುತ್ತೇವೆ. ಚುನಾವಣಾ ಆಯೋಗದಿಂದ 30 ಲಕ್ಷ ರೂ. ಮಂಜೂರು ಮಾಡಿಸುತ್ತೇವೆ. ದಯಮಾಡಿ ಪ್ರತಿಭಟನೆ ವಾಪಸ್ ಪಡೆದುಕೊಳ್ಳುವಂತೆ ಮನವಿ ಮಾಡದರು. ಈ ಬೆನ್ನಲ್ಲೇ ನೌಕರರ ಸಂಘವು ಪ್ರತಿಭಟನೆ ಹಿಂಪಡೆದುಕೊಂಡಿದೆ.
ಎಸ್‌ಐಆರ್ ಭೂತ ನಮ್ಮ ಮುಂದಿದೆ
ಇದಕ್ಕೂ ಮುನ್ನ ಮಾತನಾಡಿದ ಸಚಿವರು, ಮೃತರ ಆತ್ಮಕ್ಕೆ ಶಾಂತಿ ಕೋರಿದರು. ಘಟನೆಯನ್ನು ಬೇರೆ ಬೇರೆ ರೀತಿಯಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ. ನಾನು ತಕ್ಷಣ ಸ್ಪಂದಿಸಲು ಆಗದಿದ್ದಕ್ಕೆ ಕ್ಷಮೆ ಕೋರುತ್ತೇನೆ. ನನ್ನ ಆರೋಗ್ಯದಲ್ಲಿ ವ್ಯತ್ಯಾಸ ಆಗಿತ್ತು, ಹಾಗಾಗಿ ಬರಲು ಆಗಿರಲಿಲ್ಲ. ನಿಮ್ಮನ್ನು ನಿರ್ಲಕ್ಷ್ಯ ಮಾಡಲು ನಾನು ಬಿಡಲ್ಲ. 8 ವರ್ಷದಿಂದ ಗ್ರೇಡ್-2 ತಹಶಿಲ್ದಾರ್‌ಗೆ ಬಡ್ತಿ ಆಗಿರಲಿಲ್ಲ. ನಾನು ಬಂದ ಒಂದೇ ವಾರದಲ್ಲಿ ಆ ಪ್ರಕ್ರಿಯೆ ಆರಂಭಿಸಿದ್ದೇನೆ. ನಾನು ನೌಕರರ ಪರವಾಗಿ ಇದ್ದವನು, ಅದು ನನ್ನ ಜವಾಬ್ದಾರಿ. ಹಾಗಾಗಿ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಎಸ್‌ಐಆರ್ ಭೂತ ನಮ್ಮ ಮುಂದೆ ಇದೆ. ಆ ಭೂತ ನಮ್ಮ ಮುಂದೆ ತಂದು ಇಟ್ಟಿದ್ದಾರೆ. 2 ತಿಂಗಳು ಸಮಯಾವಕಾಶ ಕೊಡಬಹುದಿತ್ತು. 1 ತಿಂಗಳು ಕೊಟ್ಟು ಭಯದ ವಾತಾವರಣ ತಂದಿಟ್ಟಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
