ಚಿಕ್ಕಬಳ್ಳಾಪುರ: ಡಿಲಿಮಿಟೇಷನ್ (ಕ್ಷೇತ್ರ ಪುನರ್‌ವಿಂಗಡಣೆ), ಜನಪ್ರತಿನಿಧಿಗಳ ಅನರ್ಹತೆ ಹಾಗೂ ʻಒಂದು ರಾಷ್ಟ್ರ–ಒಂದು ಚುನಾವಣೆ’ (One Nation, One Election) ಸೇರಿದಂತೆ ಹಲವು ಮಸೂದೆಗಳ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಬಳಿ 14 ಅಡಿ ಎತ್ತರದ ಅಂಬೇಡ್ಕರ್ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ವೇಳೆ, ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ವಿರೋಧ ಪಕ್ಷಗಳ ಚರ್ಚೆಗೆ ಸರಿಯಾದ ಕಾಲಾವಕಾಶ ನೀಡುತ್ತಿಲ್ಲ. ಈ ಬಾರಿಯ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಮೂರು ಪ್ರಮುಖ ಮಸೂದೆಗಳನ್ನು ತರಲು ಮುಂದಾಗಿದೆ. ಡಿಲಿಮಿಟೇಷನ್ (Delimitation) ಮಸೂದೆಯ ಮೂಲಕ ವಿಧಾನಸಭಾ ಕ್ಷೇತ್ರಗಳನ್ನು ತಮಗೆ ಅನುಕೂಲವಾಗುವಂತೆ ಮರು ವಿಂಗಡಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಬೇರೆ ರಾಜ್ಯದ ಅಧಿಕಾರಿಗಳಿಂದ ಎಸ್‌ಐಆರ್ ಮಾಡಿಸಲಿ: ಆರ್.ಅಶೋಕ್ ಆಗ್ರಹ
ಅಸ್ಸಾಂನಲ್ಲಿ ಈಗಾಗಲೇ ಇದೇ ಮಾದರಿಯ ಕ್ರಮಕೈಗೊಳ್ಳಲಾಗಿತ್ತು. ಅದನ್ನು ದೇಶಾದ್ಯಂತ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಕ್ಷೇತ್ರಗಳ ಮರು ವಿಂಗಡಣೆಯಿಂದ ಯಾರ ಕ್ಷೇತ್ರ ಉಳಿಯಲಿದೆ? ಯಾರ ಕ್ಷೇತ್ರ ಬದಲಾಗಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದರು.
ಅಧಿಕಾರದಲ್ಲಿ ಮುಂದುವರಿಯುವ ಉದ್ದೇಶದಿಂದಲೇ ಈ ಮಸೂದೆಗಳನ್ನು ತರಲಾಗುತ್ತಿದೆ. ಸಚಿವರು ಅಥವಾ ಜನಪ್ರತಿನಿಧಿಗಳು 30 ದಿನ ಜೈಲಿನಲ್ಲಿದ್ದರೂ ಅನರ್ಹಗೊಳಿಸುವ ಕಾನೂನು ತರಲು ಸರ್ಕಾರ ಯೋಚಿಸುತ್ತಿದೆ. ಅನರ್ಹತೆ ಮಾಡಬೇಕಾದರೆ ಕನಿಷ್ಠ ಐದು ವರ್ಷ ಶಿಕ್ಷೆಯಾಗುವ ಪ್ರಕರಣಗಳಲ್ಲಿ ಮಾತ್ರ ಅನ್ವಯಿಸಬೇಕು ಎಂದು ಅಭಿಪ್ರಾಯಪಟ್ಟರು. ಇನ್ನೂ ‘ಒಂದು ರಾಷ್ಟ್ರ–ಒಂದು ಚುನಾವಣೆ’ ಮಸೂದೆಯನ್ನೂ ತರಬಹುದಾದ ಸಾಧ್ಯತೆ ಇದೆ ಎಂದರು.
ಜು.20 ರಂದು ಸಂಸತ್ ಅಧಿವೇಶನ ಆರಂಭವಾಗಲಿದೆ. ಎಲ್ಲ ರಾಜಕೀಯ ಪಕ್ಷಗಳು ಜನರು ಸಹ ಒಗ್ಗಟ್ಟಾಗಿ ಸಂವಿಧಾನವನ್ನು ಕಾಪಾಡಬೇಕು. ಇಂತಹ ಪಕ್ಷಗಳಿಗೆ ಬೆಂಬಲಿಸಬಾರದು ಎಂದು ಕರೆ ನೀಡಿದರು. ಇದನ್ನೂ ಓದಿ: ಎಸ್‌ಐಆರ್‌ನಲ್ಲಿ ರಾಜ್ಯ ಸರ್ಕಾರದ ಯಾವುದೇ ಪಾತ್ರ ಇಲ್ಲ: ವಿಪಕ್ಷಗಳ ಆರೋಪಕ್ಕೆ ಯು.ಟಿ.ಖಾದರ್ ಗರಂ
