ಬೆಂಗಳೂರು: ನಗರದಲ್ಲಿ ಮತ್ತೊಂದು ಬಿಎಂಟಿಸಿ (BMTC) ಬಸ್ ಅಪಘಾತ ಸಂಭವಿಸಿದೆ. ಲಗ್ಗೆರೆ ಸೇತುವೆ(Laggere Bridge) ಸಮೀಪ, ಗೊರಗುಂಟೆಪಾಳ್ಯ ಕಡೆಗೆ ಹೋಗುವ ಮಾರ್ಗದಲ್ಲಿ ಎರಡು ಬಿಎಂಟಿಸಿ ಬಸ್‌ಗಳ ನಡುವೆ ಭೀಕರ ಡಿಕ್ಕಿಯಾಗಿದ್ದು, ಮೂವರು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಬಿಎಂಟಿಸಿ ಸಾಮಾನ್ಯ ಬಸ್ ಮುಂದೆ ಚಲಿಸುತ್ತಿದ್ದ ಕಾರು ಚಾಲಕನೊಬ್ಬ ಹಠಾತ್ತನೆ ಬ್ರೇಕ್ ಹಾಕಿದ್ದಾನೆ. ಈ ವೇಳೆ ಬಸ್ ಚಾಲಕ ಕೂಡ ತಕ್ಷಣವೇ ಬ್ರೇಕ್ ತುಳಿದಿದ್ದಾನೆ. ಅದೇ ಸಮಯದಲ್ಲಿ ಹಿಂಬದಿಯಿಂದ ಓವರ್‌ಟೇಕ್ ಮಾಡಲು ವೇಗವಾಗಿ ಬಂದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್, ಮುಂಭಾಗದಲ್ಲಿದ್ದ ಸಾಮಾನ್ಯ ಬಸ್ಸಿಗೆ ಜೋರಾಗಿ ಡಿಕ್ಕಿ ಹೊಡೆದಿದೆ ಎನ್ನಲಾಗುತ್ತಿದೆ. ಇದನ್ನೂಓದಿ: ಚಿನ್ನ, ನಗದು ದೋಚಿ ಮಹಿಳೆಯನ್ನು ಬಾವಿಗೆ ತಳ್ಳಿದ ದುಷ್ಕರ್ಮಿ – 21 ಗಂಟೆ ಬಳಿಕ ರಕ್ಷಣೆ
ಈ ಅಪಘಾತದ ತೀವ್ರತೆಗೆ ಬಸ್‌ನಲ್ಲಿದ್ದ ಮೂವರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಒಬ್ಬ ಪ್ರಯಾಣಿಕನ ತಲೆಗೆ ತೀವ್ರ ಸ್ವರೂಪದ ಪೆಟ್ಟು ಬಿದ್ದಿದೆ. ಮತ್ತೊಬ್ಬ ಪ್ರಯಾಣಿಕನ ಹಣೆಯ ಭಾಗಕ್ಕೆ ಬಲವಾದ ಗಾಯವಾಗಿದೆ.
ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಮತ್ತು ಸಹ ಪ್ರಯಾಣಿಕರು ತಕ್ಷಣವೇ ಕಾರ್ಯಪ್ರವೃತ್ತರಾಗಿ, ಗಾಯಾಳುಗಳನ್ನು ಹತ್ತಿರದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
