– ಆನ್‌ಲೈನ್ ಜೂಜಿಗೆ ದಾಸನಾಗಿದ್ದ ಯುವಕನಿಂದ ಕೃತ್ಯ
ಹೈದರಾಬಾದ್: ದುಷ್ಕರ್ಮಿಯೊಬ್ಬ 55 ವರ್ಷದ ಮಹಿಳೆಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಆಕೆಯ ಬಳಿ ಇದ್ದ ಚಿನ್ನ (Gold) ಹಾಗೂ ಹಣ ದೋಚಿ ಬಾವಿಗೆ ತಳ್ಳಿ ತಳ್ಳಿ ಪರಾರಿಯಾದ ಘಟನೆ ತೆಲಂಗಾಣದ (Telangana) ಕರೀಂನಗರ ಜಿಲ್ಲೆಯಲ್ಲಿ ನಡೆದಿದೆ.
ಸುಮಾರು 21 ಗಂಟೆಗಳ ಕಾಲ ಬಾವಿಯಲ್ಲಿ ಸಾವು ಬದುಕಿನ ನಡುವೆ ಹೋರಾಡಿದ್ದ ಮಹಿಳೆಯನ್ನು ಸ್ಥಳೀಯರು ರಕ್ಷಿಸಿದ್ದಾರೆ. ಕರೀಂನಗರ ಜಿಲ್ಲೆಯ ದಿನಗೂಲಿ ಕಾರ್ಮಿಕಳಾಗಿದ್ದ ತಂಗರಾಳ ಲಕ್ಷ್ಮಿ (55) ಜುಲೈ 1ರಂದು ಕೆಲಸಕ್ಕೆ ತೆರಳಿದ್ದರು. ಆದರೆ ಮನೆಗೆ ವಾಪಸ್ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರ ಪುತ್ರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದ. ಆರಂಭದಲ್ಲಿ ಇದು ಸಾಮಾನ್ಯ ನಾಪತ್ತೆ ಪ್ರಕರಣವೆಂದು ಪೊಲೀಸರು ತನಿಖೆ ಆರಂಭಿಸಿದ್ದರು. ಇದನ್ನೂ ಓದಿ: ಭುವನಾಗೆ ಮದುವೆ ಮಾಡೋಕೆ ಹುಡುಗನ ಹುಡುಕುತ್ತಿದ್ದೆವು, ಈಗ ಅವಳೇ ಇಲ್ಲ: ದೊಡ್ಡಮ್ಮ ಕಣ್ಣೀರು
ಮರುದಿನ ಬೆಳಿಗ್ಗೆ ನುಸ್ತುಲಾಪುರ ಗ್ರಾಮದ ಹೊರವಲಯದಲ್ಲಿರುವ ಕೃಷಿ ಬಾವಿಯಿಂದ ಮಹಿಳೆಯೊಬ್ಬಳನ್ನು ರಕ್ಷಿಸಿರುವ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಈ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ.

ಮಹಿಳೆ ನೀಡಿದ ಹೇಳಿಕೆ ಪ್ರಕಾರ, ಅಪರಿಚಿತ ಯುವಕನೊಬ್ಬ ತನ್ನ ಜಮೀನಿನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಮೊದಲು ರ‍್ಯಾಪಿಡೋ ಬೈಕ್ ಮೂಲಕ ತಿಮ್ಮಾಪುರದ ಕಡೆಗೆ ಕರೆದೊಯ್ದಿದ್ದಾನೆ. ಬಳಿಕ ಜನ ಸಂಚಾರ ಹಾಗೂ ಸಿಸಿಟಿವಿ ಕ್ಯಾಮೆರಾಗಳಿರುವುದನ್ನು ಗಮನಿಸಿದ ಆತ, ತನ್ನದೇ ಬೈಕ್‌ನಲ್ಲಿ ನುಸ್ತುಲಾಪುರ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ.
ಬಳಿಕ ಮಹಿಳೆಗೆ ಜೀವ ಬೆದರಿಕೆ ಹಾಕಿ ಸುಮಾರು 5 ಗ್ರಾಂ ಚಿನ್ನದ ಆಭರಣ, 20 ಗ್ರಾಂ ಬೆಳ್ಳಿಯ ಕಾಲುಂಗುರ ಹಾಗೂ ನಗದು ದರೋಡೆ ಮಾಡಿದ್ದಾನೆ. ದರೋಡೆ ಬಳಿಕ ಮಹಿಳೆ ಬದುಕಿದ್ದರೆ ತನ್ನನ್ನು ಗುರುತಿಸುವ ಸಾಧ್ಯತೆ ಇದೆ ಎಂದು ಭಾವಿಸಿ, ಆಕೆಯನ್ನು ಸಮೀಪದ ಕೃಷಿ ಬಾವಿಗೆ ತಳ್ಳಿದ್ದಾನೆ.
ಬಾವಿಗೆ ಬಿದ್ದ ಬಳಿಕ ಲಕ್ಷ್ಮಿ ಅಲ್ಲಿದ್ದ ಹಗ್ಗವನ್ನು ಹಿಡಿದು ಜೀವ ಉಳಿಸಿಕೊಳ್ಳಲು ಯತ್ನಿಸಿದ್ದರು. ಆದರೆ ಇದನ್ನು ಗಮನಿಸಿದ ಆರೋಪಿ, ಹಗ್ಗವನ್ನೇ ಕತ್ತರಿಸಿ ಮಹಿಳೆ ಬದುಕುಳಿಯದಂತೆ ಮಾಡಲು ಯತ್ನಿಸಿದ್ದಾನೆ. ಈಜು ಬಲ್ಲ ಲಕ್ಷ್ಮಿ ಧೈರ್ಯ ಕಳೆದುಕೊಳ್ಳದೆ, ಬಾವಿಯೊಳಗಿದ್ದ ಪಂಪ್‌ಸೆಟ್ ಪೈಪ್‌ಗೆ ಜೋಡಿಸಿದ್ದ ಕೇಬಲ್ ಹಿಡಿದು ಸುಮಾರು 21 ಗಂಟೆಗಳ ಕಾಲ ಜೀವ ಉಳಿಸಿಕೊಂಡಿದ್ದಾರೆ.
ಸಂಪೂರ್ಣ ನಿರ್ಜನ ಪ್ರದೇಶವಾಗಿದ್ದ ಕಾರಣ ಮಹಿಳೆಯ ಕಿರುಚಾಟ ಯಾರಿಗೂ ಕೇಳಿಸಲಿಲ್ಲ. ಮರುದಿನ ಬೆಳಿಗ್ಗೆ ಕೃಷಿ ಕೆಲಸಕ್ಕೆ ಬಂದ ಸ್ಥಳೀಯ ರೈತರು ಬಾವಿಯಿಂದ ಸಹಾಯಕ್ಕಾಗಿ ಕೂಗುತ್ತಿದ್ದ ಲಕ್ಷ್ಮಿಯನ್ನು ಗಮನಿಸಿ ರಕ್ಷಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ವಿಶೇಷ ತನಿಖಾ ತಂಡ ರಚಿಸಿದ್ದರು. ಬಳಿಕ ರ‍್ಯಾಪಿಡೋ ಬುಕ್ಕಿಂಗ್ ವಿವರಗಳು, ಸಿಸಿಟಿವಿ ದೃಶ್ಯಾವಳಿ ಹಾಗೂ ಮೊಬೈಲ್ ಫೋನ್ ತಾಂತ್ರಿಕ ಮಾಹಿತಿಯನ್ನು ಪರಿಶೀಲಿಸಿ, 21 ವರ್ಷದ ಧಮ್ಮ ದಿನೇಶ್ ರೆಡ್ಡಿ ಎಂಬಾತನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆತ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳ್ಳತನ ಮಾಡಿದ್ದ ಚಿನ್ನವನ್ನು ಆತನಿಂದ ಖರೀದಿಸಿದ ವ್ಯಾಪಾರಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಟ್ಟಿಂಗ್‌ಗಾಗಿ 4 ಲಕ್ಷ ಸಾಲ!
ಆರೋಪಿ ಆನ್‌ಲೈನ್ ಜೂಜು, ಬೆಟ್ಟಿಂಗ್ ಆ್ಯಪ್‌ಗಳು ಹಾಗೂ ವಿವಿಧ ಸಾಲದ ಆ್ಯಪ್‌ಗಳ ಮೂಲಕ ಸುಮಾರು 4 ಲಕ್ಷ ರೂ. ಸಾಲ ಮಾಡಿದ್ದ. ಆ ಸಾಲ ತೀರಿಸಲು ದರೋಡೆಗೆ ಇಳಿದಿದ್ದ ಎಂದು ತಿಳಿದುಬಂದಿದೆ. ಆರೋಪಿ ವಿರುದ್ಧ ದರೋಡೆ, ಕೊಲೆ ಯತ್ನ ಸೇರಿದಂತೆ ವಿವಿಧ ಗಂಭೀರ ಆರೋಪಗಳಡಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಜನರಿಗೆ ಭಯ ಹುಟ್ಟಿಸುವ ರೀತಿ ಬಂದೂಕು ಹಿಡಿದು ರೀಲ್ಸ್ – ಮೂವರು ಯುವಕರ ಬಂಧನ
