ಬೆಂಗಳೂರು: ಬೆಳಗಾವಿ (Belagavi) ಜಿಲ್ಲೆಯ ಪ್ರಭಾವಿ ನಾಯಕ, ಕೆಎಂಎಫ್ ಮಾಜಿ ನಿರ್ದೇಶಕ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕುರುಬ ಸಮುದಾಯದ (Kuruba Community) ಹಿರಿಯ ಮುಖಂಡ ಸದಾಶಿವ ದೇಶಿಂಗೆ(Sadashiva Desinge) ಅವರು ಕಾಂಗ್ರೆಸ್ (Congress) ತೊರೆದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ, ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ(B. Y. Vijayendra) ಅವರು ದೇಶಿಂಗೆ ಅವರಿಗೆ ಪಕ್ಷದ ಬಾವುಟ ನೀಡಿ, ಹೆಗಲಿಗೆ ಕಂಬಳಿ ಹೊದೆಸುವ ಮೂಲಕ ಆತ್ಮೀಯವಾಗಿ ಪಕ್ಷಕ್ಕೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಶಾಸಕರಾದ ಬೈರತಿ ಬಸವರಾಜು, ದುರ್ಯೋಧನ ಐಹೊಳೆ, ಬಸವರಾಜ ಮತ್ತಿಮಾಡು ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
ಪಕ್ಷ ಸೇರ್ಪಡೆ ಕಾರ್ಯಕ್ರಮದ ಬಳಿಕ ಮಾತನಾಡಿದ ಬಿ.ವೈ. ವಿಜಯೇಂದ್ರ, ಸದಾಶಿವ ದೇಶಿಂಗೆ ಅವರಿಗೆ ಕುರುಬ ಸಮಾಜದಲ್ಲಿ ತಮ್ಮದೇ ಆದ ದೊಡ್ಡ ಶಕ್ತಿ ಇದೆ. ರಾಯಭಾಗ ಸೇರಿದಂತೆ ಬೆಳಗಾವಿ ಭಾಗದಲ್ಲಿ ಅಪಾರ ಪ್ರಭಾವ ಹೊಂದಿರುವ ಅವರು ಬಿಜೆಪಿಗೆ ಬಂದಿರುವುದರಿಂದ ಉತ್ತರ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಭಾಗದಲ್ಲಿ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ ಎಂದು ಹೇಳಿದರು.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಖ್ಯಾತ ಉದ್ಯಮಿಗಳು ಹಾಗೂ ಹಾಲುಮತ ಸಮಾಜದ ಯುವ ಮುಖಂಡರಾದ ಶ್ರೀ ಸದಾಶೀವ ದೇಸಿಂಗೆ ಅವರು ಇಂದು ಬೆಂಗಳೂರಿನ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರ್ಪಡೆಗೊಂಡರು.
ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪನವರು ಸೇರಿದಂತೆ… pic.twitter.com/YKMb6DbHbR
— P Rajeev (@PRajeevBJP) July 5, 2026
ಹಾಲುಮತ ಸಮಾಜವು ಪ್ರಾಮಾಣಿಕತೆ ಮತ್ತು ಸ್ವಾಭಿಮಾನಕ್ಕೆ ಹೆಸರಾಗಿದೆ. ಈ ಸಮಾಜಕ್ಕೆ ಬಿಜೆಪಿ ಎಂದಿಗೂ ಅನ್ಯಾಯ ಮಾಡಿಲ್ಲ. ಕನಕದಾಸ ಜಯಂತಿಗೆ ಸರ್ಕಾರಿ ರಜೆ ಘೋಷಿಸಿದ್ದು ಖುದ್ದು ಬಿ.ಎಸ್. ಯಡಿಯೂರಪ್ಪನವರು. ಅಷ್ಟೇ ಅಲ್ಲದೇ, ಈ ಹಿಂದೆ ವಿಜಯ್ ಶಂಕರ್ ಅವರು ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದರೂ ಅವರಿಗೆ ಎಂಎಲ್ಸಿ ಸ್ಥಾನ ನೀಡಿ, ಸಚಿವರನ್ನಾಗಿ ಮಾಡಿದ್ದು ಇದೇ ಯಡಿಯೂರಪ್ಪನವರು ಎಂದು ನೆನಪಿಸಿಕೊಂಡರು. ಇದನ್ನೂ ಓದಿ: ಸೋಷಿಯಲ್ ಮೀಡಿಯಾ ಪ್ರೀತಿಗಾಗಿ ಗಡಿ ದಾಟಿ ಬಂದವ ಅರೆಸ್ಟ್; ಪಾಕಿಸ್ತಾನಕ್ಕೆ ವಾಪಸ್ ಕಳಿಸಿದ ಭಾರತ
ಕೇಂದ್ರದ ನರೇಂದ್ರ ಮೋದಿ ಸರ್ಕಾರದಲ್ಲಿ ಒಬಿಸಿ ಸಮುದಾಯದ 27 ಜನ ಸಚಿವರಾಗಿದ್ದಾರೆ. ಖುದ್ದು ಪ್ರಧಾನಿ ಮೋದಿಯವರೇ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ. ಇದೇ ಕಾರಣಕ್ಕೆ ಕಾಂಗ್ರೆಸ್‌ನವರು ಸದಾ ಅವರ ಮೇಲೆ ಮತ್ಸರದಿಂದ ಟೀಕೆ ಮಾಡುತ್ತಿರುತ್ತಾರೆ. ರಾಜ್ಯದ ಸದ್ಯದ ರಾಜಕೀಯ ಸ್ಥಿತಿಯನ್ನು ಟೀಕಿಸಿದ ವಿಜಯೇಂದ್ರ, “ರಾಜ್ಯದಲ್ಲಿ ಸದ್ಯ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿ ಬಂದಿದೆ. ಜನರೇ ಈ ಸರ್ಕಾರಕ್ಕೆ ಬುದ್ಧಿ ಕಲಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಸತೀಶ್ ಜಾರಕಿಹೊಳಿ ಅವರ ಕೋಟೆಯಾಗಿದ್ದ ಬೆಳಗಾವಿ ಭಾಗದಲ್ಲೇ ಪ್ರಭಾವಿ ನಾಯಕನನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಬಿಜೆಪಿ, ಮುಂಬರುವ ದಿನಗಳಲ್ಲಿ ಗಡಿ ಜಿಲ್ಲೆಯಲ್ಲಿ ಮತ್ತಷ್ಟು ಬಲಗೊಳ್ಳುವ ಮುನ್ಸೂಚನೆ ನೀಡಿದೆ.
