ರಾಷ್ಟ್ರೀಯ ಹೆದ್ದಾರಿ 275ರ ಮಡಿಕೇರಿ ಕರ್ತೋಜಿ ಬಳಿ ಭೂಕುಸಿತ
ಮಳೆ ಹೆಚ್ಚಾಗಿರುವುದ್ದರಿಂದ ಬೆಟ್ಟದಿಂದ ನಿಧಾನವಾಗಿ ಮಣ್ಣು ಕುಸಿಯುತ್ತಿದೆ.
ಮಳೆಯ ಆರ್ಭಟ ಜೋರಾದರೆ ಮಣ್ಣು ಮತ್ತಷ್ಟೂ ಕುಸಿಯುವ ಆತಂಕ ಇದೆ. ಮಣ್ಣು ಹೆಚ್ಚು ಕುಸಿದರೆ ರಾಷ್ಟ್ರೀಯ ಹೆದ್ದಾರಿ 275 ಮಂಗಳೂರು – ಮಡಿಕೇರಿ ಹೈವೇ ಬಂದ್ ಆಗುವ ಸಾಧ್ಯತೆ ಇದೆ.
ಅದೇ ಸ್ಥಳದಲ್ಲಿ ಚಲಿಸುತ್ತಿದ್ದ ಲಾರಿಯ ಮೇಲೆ ಮರ ಬಿದ್ದಿದೆ.

ಕಾವೇರಿ ಮಾತೆಗೆ ಭಗಂಡೇಶ್ವರ ದೇವಾಲಯದ ಬಳಿ ವಿಶೇಷ ಪೂಜೆ
ಭಾಗಮಂಡಲ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದೆ.
ಭಗಂಡೇಶ್ವರ ದೇವಾಲಯದ ಮೆಟ್ಟಿಲಿನ ವರೆಗೂ ಕಾವೇರಿ ನದಿ ನೀರು ತಲುಪಿದೆ.
ಕಾವೇರಿ ಮಾತೆ ಶಾಂತವಾಗಿ ಹರಿಯಲಿ, ಪ್ರವಾಹ, ಭೂಕುಸಿತ ಉಂಟಾಗದಿರಲಿ ಎಂದು ಅರ್ಚಕ ಹರೀಶ್ ಭಟ್ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ.
ಕಾವೇರಿ ತಾಯಿ ಶಾಂತವಾಗಿ ಹರಿಯಲಿ ಎಂಬ ಸಂಕಲ್ಪದೊಂದಿಗೆ ವಿಶೇಷ ಪೂಜೆ ನೆರವೇರಿದೆ.

ಮಡಿಕೇರಿಯ ಕರೀಕೆ ಗ್ರಾಮದಲ್ಲಿ ಭಾರೀ ಭೂಕುಸಿತ
ಕರೀಕೆ ಗ್ರಾಮದ ಚೆತ್ತುಕಾಯ – ಪಚ್ಚೆಪಿಲಾವು ರಸ್ತೆಯಲ್ಲಿ ಭಾರಿ ಭೂಕುಸಿತವಾಗಿದೆ
ಎನ್.ಸಿ. ರಾಧಾಕೃಷ್ಣ ಅವರ ಮನೆ ಸಮೀಪ ಭೂಕುಸಿತವಾಗಿದೆ.
ಭೂಕುಸಿತದಿಂದ ರಸ್ತೆ ಸಂಪೂರ್ಣ ಕಡಿತ. ಸುತ್ತಮುತ್ತಲಿನ ಹಲವು ಕಡೆಗಳಲ್ಲೂ ಗುಡ್ಡ ಕುಸಿಯುವ ಸಂಭವವಿದೆ.
ತುರ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಗ್ರಾಮಸ್ಥರ ಒತ್ತಾಯಿಸಿದ್ದಾರೆ.

ಪುಷ್ಪಗಿರಿ ತಪ್ಪಲಿನಲ್ಲಿ ಭಾರೀ ಮಳೆ – ಧುಮ್ಮಿಕ್ಕುತ್ತಿರುವ ಮಲ್ಲಳ್ಳಿ ಫಾಲ್ಸ್
ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದೆ.
ಜಲಪಾತದ ಸೌಂದರ್ಯಕ್ಕೆ ಪ್ರವಾಸಿಗರು ಮನಸೋತಿದ್ದಾರೆ.
ನಿರಂತರ ಮಳೆಯಿಂದ ಜಲಪಾತದ ನೀರಿನ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ.
ಜಲಪಾತದ ಬಳಿ ಸೆಲ್ಫಿ ಹಾಗೂ ಸಾಹಸಕ್ಕೆ ಮುಂದಾಗದಂತೆ ಎಚ್ಚರಿಕೆ ನೀಡಲಾಗಿದೆ.
ಮಕ್ಕಳು ಹಾಗೂ ವೃದ್ಧರೊಂದಿಗೆ ಬರುವವರು ಹೆಚ್ಚಿನ ಎಚ್ಚರಿಕೆ ವಹಿಸಲು ಮನವಿ.

ಹಾಸನದ ಮಲೆನಾಡು ಭಾಗದಲ್ಲಿ ವರುಣನ ಅಬ್ಬರ – ಜನಜೀವನ ಸಂಪೂರ್ಣ ಅಸ್ತವ್ಯಸ್ತ
ಹಾಸನದಲ್ಲಿ ಭಾರೀ ಮಳೆಯಾಗುತ್ತಿದೆ. ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ರಸ್ತೆ ತುಂಬೆಲ್ಲಾ ನೀರು ಹರಿಯುತ್ತಿದೆ.
ಮಳೆಯಿಂದ ವಾಹನ ಸವಾರರು ಪರದಾಡುತ್ತಿದ್ದಾರೆ.
ತಗ್ಗು ಪ್ರದೇಶಗಳು ಸಂಪೂರ್ಣ ನೀರಿನಿಂದ ಜಲಾವೃತಗೊಂಡಿವೆ.

ಕೊಡಗಿನಲ್ಲಿ ಮಳೆ ಆರ್ಭಟ | ನಾಪೋಕ್ಲು- ಮೂರ್ನಾಡು ರಸ್ತೆ ಸಂಪರ್ಕ ಕಡಿತ
ಕೊಡಗು ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಕಾವೇರಿ ನದಿ ನೀರಿನ ಮಟ್ಟ ಏರಿಕೆಯಾಗಿದೆ.
ಮಡಿಕೇರಿ ತಾಲೂಕಿನ ನಾಪೋಕ್ಲು – ಮೂರ್ನಾಡು ರಸ್ತೆ ಮೇಲೆ ನೀರು ಹರಿಯುತ್ತಿದೆ.
ಮುಂಜಾಗ್ರತಾ ಕ್ರಮವಾಗಿ ನಾಪೋಕ್ಲು ಪೊಲೀಸರು ರಸ್ತೆಯ ಎರಡು ಬದಿಯಲ್ಲಿ ಬ್ಯಾರಿಕೇಡ್ ಅಳವಡಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಮಳೆ ಆರ್ಭಟ
ಮುಂದಿನ ನಾಲ್ಕು ದಿನಗಳ ಕಾಲ ಜಿಲ್ಲೆಯಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ ಭಾಗದ ಜನರು ಹಾಗೂ ಮೀನುಗಾರರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಉಡುಪಿ ಜಿಲ್ಲೆಯಾದ್ಯಂತ ಇಂದು ನಿರಂತರವಾಗಿ ಬಿರುಸಿನ ಮಳೆ ಸುರಿಯುತ್ತಿದೆ.
ಉಡುಪಿ ಜಿಲ್ಲೆಗೆ ಆರೆಂಜ್ ಅಲರ್ಟ್
ಬೆಳಗ್ಗಿನಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು ಮುಂದಿನ 4 ದಿನ ಕಡಲಿಗೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಗಂಟೆಗೆ 40–55 ಕಿ.ಮೀ. ವೇಗದ ಗಾಳಿ ಬೀಸುವ ಸಾಧ್ಯತೆಯಿದ್ದು ತಗ್ಗು ಪ್ರದೇಶದ ಜನರು ಎಚ್ಚರಿಕೆಯಿಂದಿರಲು ಸೂಚನೆ ನೀಡಲಾಗಿದೆ.
ಮಲಪ್ರಭಾ ನದಿಗೆ ಬಾಗಿನ ಅರ್ಪಣೆ
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮಲಪ್ರಭಾ ನದಿಗೆ ಒಳಹರಿವು ಗಣನೀಯವಾಗಿ ಹೆಚ್ಚಾಗಿದ್ದು, ನದಿಯು ಮೈದುಂಬಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ಮಲಪ್ರಭಾ ನದಿಗೆ ಸಂಪ್ರದಾಯಬದ್ಧವಾಗಿ ಬಾಗಿನ ಅರ್ಪಿಸಿ, ವಿಶೇಷ ಪೂಜೆ ನೆರವೇರಿಸಲಾಯಿತು.
ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ ಅವರ ಪತ್ನಿ ರೋಹಿಣಿ ಪಾಟೀಲ ಅವರ ನೇತೃತ್ವದಲ್ಲಿ ಮಲಪ್ರಭಾ ನದಿಗೆ ವಿಶೇಷ ಪೂಜೆ ಹಾಗೂ ಪುನಸ್ಕಾರಗಳನ್ನು ಸಲ್ಲಿಸಿ, ಭಕ್ತಿಪೂರ್ವಕವಾಗಿ ಬಾಗಿನವನ್ನು ಅರ್ಪಿಸಲಾಯಿತು. ಬಾಗಿನ ಅರ್ಪಿಸುವ ಕಾರ್ಯಕ್ರಮದ ಅಂಗವಾಗಿ ಗ್ರಾಮದ ಶ್ರೀ ಗಂಗಾಂಬಿಕಾ ದೇವಾಲಯದಿಂದ ಮಲಪ್ರಭಾ ನದಿಯ ತಟದವರೆಗೆ ಭವ್ಯ ಮೆರವಣಿಗೆಯನ್ನು ಆಯೋಜಿಸಲಾಗಿತ್ತು.

ಕೊಯ್ನಾದಿಂದ 34 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ
ಮಹಾರಾಷ್ಟ್ರದ ಸಾತಾರಾ ಜಿಲ್ಲೆಯಲ್ಲಿರುವ ಪ್ರಮುಖ ಕೊಯ್ನಾ ಜಲಾಶಯಕ್ಕೆಭಾರೀ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಪ್ರಸ್ತುತ ಜಲಾಶಯಕ್ಕೆ 49,000 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜಲಾಶಯದಿಂದ ಕೃಷ್ಣಾ ನದಿಗೆ 34,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಒಟ್ಟು 105 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಕೊಯ್ನಾ ಜಲಾಶಯದಲ್ಲಿ ಈಗಾಗಲೇ 91 ಟಿಎಂಸಿ ನೀರು ಭರ್ತಿಯಾಗಿದೆ.

ಮುಂಡಾಜೆಯಲ್ಲಿ ದಾಖಲೆಯ 348.5 ಮಿ.ಮೀ ಮಳೆ
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ(KSNDMC) ಆಗಸ್ಟ್ 1 ಶನಿವಾರ ಬೆಳಗ್ಗೆ 8:30 ರಿಂದ ಆಗಸ್ಟ್ 2ರ 7:30ರ ವೇಳೆಗೆ 50 ಮಿ ಮೀಗಿಂತ ಹೆಚ್ಚು ಮಳೆಯಾದ ಸ್ಥಳಗಳ ವಿವರವನ್ನು ಪ್ರಕಟಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಮುಂಡಾಜೆಯಲ್ಲಿ ದಾಖಲೆಯ 348.5 ಮಿ.ಮೀ ಮಳೆಯಾಗಿದ್ದರೆ, ಅದೇ ತಾಲೂಕಿನ ಕಲ್ಮಂಜದಲ್ಲಿ 283.5 ಮಿ.ಮೀ ಮಳೆಯಾಗಿದೆ.

ಭರ್ತಿಯಾದ ಕಬಿನಿ
ಕೇರಳದ ವಯನಾಡು ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಆಗುತ್ತಿರುವ ಕಾರಣ ಮೈಸೂರು ಜಿಲ್ಲೆಯ ಕಬಿನಿ ಜಲಾಶಯ ಭರ್ತಿಯಾಗಿದೆ. ಜಲಾಶಯಕ್ಕೆ ಈಗ 30 ಸಾವಿರ ಕ್ಯೂಸೆಕ್ ಒಳ ಹರಿವಿದೆ. ಹೀಗಾಗಿ ಜಲಾಶಯದಿಂದ 25 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.
ಕೆಆರ್‌ಎಸ್‌ನಲ್ಲಿ 97 ಅಡಿ ನೀರು ಸಂಗ್ರಹ
ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೃಷ್ಣರಾಜಸಾಗರ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆ ಕಾಣುತ್ತಿದೆ. ಎರಡು ದಿನದ ಅಂತರದಲ್ಲಿ ಐದು ಅಡಿ ನೀರು ಏರಿಕೆಯಾಗಿದ್ದು ಈಗ 97 ಅಡಿ ನೀರು ಸಂಗ್ರಹವಾಗಿದೆ.
ಬೆಳ್ತಂಗಡಿಗೆ ಆಗಮಿಸಿದ ಎನ್‌ಡಿಆರ್‌ಎಫ್
ದಕ್ಷಿಣ ಕನ್ನಡದ ಬೆಳ್ತಂಗಡಿ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಲಾಯಿಲ ಗ್ರಾಮಕ್ಕೆ ಎನ್‌ಡಿಆರ್‌ಎಫ್ ತಂಡ ಆಗಮಿಸಿದೆ. 30 ಮಂದಿಯ ಎನ್‌ಡಿಆರ್‌ಎಫ್ ತಂಡ ಬೆಳ್ತಂಗಡಿಯಲ್ಲಿ ಬೀಡುಬಿಟ್ಟಿದೆ.

ಮಗು ಸೇರಿ ಒಂದೇ ಕುಟುಂಬದ ಮೂವರು ಸಾವು
ಭಾರೀ ಮಳೆಯಿಂದಾಗಿ ಮನೆ ಮೇಲೆ ಗುಡ್ಡ ಕುಸಿದು ನಾಲ್ಕು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ದುರ್ಘಟನೆ ತೀರ್ಥಹಳ್ಳಿ ಪಟ್ಟಣದ ತಮ್ಮಡಿಕೊಪ್ಪ ಕೆರೆ ಬಳಿ ನಡೆದಿದೆ.

ತ್ರಿವೇಣಿ ಸಂಗಮ ಜಲಾವೃತ
ಧಾರಾಕಾರ ಮಳೆಯ ಪರಿಣಾಮವಾಗಿ ಭಾಗಮಂಡಲದ ತ್ರಿವೇಣಿ ಸಂಗಮ ಜಲಾವೃತಗೊಂಡಿದೆ. ಪ್ರಸಿದ್ಧ ಶ್ರೀ ಭಗಂಡೇಶ್ವರ ದೇವಾಲಯದ ಮೆಟ್ಟಿಲುಗಳ ಹಂತದವರೆಗೂ ಪ್ರವಾಹದ ನೀರು ಬಂದಿದ್ದು, ಭಾಗಮಂಡಲ – ನಾಪೋಕ್ಲು ನಡುವಿನ ಮುಖ್ಯ ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ.

ಮಳೆಯಿಂದ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತ
ಹಾಸನದ ಸಕಲೇಶಪುರ ತಾಲ್ಲೂಕಿನ, ಯಡಕುಮರಿ-ಶಿರವಾಗಿಲು ಬಳಿ ಗುಡ್ಡ ಕುಸಿತವಾಗಿದ್ದು ಬೆಂಗಳೂರು-ಮಂಗಳೂರು ಮಾರ್ಗದ ಎಲ್ಲಾ ರೈಲುಗಳ ಪ್ರಯಾಣ ರದ್ದು ಮಾಡಲಾಗಿದೆ. ಘಟನಾ ಸ್ಥಳದಲ್ಲಿ ಮಣ್ಣು ತೆರವು ಕಾಮಗಾರಿಯನ್ನು ರೈಲ್ವೇ ಇಲಾಖೆ ಆರಂಭಿಸಿದೆ. ಲುಗಳ ರದ್ದತಿಯಿಂದ ಪ್ರಯಾಣಿಕರ ಪರದಾಟುತ್ತಿದ್ದಾರೆ
