ನವದೆಹಲಿ: ಪಾಕಿಸ್ತಾನ ಮೂಲದ ‘ಶಹಜಾದ್ ಭಟ್ಟಿ ನೆಟ್‌ವರ್ಕ್’ (SBN) ಅನ್ನು ‘ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ’ಯಡಿ ಭಯೋತ್ಪಾದಕ ಸಂಘಟನೆ ಎಂದು ಸರ್ಕಾರ ಘೋಷಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ತಿಳಿಸಿದ್ದಾರೆ.
ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನಕ್ಕೆ ಅನುಗುಣವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವರು ಹೇಳಿದ್ದಾರೆ. ಇದನ್ನೂ ಓದಿ: ಜಂತರ್ ಮಂತರ್ ಪ್ರತಿಭಟನೆ: ಪೆಲೆಟ್ ಗನ್ ಬಳಕೆ, ಮಹಿಳೆಯರ ಮೇಲಿನ ಹಿಂಸಾಚಾರ ತನಿಖೆಗೆ ಸುಪ್ರೀಂ ಸೂಚನೆ
ಈ ಗುಂಪು ಗಡಿಗಳ ಮೂಲಕ ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಮತ್ತು ಮಾದಕ ವಸ್ತುಗಳ ಕಳ್ಳಸಾಗಣೆಯಲ್ಲಿ ತೊಡಗಿಸಿಕೊಂಡಿರುವುದಲ್ಲದೆ, ಯುವಕರು ಹಾಗೂ ಸಣ್ಣಪುಟ್ಟ ಅಪರಾಧಿಗಳನ್ನು ಭಯೋತ್ಪಾದನೆಯತ್ತ ಪ್ರಚೋದಿಸುತ್ತಿದೆ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಕೋಮು ಸೌಹಾರ್ದತೆಯನ್ನು ಗುರಿಯಾಗಿಸಿಕೊಂಡು, ಈ ಜಾಲವು ದ್ವೇಷಪೂರಿತ ಡಿಜಿಟಲ್ ವಿಷಯವನ್ನೂ ಪ್ರಕಟಿಸಿದೆ ಎಂದು ಸಚಿವರು ಎಕ್ಸ್ (X) ನಲ್ಲಿ ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವಾಲಯವು ಬುಧವಾರ ಹೊರಡಿಸಿದ ಗೆಜೆಟ್ ಅಧಿಸೂಚನೆಯು, ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಪಟ್ಟಿಯನ್ನು ಒಳಗೊಂಡಿರುವ ಯುಎಪಿಎ (UAPA) ಕಾಯಿದೆಯ ಮೊದಲ ಅನುಸೂಚಿಗೆ ಶಹಜಾದ್ ಭಟ್ಟಿ ನೆಟ್‌ವರ್ಕ್ (SBN) ಅನ್ನು ಸೇರಿಸಲು ಸದರಿ ಕಾಯಿದೆಯ ಸೆಕ್ಷನ್ 35(1)(a) ರ ಅಡಿಯಲ್ಲಿ ಕ್ರಮ ಕೈಗೊಂಡಿದೆ.
SBN ಭಯೋತ್ಪಾದನೆಯಲ್ಲಿ ತೊಡಗಿಸಿಕೊಂಡಿದೆ. ಭಾರತದಲ್ಲಿನ ವಿವಿಧ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದೆ ಎಂದು ಕೇಂದ್ರ ಸರ್ಕಾರವು ತಿಳಿಸಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದನ್ನೂ ಓದಿ: ನಕಲಿ ಸ್ವಾತಂತ್ರ್ಯ ಹೋರಾಟಗಾರರ ಪ್ರಮಾಣಪತ್ರ; ನಾಲ್ವರು MBBS ವಿದ್ಯಾರ್ಥಿನಿಯರ ವಿರುದ್ಧ ಕೇಸ್ ದಾಖಲು
ಶಹಜಾದ್ ಭಟ್ಟಿ ನೆಟ್‌ವರ್ಕ್ (SBN) ಒಂದು ಸಂಘಟನೆಯಾಗಿದ್ದು, ಇದರ ಉದ್ದೇಶವು ಮುಗ್ಧ ಯುವಕರು ಮತ್ತು ಸ್ಥಳೀಯ ಅಪರಾಧಿಗಳನ್ನು ಬಳಸಿಕೊಂಡು ಗಡಿಯಾಚೆಯಿಂದ ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಮತ್ತು ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡುವುದು ಹಾಗೂ ಭಯೋತ್ಪಾದಕ ಚಟುವಟಿಕೆಗಳ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ, ಕೋಮು ಸೌಹಾರ್ದತೆ ಮತ್ತು ಆಂತರಿಕ ಭದ್ರತೆಗೆ ಗಂಭೀರ ಬೆದರಿಕೆಯನ್ನು ಒಡ್ಡುವುದಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

