ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಸಂಪೂರ್ಣ ಕೈಕೊಟ್ಟಿರುವ ಹಿನ್ನೆಲೆ ಕೆಆರ್ಎಸ್ ಜಲಾಶಯದ (KRS Dam) ಒಡಲು ದಿನೇ ದಿನೇ ಬರಿದಾಗುತ್ತಿದ್ದು, ನೀರಿನ ಮಟ್ಟ 96 ಅಡಿಗೆ ಕುಸಿದಿದೆ.
ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ (Srirangapatna) ತಾಲೂಕಿನಲ್ಲಿರುವ ಕೆಆರ್ಎಸ್ನಲ್ಲಿ ದಿನೇ ದಿನೇ ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಒಳಹರಿವು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರುವುದು ರೈತರು ಹಾಗೂ ಕಾವೇರಿ ನೀರನ್ನೇ ನಂಬಿರುವ ಜನರಲ್ಲಿ ತೀವ್ರ ಆತಂಕ ಮೂಡಿಸಿದೆ. ಇದನ್ನೂ ಓದಿ: ಶಬರಿಮಲೆ ಯಾತ್ರಾರ್ಥಿಗಳಿಗೆ ವಾರ್ನಿಂಗ್ – ಪಂಪಾ ನದಿಗೆ ಬಟ್ಟೆ ಎಸೆದರೆ 5,000 ದಂಡ!
ಒಟ್ಟು 49.452 ಟಿಎಂಸಿ ಗರಿಷ್ಠ ಸಾಮರ್ಥ್ಯ ಹೊಂದಿರುವ ಕೆಆರ್ಎಸ್ ಜಲಾಶಯದಲ್ಲಿ ಪ್ರಸ್ತುತ ಕೇವಲ 20.434 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. ಇದರಲ್ಲಿ 7 ಟಿಎಂಸಿ ನೀರು ಡೆಡ್ ಸ್ಟೋರೇಜ್ (ಬಳಸಲಾಗದ ನೀರು) ಆಗಿ ಉಳಿಯಲಿದ್ದು, ಬಳಕೆಗೆ ಕೇವಲ 13 ಟಿಎಂಸಿ ನೀರು ಮಾತ್ರ ಸಿಗಲಿದೆ.
ಒಳಹರಿವು ಕ್ಷೀಣ, ಹೊರಹರಿವು ಹೆಚ್ಚಳ:
ಕಾವೇರಿ ಜಲಾನಯನ (Cauvery Water) ಪ್ರದೇಶದಲ್ಲಿ ಮಳೆಯಿಲ್ಲದೆ ಒಳಹರಿವು ಸಂಪೂರ್ಣ ಕ್ಷೀಣಿಸಿದ್ದು, ಇಂದು ಜಲಾಶಯಕ್ಕೆ ಬರುತ್ತಿರುವ ನೀರಿನ ಪ್ರಮಾಣ ಕೇವಲ 414 ಕ್ಯೂಸೆಕ್ಗೆ ಇಳಿದಿದೆ. ಆದರೆ, ಬೆಂಗಳೂರು ಸೇರಿದಂತೆ ವಿವಿಧ ನಗರ-ಪಟ್ಟಣಗಳ ಕುಡಿಯುವ ನೀರಿನ ಪೂರೈಕೆ ಹಾಗೂ ಕೃಷಿ ನಾಲೆಗಳ ಅಗತ್ಯಕ್ಕಾಗಿ ಡ್ಯಾಂನಿಂದ ಬರೋಬ್ಬರಿ 3,834 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಒಳಹರಿವಿಗಿಂತ ಹೊರಹರಿವೇ ಅಧಿಕವಾಗಿರುವುದರಿಂದ ಜಲಾಶಯದ ನೀರಿನ ಮಟ್ಟ ತೀವ್ರ ಗತಿಯಲ್ಲಿ ಇಳಿಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗದಿದ್ದರೆ ಕೃಷಿ ಚಟುವಟಿಕೆಗಳಿಗೆ ಮಾತ್ರವಲ್ಲದೆ ಕುಡಿಯುವ ನೀರಿಗೂ ತತ್ವಾರ ಎದುರಾಗುವ ಭೀತಿ ಎದುರಾಗಿದೆ.ಇದನ್ನೂ ಓದಿ: ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ 15 ವರ್ಷದ ಗಂಡಾನೆ ಸಾವು
