– ಸಾಲದ ಭದ್ರತೆ ಕಾಯ್ದುಕೊಳ್ಳಲು ಬ್ಯಾಂಕ್ಗಳಿಂದ ಗ್ರಾಹಕರಿಗೆ ನೋಟಿಸ್
ಬೆಂಗಳೂರು: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ತೀವ್ರ ಕುಸಿತ ಕಾಣಿಸಿಕೊಂಡಿರುವ ಬೆನ್ನಲ್ಲೇ, ಚಿನ್ನವನ್ನ ಅಡವಿಟ್ಟು ಸಾಲ ಪಡೆದಿರುವ ಗ್ರಾಹಕರಿಗೆ ಹೊಸ ಆತಂಕ ಎದುರಾಗಿದೆ. ಬ್ಯಾಂಕ್ಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ (NBFC) ಚಿನ್ನದ ಆಭರಣಗನ್ನು ಅಡವಿಟ್ಟು ಸಾಲ ಪಡೆದಿರುವವರ ಸಾಲದ ಮೌಲ್ಯ ಇಳಿಕೆಯಾಗಿರುವ ಹಿನ್ನೆಲೆ, ಕೆಲವು ಸಾಲಗಾರರಿಗೆ ಹೆಚ್ಚುವರಿ ಭದ್ರತೆ ಒದಗಿಸುವಂತೆ ಅಥವಾ ಸಾಲದ ಒಂದು ಭಾಗವನ್ನು ಮರುಪಾವತಿಸುವಂತೆ ನೋಟಿಸ್ ನೀಡಲಾಗುತ್ತಿದೆ.
ಚಿನ್ನದ ಬೆಲೆ ಕುಸಿತದಿಂದಾಗಿ ಸಾಲ ಪಡೆಯುವ ಸಂದರ್ಭದಲ್ಲಿ ಅಡವಿಟ್ಟಿದ್ದ ಆಭರಣಗಳ ಪ್ರಸ್ತುತ ಮಾರುಕಟ್ಟೆ ಮೌಲ್ಯ ಕಡಿಮೆಯಾಗಿದೆ. ಇದರಿಂದ ಸಾಲದ ಮೊತ್ತ ಮತ್ತು ಅಡವಿಟ್ಟ ಚಿನ್ನದ ಮೌಲ್ಯದ ನಡುವಿನ ಅನುಪಾತದಲ್ಲಿ ವ್ಯತ್ಯಾಸ ಉಂಟಾಗುವ ಸಾಧ್ಯತೆಯಿದೆ. ಸಾಲದ ಭದ್ರತಾ ಮೌಲ್ಯ ನಿಗದಿತ ಮಟ್ಟಕ್ಕಿಂತ ಕಡಿಮೆಯಾದ ಸಂದರ್ಭದಲ್ಲಿ ಬ್ಯಾಂಕ್ಗಳು ಗ್ರಾಹಕರಿಗೆ ಮಾರ್ಜಿನ್ ಕಾಲ್ ನೀಡಬಹುದು.
ಮಾರ್ಜಿನ್ ಕಾಲ್ ಎಂದರೇನು?
ಸಾಲಕ್ಕೆ ಭದ್ರತೆಯಾಗಿ ಅಡವಿಟ್ಟಿರುವ ಚಿನ್ನದ ಮೌಲ್ಯ ಕುಸಿದಾಗ, ಸಾಲದ ಭದ್ರತೆಯನ್ನು ಸರಿದೂಗಿಸಲು ಗ್ರಾಹಕರು ಹೆಚ್ಚುವರಿ ಚಿನ್ನ ಅಡವಿಡಬೇಕು ಅಥವಾ ಬಾಕಿ ಸಾಲದ ಒಂದು ಭಾಗವನ್ನ ಪಾವತಿಸಬೇಕು ಎಂದು ಬ್ಯಾಂಕ್ಗಳು ಸೂಚಿಸುವುದನ್ನು ಮಾರ್ಜಿನ್ ಕಾಲ್ ಎನ್ನಲಾಗುತ್ತದೆ. ನಿಗದಿತ ಅವಧಿಯಲ್ಲಿ ಬ್ಯಾಂಕ್ ಸೂಚಿಸಿದ ಕ್ರಮ ಕೈಗೊಳ್ಳದಿದ್ದರೆ, ಸಾಲದ ಒಪ್ಪಂದ ಹಾಗೂ ಅನ್ವಯಿಸುವ ನಿಯಮಗಳ ಪ್ರಕಾರ ಮುಂದಿನ ವಸೂಲಾತಿ ಕ್ರಮ ಕೈಗೊಳ್ಳುವ ಸಾಧ್ಯತೆಯಿರುತ್ತದೆ.
ಅಡವಿಟ್ಟ ಚಿನ್ನ ಹರಾಜಾಗುವ ಆತಂಕ
ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ನೀಡಿರುವ ನೋಟಿಸ್ಗೆ ಗ್ರಾಹಕರು ಸ್ಪಂದಿಸದೇ, ಸಾಲ ಮರುಪಾವತಿ ಅಥವಾ ಭದ್ರತೆ ಹೆಚ್ಚಿಸುವ ಪ್ರಕ್ರಿಯೆ ಪೂರ್ಣಗೊಳಿಸದಿದ್ರೆ, ಅನ್ವಯಿಸುವ ಸಾಲದ ಷರತ್ತುಗಳು ಮತ್ತು ನಿಯಮಗಳ ಪ್ರಕಾರ, ಅಡವಿಟ್ಟ ಚಿನ್ನವನ್ನ ಹರಾಜು ಮಾಡುವ ಹಂತ ತಲುಪಬಹುದು. ಹೀಗಾಗಿ ಗೋಲ್ಡ್ ಲೋನ್ ಪಡೆದಿರುವ ಗ್ರಾಹಕರು ಬ್ಯಾಂಕ್ನಿಂದ ಬರುವ ಸಂದೇಶಗಳು ಹಾಗೂ ನೋಟಿಸ್ಗಳನ್ನ ನಿರ್ಲಕ್ಷಿಸದೇ, ಸಾಲದ ಖಾತೆಯ ಸ್ಥಿತಿಗತಿ ಪರಿಶೀಲಿಸುವುದು ಅಗತ್ಯವಾಗಿದೆ.
ಗೋಲ್ಟ್ ಲೋನ್ ಪಡೆದವರಿಗೆ ಬಂದ ಬ್ಯಾಂಕ್ ನೋಟಿಸ್ನಲ್ಲಿ ಏನಿದೆ?
ಗೌರವಾನ್ವಿತ ಗ್ರಾಹಕರೇ,
ಚಿನ್ನದ ಮಾರುಕಟ್ಟೆ ಬೆಲೆಯಲ್ಲಿ ಗಮನಾರ್ಹ ಹಾಗೂ ನಿರಂತರ ಕುಸಿತ ಉಂಟಾಗಿರುವುದರಿಂದ, ನಿಗದಿತ ಮಾರ್ಜಿನ್ ಮೊತ್ತವನ್ನು ಕಾಯ್ದುಕೊಳ್ಳಲು, ದಯವಿಟ್ಟು ನಿಮ್ಮ ಚಿನ್ನದ ಸಾಲದ ಖಾತೆಗೆ ಅಗತ್ಯವಿರುವ ಮಾರ್ಜಿನ್ ಮೊತ್ತವನ್ನು ಪಾವತಿಸಿ. ಅಥವಾ ಪರ್ಯಾಯವಾಗಿ, ಹೆಚ್ಚುವರಿ ಚಿನ್ನದ ಆಭರಣಗಳನ್ನು ಒದಗಿಸುವ ಮೂಲಕವೂ ನೀವು ಈ ಮಾರ್ಜಿನ್ ಅನ್ನು ಭರ್ತಿ ಮಾಡಬಹುದು. ನೀವು ಈ ಮೊತ್ತವನ್ನು ಆನ್ಲೈನ್ ಮೂಲಕ ಪಾವತಿಸಬಹುದು ಅಥವಾ ಹೆಚ್ಚಿನ ಸಹಾಯಕ್ಕಾಗಿ ನಿಮ್ಮ ಶಾಖೆಗೆ ಭೇಟಿ ನೀಡಬಹುದು. ಗಮನಿಸಿ: ಪಾವತಿಸಬೇಕಾದ ಅಂತಿಮ ಮಾರ್ಜಿನ್ ಮೊತ್ತವು, ನೀವು ಹಣ ಪಾವತಿಸುವ ದಿನದಂದು ಚಾಲ್ತಿಯಲ್ಲಿರುವ ಚಿನ್ನದ ಬೆಲೆಯನ್ನು ಅವಲಂಬಿಸಿರುತ್ತದೆ.
LTV ಅಂದ್ರೆ ಏನು..!?
ಎಲ್ಟಿಯು ಅಂದ್ರೆ – ಲೋನ್ ಟು ವ್ಯಾಲ್ಯೂ ರೆಷಿಯೋ ಎಂದರ್ಥ. ಅಂದ್ರೆ ಅಡಮಾನ ಇಡುವ ಆಸ್ತಿ (ಮನೆ, ಚಿನ್ನ, ವಾಹನ) ಒಟ್ಟು ಮಾರುಕಟ್ಟೆ ಮೌಲ್ಯಕ್ಕೆ ಅನುಗುಣವಾಗಿ ಸಾಲ ಸೌಲಭ್ಯ ಪಡೆಯುವುದು. ಬ್ಯಾಂಕ್ ಗ್ರಾಹಕರಿಗೆ ಎಷ್ಟು ಶೇಕಡಾ ಸಾಲ ನೀಡುತ್ತದೆ ಎಂಬುದರ ಸೂಚಕ.
ಎಲ್ಟಿಯು ಹೇಗೆ ಕೆಲಸ ಮಾಡುತ್ತೆ?
ಗ್ರಾಹಕ ಯಾವುದೇ ಆಸ್ತಿ ಖರೀದಿಸುವಾಗ ಅಥವಾ ಅಡ ಇಡುವಾಗ ಬ್ಯಾಂಕ್ ಅದರ ಪೂರ್ಣ ಮೌಲ್ಯಕ್ಕೆ ಸಾಲ ನೀಡುವುದಿಲ್ಲ. ಉಳಿದ ಮೊತ್ತವನ್ನು ನೀವೇ ಭರಿಸಬೇಕಾಗುತ್ತದೆ. ಇದನ್ನ `ಡೌನ್ ಪೇಮೆಂಟ್’ ಅಥವಾ `ಮಾರ್ಜಿನ್ ಮನಿ’ ಎನ್ನುತ್ತಾರೆ. ಇದರ ಸೂತ್ರ: ಎಲ್ಟಿಯು = (ಸಾಲದ ಮೊತ್ತ ÷/ ಆಸ್ತಿಯ ಮೌಲ್ಯ) * 100
ಬ್ಯಾಂಕ್ ಒಪ್ಪಂದದ ನಿಯಮ ಹೇಗಿರುತ್ತೆ..?
ಬ್ಯಾಂಕ್ನಲ್ಲಿ ಅಡವಿಟ್ಟ ಚಿನ್ನದ ಮೌಲ್ಯಕ್ಕಿಂತ, ಚಿನ್ನದ ದರ ಇಳಿಕೆಯಾದ್ರೆ ಸಾಲದ ಮೊತ್ತವೇ ಅಡವಿಟ್ಟ ಚಿನ್ನದ ಮೌಲ್ಯಕ್ಕಿಂತ ಹೆಚ್ಚಾದಾಗ ಈ ಏರಿಳಿತವನ್ನ ಎಲ್ಟಿಯು ಎನ್ನಲಾಗುತ್ತದೆ. ಗೋಲ್ಡ್ ಲೋನ್ ಪಡೆದವರಿಗೆ ಬ್ಯಾಂಕ್ಗಳಿಂದ ಅಲರ್ಟ್ ಸಂದೇಶ ಬರಲಿದ್ದು, ಅಗತ್ಯ ಕ್ರಮಗಳ ಬಗ್ಗೆ ಗ್ರಾಹಕರಿಗೆ ಬ್ಯಾಂಕ್ಗಳಿಂದ ಸೂಚನೆ ನೀಡಲಾಗುತ್ತದೆ. ಬ್ಯಾಂಕ್ ನೀಡಿದ ಅವಧಿಯೊಳಗೆ, ಅಗತ್ಯ ಕ್ರಮ ಕೈಗೊಳ್ಳದಿದ್ರೆ ಲೋನ್ ಒಪ್ಪಂದದ ನಿಯಮಗಳ ಪ್ರಕಾರ ಹರಾಜಿಗೆ ಹೋಗುವ ಸಾಧ್ಯತೆ ಇರಲಿದೆ.
ಬ್ಯಾಂಕ್ಗಳಿಂದ ಮಾರ್ಜಿನ್ ಕಾಲ್ ಯಾವಾಗ ಬರುತ್ತೆ..?
ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಕುಸಿದಾಗ, ಅಡವಿಟ್ಟ ಚಿನ್ನದ ಮೌಲ್ಯವು ಸಾಲದ ಮೊತ್ತಕ್ಕಿಂತ ಕಡಿಮೆಯಾದಾಗ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಸಾಲಗಾರರಿಗೆ ನೀಡುವ ಎಚ್ಚರಿಕೆಯೇ ಮಾರ್ಜಿನ್ ಕಾಲ್. ಹೀಗೆ ಆದಾಗ ಮಾರ್ಜಿನ್ ಮೊತ್ತ ಪಾವತಿಸಲು ಬ್ಯಾಂಕುಗಳು ಸಂಬಂಧಪಟ್ಟ ಗ್ರಾಹಕರಿಗೆ 7 ರಿಂದ 30 ದಿನಗಳ ಕಾಲ ಅವಕಾಶ ನೀಡಲಿವೆ. ಮಾರ್ಜಿನ್ ಕಾಲ್ ಬಳಿಕ ಗ್ರಾಹಕರಿಗೆ ಎರಡು ಅವಕಾಶಗಳು ಇರಲಿದೆ. ಸಾಲದ ಅಸಲು ಮೊತ್ತದಲ್ಲಿ ಒಂದಿಷ್ಟು ಹಣವನ್ನು ಪಾವತಿಸುವುದು, ಈ ಮೂಲಕ ಬಾಕಿ ಸಾಲದ ಮೊತ್ತ ಕಡಿಮೆ ಮಾಡಿಕೊಳ್ಳುವುದು. ಅಥವಾ ಹಣದ ಬದಲಿಗೆ ಹೆಚ್ಚುವರಿ ಚಿನ್ನವನ್ನು ಅಡವಿಡುವುದು ಕೊರತೆಯಾಗುವ ಮೌಲ್ಯ ಸರಿದೂಗಿಸಲು ಹೆಚ್ಚುವರಿ ಚಿನ್ನ ಅಡವಿಡೋದು. ನಿಗದಿತ ಗಡುವಿನೊಳಗೆ ಹಣ ಪಾವತಿಸದಿದ್ದರೆ ನೋಟಿಸ್ ಜಾರಿಗೊಳಿಸಲಾಗುತ್ತದೆ. ಆ ನಂತರವೂ ಹಣ ಪಾವತಿ ಮಾಡದಿದ್ದ ಪಕ್ಷದಲ್ಲಿ ಚಿನ್ನವನ್ನ ಹರಾಜು ಮಾಡಲಾಗುತ್ತದೆ.



