ಕನ್ನಡ ಚಿತ್ರರಂಗದಲ್ಲಿ ಬಾಲನಟನಾಗಿ ಹಾಗೂ ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಬಹುಮುಖ ಪ್ರತಿಭೆ ಕಾರ್ತಿಕ್ ಶರ್ಮಾ ಈಗ ‘ಭಾವಾಂತರ’ (Bhavantara) ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಈ ಸಿನಿಮಾದ ‘ಮೊದಮೊದಲಿದು’ ಎಂಬ ಮೆಲೋಡಿ ಹಾಡು ಇತ್ತೀಚೆಗೆ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕನ್ನಡದ ಹೆಮ್ಮೆಯ ನಿರ್ಮಾಣ ಸಂಸ್ಥೆಯಾದ ‘ಹೊಂಬಾಳೆ ಫಿಲ್ಮ್ಸ್’ ತನ್ನದೇ ಆದ ‘ಹೊಂಬಾಳೆ ಮ್ಯೂಸಿಕ್’ ಆಡಿಯೋ ಲೇಬಲ್ ಮೂಲಕ ಈ ಚಿತ್ರದ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದ್ದು, ಹೊಸಬರ ಈ ವಿಭಿನ್ನ ಪ್ರಯತ್ನಕ್ಕೆ ಸಾಥ್ ನೀಡಿದೆ.
ನಿರ್ದೇಶನದ ಜೊತೆಗೆ ಸಂಗೀತ ಸಂಯೋಜನೆಯ ಜವಾಬ್ದಾರಿಯನ್ನೂ ಸ್ವತಃ ಕಾರ್ತಿಕ್ ಶರ್ಮಾ ಅವರೇ ಹೊತ್ತಿದ್ದಾರೆ. ಬಿಡುಗಡೆಯಾಗಿರುವ ‘ಮೊದಮೊದಲಿದು’ ಹಾಡಿಗೆ ವಾಸುಕಿ ವೈಭವ್ ಸಾಹಿತ್ಯ ಬರೆದಿದ್ದು, ಪ್ರಖ್ಯಾತ ಗಾಯಕರಾದ ಸಿದ್ಧಾರ್ಥ ಬೆಳ್ಮಣ್ಣು ಹಾಗೂ ಐಶ್ವರ್ಯ ರಂಗರಾಜನ್ ತಮ್ಮ ಮಧುರ ಕಂಠದಲ್ಲಿ ಹಾಡಿ ಜೀವ ತುಂಬಿದ್ದಾರೆ. ನೈಜ ಘಟನೆಗಳಿಂದ ಪ್ರೇರಿತವಾದ ಈ ಕಥಾಹಂದರಕ್ಕೆ ಕಾರ್ತಿಕ್ ಶರ್ಮಾ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಇಡೀ ದಕ್ಷಿಣ ಭಾರತದ ಚಿತ್ರರಂಗದಲ್ಲೇ ಈ ರೀತಿಯ ವಿಶಿಷ್ಟವಾದ ಹಾಗೂ ಅಪರೂಪದ ಎಳೆ ಹೊಂದಿರುವ ಸಿನಿಮಾ ಬಂದಿಲ್ಲ ಎಂದು ಚಿತ್ರತಂಡ ಹೇಳಿಕೊಂಡಿದೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಎಲ್ಲವನ್ನೂ ಹೊಂಬಾಳೆ ಮ್ಯೂಸಿಕ್ ಮೂಲಕ ಹಂತ ಹಂತವಾಗಿ ಬಿಡುಗಡೆ ಆಗಲಿವೆ. ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿಗೆ ವಿಜಯಲಕ್ಷ್ಮಿ ಭೇಟಿ; ದರ್ಶನ್ ಜೊತೆ ಅರ್ಧ ಗಂಟೆ ಮಾತುಕತೆ

ಈಗಾಗಲೇ ಸಂಪೂರ್ಣ ಚಿತ್ರೀಕರಣ ಮುಗಿಸಿಕೊಂಡಿರುವ ‘ಭಾವಾಂತರ’ ತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿದ್ದು, ಶೀಘ್ರದಲ್ಲೇ ಬೆಳ್ಳಿಪರದೆಗೆ ಬರಲು ಸಜ್ಜಾಗಿದೆ. ಕರಾವಳಿಯ ಉಡುಪಿ, ಬೆಂಗಳೂರು ಹಾಗೂ ತಮಿಳುನಾಡಿನ ಸುಂದರ ತಾಣಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ. ‘ಕಿಕ್ ಮೀಡಿಯಾ’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಕಾರ್ತಿಕ್ ಶರ್ಮಾ ಅವರಿಗೆ ಜೋಡಿಯಾಗಿ ಖ್ಯಾತ ನಟಿ ತನ್ವಿ ರಾವ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಜೊತೆಗೆ ಪ್ರಣವ್ ಶ್ರೀಧರ್, ಶ್ರೀವೈಷ್ಣವ್, ವೇದ ರಾವ್ ಮತ್ತು ಭಾನು ಮುಂತಾದ ಪ್ರತಿಭಾನ್ವಿತ ಕಲಾವಿದರು ನಟಿಸಿದ್ದು, ಸಾಗರ್ ಅತ್ಕರ್ ಛಾಯಾಗ್ರಹಣ ಹಾಗೂ ಆಶೀಷ್ ಹುಲಕುಂದ್ ಅವರ ಸಂಕಲನ ಈ ಚಿತ್ರಕ್ಕಿದೆ.
ನಿರ್ದೇಶಕ ಕಾರ್ತಿಕ್ ಶರ್ಮಾ ಅವರಿಗೆ ಚಿತ್ರರಂಗ ಹೊಸದೇನಲ್ಲ. ‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ ಅಭಿನಯದ ‘ವೀರ ಕನ್ನಡಿಗ’ ಹಾಗೂ ನಟಿ ಖುಷ್ಬೂ ಅಭಿನಯದ ‘ಮ್ಯಾಜಿಕ್ ಅಜ್ಜಿ’ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಾಲನಟನಾಗಿ ಅವರು ಮಿಂಚಿದ್ದರು. ಕೇವಲ ನಟನೆಯಷ್ಟೇ ಅಲ್ಲದೆ, ನೂರಕ್ಕೂ ಹೆಚ್ಚು ಕಿರುತೆರೆ ಧಾರಾವಾಹಿಗಳು ಮತ್ತು ರಿಯಾಲಿಟಿ ಶೋಗಳಿಗೆ ಸಂಗೀತ ನೀಡುವ ಮೂಲಕ ಸಂಗೀತ ಲೋಕದಲ್ಲೂ ದೊಡ್ಡ ಹೆಸರು ಮಾಡಿದ್ದಾರೆ. ಇದೀಗ ಚಿತ್ರರಂಗದಲ್ಲ ತಮಗಿರುವ ಸುದೀರ್ಘ ಅನುಭವವನ್ನು ಧಾರೆ ಎರೆದು ‘ಭಾವಾಂತರ’ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ಸಜ್ಜಾಗಿದ್ದಾರೆ. ಇದನ್ನೂ ಓದಿ: ಚಾಮುಂಡಿ ಬೆಟ್ಟದಲ್ಲಿ ದರ್ಶನ್ ಫೋಟೊ ಹಿಡಿದು ‘ಡಿ ಬಾಸ್’ ಘೋಷಣೆ ಕೂಗಿದ ಅಭಿಮಾನಿ… ಮುಂದೇನಾಯ್ತು?
