ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2027ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆಯು ಗೋವಾದಲ್ಲಿ(Goa) ನಡೆಯಲಿದೆ.
ಕಳೆದ ಮೂರು ಆವೃತ್ತಿಗಳಿಂದ ವಿದೇಶಗಳಲ್ಲಿ ಆಯೋಜನೆಯಾಗುತ್ತಿದ್ದ ಹರಾಜು ಪ್ರಕ್ರಿಯೆಯು ಈ ಬಾರಿ ತಾಯ್ನಾಡಿಗೆ ಮರಳುತ್ತಿದ್ದು, ಡಿಸೆಂಬರ್ ಮಧ್ಯಭಾಗದಲ್ಲಿ ಹರಾಜು ನಡೆಯಲಿದೆ ಎಂದು ಐಪಿಎಲ್ ಆಡಳಿತ ಮಂಡಳಿ ಅಧ್ಯಕ್ಷ ಅರುಣ್ ಧುಮಾಲ್(Arun Dhumal) ಬುಧವಾರ ಖಚಿತಪಡಿಸಿದ್ದಾರೆ.
ಸುದ್ದಿ ಸಂಸ್ಥೆಯ ಜೊತೆ ಮಾತನಾಡಿದ ಅವರು, ನಾವು ಗೋವಾವನ್ನು ಅಂತಿಮಗೊಳಿಸಿದ್ದೇವೆ. ಡಿಸೆಂಬರ್ 15, 16 ರಂದು ಹರಾಜು ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ ಎಂದು ತಿಳಿಸಿದರು. ಇದು ಮಿನಿ ಹರಾಜು (Mini Auction) ಆಗಿರುವುದರಿಂದ ಕೇವಲ ಒಂದೇ ದಿನದಲ್ಲಿ ಪ್ರಕ್ರಿಯೆ ಮುಕ್ತಾಯಗೊಳ್ಳುವ ಸಾಧ್ಯತೆಯಿದೆ. ಇದನ್ನೂ ಓದಿ: ಏಷ್ಯನ್ ಗೇಮ್ಸ್ನಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ ಚಾನು – ಭಾರತದ ಪರ ಹೊಸ ಮೈಲಿಗಲ್ಲು

ಕಳೆದ ಮೂರು ಆವೃತ್ತಿಗಳ ಹರಾಜು ಭಾರತದ ಹೊರಗೆ ದುಬೈ, ಸೌದಿ ಅರೇಬಿಯಾದ ಜೆಡ್ಡಾ ಹಾಗೂ ಅಬುಧಾಬಿಯಲ್ಲಿ ನಡೆದಿತ್ತು. ಇದೀಗ ಮೂರು ವರ್ಷಗಳ ಸುದೀರ್ಘ ಅಂತರದ ಬಳಿಕ ಬಿಸಿಸಿಐ ಹರಾಜು ಪ್ರಕ್ರಿಯೆಯನ್ನು ಮತ್ತೆ ಭಾರತದಲ್ಲೇ ನಡೆಸಲು ತೀರ್ಮಾನಿಸಿದೆ.
ಸಾಮಾನ್ಯವಾಗಿ ಭಾರತದಲ್ಲಿ ಡಿಸೆಂಬರ್ ತಿಂಗಳು ಮದುವೆಗಳ ಸುಗ್ಗಿ ಕಾಲವಾಗಿರುವುದರಿಂದ ಪಂಚತಾರಾ ಹೋಟೆಲ್ಗಳು ಮತ್ತು ಸೂಕ್ತ ಕನ್ವೆನ್ಷನ್ ಹಾಲ್ಗಳ ಲಭ್ಯತೆಯ ಕೊರತೆ ಎದುರಾಗುತ್ತಿತ್ತು. ಆದರೆ, ಈ ಬಾರಿ ಸಣ್ಣ ಹರಾಜು ಆಗಿರುವುದರಿಂದ ಗೋವಾದಲ್ಲಿ ಯಶಸ್ವಿಯಾಗಿ ಸ್ಥಳ ನಿಗದಿಪಡಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಕೂಡ ಈ ವಿಚಾರವನ್ನು ಖಚಿತಪಡಿಸಿದ್ದು, ಡಿಸೆಂಬರ್ ತಿಂಗಳಲ್ಲಿ ಗೋವಾದ ಆತಿಥ್ಯದಲ್ಲಿ ಹರಾಜು ಪ್ರಕ್ರಿಯೆ ಸರಾಗವಾಗಿ ನೆರವೇರಲಿದೆ ಎಂದು ತಿಳಿಸಿದ್ದಾರೆ.

