ಬೆಳಗಾವಿ: ರಾಷ್ಟ್ರೀಯ ಗೀತೆಯಾಗಿರುವ ವಂದೇ ಮಾತರಂ(Vande Mataram) ಹಾಡುವ ವಿಚಾರವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಈಗಾಗಲೇ ರಾಜಕೀಯ ಜಟಾಪಟಿ ತೀವ್ರಗೊಂಡಿರುವ ನಡುವೆಯೇ, ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್(Thawar Chand Gehlot) ಅವರು ಮಹತ್ವದ ಸೂಚನೆ ನೀಡಿದ್ದಾರೆ.
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (VTU) 26ನೇ ಘಟಿಕೋತ್ಸವದಲ್ಲಿ ವಂದೇ ಮಾತರಂ ಗೀತೆಯ ಪೂರ್ಣ ಆವೃತ್ತಿಯನ್ನು ಹಾಡುವಂತೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್ ಅವರಿಗೆ ರಾಜ್ಯಪಾಲರು ಖಡಕ್ ನಿರ್ದೇಶನ ನೀಡಿದ್ದಾರೆ.
ಸೆಪ್ಟೆಂಬರ್ 26ರಂದು ವಿಟಿಯು ಕ್ಯಾಂಪಸ್ನಲ್ಲಿ 26ನೇ ಘಟಿಕೋತ್ಸವ ಸಮಾರಂಭ ಆಯೋಜನೆಯಾಗಿದೆ. ಕಾರ್ಯಕ್ರಮದ ಉದ್ಘಾಟನೆ ವೇಳೆ 3 ನಿಮಿಷ 10 ಸೆಕೆಂಡ್ಗಳಿರುವ ವಂದೇ ಮಾತರಂ ಗೀತೆಯ ಸಂಪೂರ್ಣ ಆವೃತ್ತಿಯನ್ನೇ ಪ್ರಸ್ತುತಪಡಿಸಬೇಕು ಎಂದು ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲರು ಆದೇಶಿಸಿದ್ದಾರೆ.
ರಾಜ್ಯಪಾಲರ ಈ ನಿರ್ದೇಶನದ ಕುರಿತು ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ವಿಟಿಯು ಕುಲಪತಿ ಪ್ರೊ. ವಿದ್ಯಾಶಂಕರ್, “ವಿಶ್ವವಿದ್ಯಾಲಯಗಳ ಕುಲಾಧಿಪತಿಗಳಾದ ಗೌರವಾನ್ವಿತ ರಾಜ್ಯಪಾಲರು ನಮಗೆ ಸ್ಪಷ್ಟ ಆದೇಶ ನೀಡಿದ್ದಾರೆ. ಅವರ ಆದೇಶವನ್ನು ನಾವು ಕಡ್ಡಾಯವಾಗಿ ಪಾಲಿಸುತ್ತೇವೆ. ಘಟಿಕೋತ್ಸವದ ಆರಂಭದಲ್ಲಿ 3 ನಿಮಿಷ 10 ಸೆಕೆಂಡ್ಗಳ ಪೂರ್ಣ ವಂದೇ ಮಾತರಂ ಹಾಡನ್ನು ಪ್ರಸಾರ ಮಾಡುತ್ತೇವೆ” ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಪಿಒಕೆಯನ್ನು ಸ್ಮಶಾನ ಮಾಡಿದ್ದಾರೆ: ವಿಶ್ವಸಂಸ್ಥೆಯಲ್ಲಿ ಪಾಕ್ ವಿರುದ್ಧ ಕಾಶ್ಮೀರಿ ಮಹಿಳೆ ಗುಡುಗು
ಈ ರಾಜಕೀಯ ಹಗ್ಗಜಗ್ಗಾಟದ ನಡುವೆಯೇ ಉನ್ನತ ಶಿಕ್ಷಣ ಸಂಸ್ಥೆಯಾಗಿರುವ ವಿಟಿಯು ಘಟಿಕೋತ್ಸವದಲ್ಲಿ ಸಂಪೂರ್ಣ ಗೀತೆಯನ್ನು ಕಡ್ಡಾಯವಾಗಿ ಹಾಡಿಸಲು ರಾಜ್ಯಪಾಲರು ಮುಂದಾಗಿರುವುದು ರಾಜಕೀಯ ಮತ್ತು ಶೈಕ್ಷಣಿಕ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

