ಚಂಡೀಗಢ: ಹರಿಯಾಣದ ಹಿಸಾರ್ ಜಿಲ್ಲೆಯಲ್ಲಿ ಯುದ್ಧ ತರಬೇತಿ ಸಮಯದಲ್ಲಿ ಟ್ಯಾಂಕ್ ಆಕಸ್ಮಿಕವಾಗಿ ಹರಿದ ಪರಿಣಾಮ ಇಬ್ಬರು ಭಾರತೀಯ ಸೇನಾ ಸೈನಿಕರು ಹುತಾತ್ಮರಾಗಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಕವಾಯತಿನ ಸಮಯದಲ್ಲಿ ಉತ್ಪತ್ತಿಯಾಗುವ ಧೂಳಿಂದ ಚಾಲಕರಿಗೆ ವಾಹನ ಚಾಲನೆಗೆ ತೊಂದರೆಯಾದ ಪರಿಣಾಮ ಅವಘಡ ಸಂಭವಿಸಿತ್ತು.
ಈ ಘಟನೆ ನವೆಂಬರ್ 21 ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಭೋಜರಾಜ್ ಗ್ರಾಮದಲ್ಲಿರುವ ಸೇನಾ ತರಬೇತಿ ಕೇಂದ್ರದಲ್ಲಿ ನಡೆದಿದ್ದು, ಸುಮಾರು 32 ಟ್ಯಾಂಕ್ಗಳು ತರಬೇತಿಯಲ್ಲಿ ಭಾಗಿಯಾಗಿದ್ದವು.
ಧೂಳಿನ ಮಧ್ಯೆ ಚಾಲನೆ ಕಷ್ಟವಾಗಿ ಟ್ಯಾಂಕ್ ಮುಂದೆ ನಿಂತಿದ್ದ ಇಬ್ಬರು ಸೈನಿಕರು ಸಿಲುಕಿಕೊಂಡರು. ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಹಿಸಾರ್ ಮಿಲಿಟರಿ ಆಸ್ಪತ್ರೆಗೆ ಸಾಗಿಸಲಾಯಿತು. ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
