ಕೊಟ್ಟಾಯಂ: ಕೇರಳದ ಕೊಟ್ಟಾಯಂ(Kottayam) ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ಮೀನಚಿಲ್ ಮತ್ತು ಲಾಲಂ ನದಿಗಳು ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತಿದ್ದು, ಪಾಲಾ ಪಟ್ಟಣ(Pala Town) ಸಂಪೂರ್ಣ ಜಲಾವೃತಗೊಂಡಿದೆ.
ದಿಢೀರ್ ನುಗ್ಗಿದ ಪ್ರವಾಹದ ನೀರು ನೂರಾರು ಮನೆಗಳು ಹಾಗೂ ವಾಣಿಜ್ಯ ಮಳಿಗೆಗಳಿಗೆ ನುಗ್ಗಿದ್ದು, 2018ರ ಭೀಕರ ಪ್ರವಾಹದ ಭೀತಿಯನ್ನು ಮತ್ತೆ ನೆನಪಿಸಿದೆ. ಸಾರಿಗೆ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆ ನಾಶವಾಗಿ ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಶುಕ್ರವಾರ ಮಧ್ಯಾಹ್ನದಿಂದ ಪ್ರಾರಂಭವಾದ ಧಾರಾಕಾರ ಮಳೆಯು ಶನಿವಾರ ತಡರಾತ್ರಿಯವರೆಗೂ ನಿರಂತರವಾಗಿ ಸುರಿದಿದೆ. ಇದರ ಜೊತೆಗೆ ಪೂಂಜಾರ್ ಪ್ರದೇಶದಲ್ಲಿ ಸಂಭವಿಸಿದ ಭಾರೀ ಭೂಕುಸಿತದಿಂದಾಗಿ, ಶನಿವಾರ ಮುಂಜಾನೆ 4 ಗಂಟೆಯಿಂದಲೇ ಮೀನಚಿಲ್ ಮತ್ತು ಲಾಲಂ ನದಿಗಳಲ್ಲಿ ನೀರಿನ ಮಟ್ಟ ತೀವ್ರವಾಗಿ ಏರಿಕೆಯಾಯಿತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಪಾಲಾ ಪುರಸಭೆಯು ಮುಂಜಾನೆ 5:30ರ ವೇಳೆಗೆ ಸತತ ಮೂರು ಬಾರಿ ಸೈರನ್ ಮೊಳಗಿಸಿ ಜನರಿಗೆ ಅಪಾಯದ ಮುನ್ನೆಚ್ಚರಿಕೆ ನೀಡಿತ್ತು.
കനത്ത മഴ; മീനച്ചിലാറ്റിലെ വെള്ളപ്പൊക്കത്തിൽ പാലാ നഗരം വെള്ളത്തിൽ | Video Courtesy: The Drone Dude | #MalayalamNews #Kerala #LatestUpdates #PalaNews #MeenachilRiver #KeralaRains #WeatherUpdates #ManoramaNews Pala Town Flooded Due to Heavy Rains in Meenachil River pic.twitter.com/ax2VF9iS7z
— Manorama News (@manoramanews) August 1, 2026
ಸ್ಟೇಡಿಯಂ ಜಂಕ್ಷನ್‌ನಿಂದ ಕಾಲೇಜು ಪ್ರದೇಶದವರೆಗಿನ ನೂರಾರು ವಾಣಿಜ್ಯ ಮಳಿಗೆಗಳಿಗೆ ನೀರು ನುಗ್ಗಿದ್ದು, ವ್ಯಾಪಾರಿಗಳು ತೀವ್ರ ನಷ್ಟ ಅನುಭವಿಸಿದ್ದಾರೆ. ಮುಂಜಾನೆಯ ವೇಳೆಯಲ್ಲೇ ಕಣ್ಣು ಮುಚ್ಚಿ ತೆರೆಯುವುದರೊಳಗೆ ಪ್ರವಾಹದ ನೀರು ಅಪ್ಪಳಿಸಿದ್ದರಿಂದ, ಹಲವು ವರ್ತಕರಿಗೆ ತಮ್ಮ ಮಳಿಗೆಯಲ್ಲಿದ್ದ ಸರಕುಗಳನ್ನು ಹಾಗೂ ವಾಹನಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸಾಧ್ಯವಾಗಲಿಲ್ಲ.
Heavy flooding is happening now in Moonnani, Pala, Kottayam, Kerala, India.
video: Johnson Varkey. pic.twitter.com/NaW9Cue7Jh
— Weather Monitor (@WeatherMonitors) August 1, 2026
ಪಾಲಾ ಪಟ್ಟಣದ ಬಹುತೇಕ ಎಲ್ಲಾ ರಸ್ತೆಗಳು ನೀರಿನಲ್ಲಿ ಮುಳುಗಡೆಯಾಗಿವೆ. ಪಾಲಾ-ಈರಾಟ್ಟುಪೇಟ ಹೆದ್ದಾರಿ, ಪಾಲಾ-ಕೊಟ್ಟಾಯಂ ರಸ್ತೆ ನೀರಿನಲ್ಲಿ ಮುಳುಗಡೆಯಾಗಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಮುಂಡುಪಾಲಂ ಬಳಿ ಸುಮಾರು ನಾಲ್ಕು ಅಡಿಗಳಷ್ಟು ನೀರು ನಿಂತಿದೆ.
