ಮಡಿಕೇರಿ: ಕೊಡಗು(Kodagu) ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಮುಂದುವರಿದಿದ್ದು, ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ನದಿ-ತೊರೆಗಳು ಮೈದುಂಬಿ ಹರಿಯುತ್ತಿವೆ. ತಲಕಾವೇರಿ(Talacauvery) ಹಾಗೂ ಭಾಗಮಂಡಲ ವ್ಯಾಪ್ತಿಯಲ್ಲಿ ಮಳೆಯ ತೀವ್ರತೆ ವಿಪರೀತವಾಗಿ ಹೆಚ್ಚಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಧಾರಾಕಾರ ಮಳೆಯ ಪರಿಣಾಮವಾಗಿ ಭಾಗಮಂಡಲದ ತ್ರಿವೇಣಿ ಸಂಗಮ(Bhagamandala Triveni Sangam) ಜಲಾವೃತಗೊಂಡಿದೆ. ಪ್ರಸಿದ್ಧ ಶ್ರೀ ಭಗಂಡೇಶ್ವರ ದೇವಾಲಯದ ಮೆಟ್ಟಿಲುಗಳ ಹಂತದವರೆಗೂ ಪ್ರವಾಹದ ನೀರು ಬಂದಿದ್ದು, ಭಾಗಮಂಡಲ – ನಾಪೋಕ್ಲು ನಡುವಿನ ಮುಖ್ಯ ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ಇದನ್ನೂ ಓದಿ: ಕೊಡಗಿನಲ್ಲಿ ಅಬ್ಬರದ ಮಳೆ – ಹಾರಂಗಿ ಜಲಾಶಯದ ಒಳಹರಿವು ಹೆಚ್ಚಳ, ನದಿಗೆ 20 ಸಾವಿರ ಕ್ಯೂಸೆಕ್ ನೀರು ಬಿಡುಗಡೆ
ಇನ್ನೊಂದೆಡೆ ಕಾವೇರಿ ಉಗಮ ಸ್ಥಾನವಾದ ತಲಕಾವೇರಿ ಕ್ಷೇತ್ರದಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಕ್ಷೇತ್ರದ ಮೆಟ್ಟಿಲುಗಳ ಮೇಲೆಯೇ ಹಾಲಿನ ಹೊಳೆಯಂತೆ ಮಳೆ ನೀರು ಧುಮ್ಮಿಕ್ಕಿ ಹರಿಯುತ್ತಿದೆ. ಈ ಜಲವೈಭವವನ್ನು ಕಂಡು ಆಗಮಿಸಿದ ಭಕ್ತಾದಿಗಳು ರೋಮಾಂಚನಗೊಂಡಿದ್ದು, ಸುಂದರ ದೃಶ್ಯಗಳನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದು ಸಂಭ್ರಮಿಸುತ್ತಿದ್ದಾರೆ.
ಎಷ್ಟೇ ಭಾರೀ ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೆ, ತಲಕಾವೇರಿ ಕ್ಷೇತ್ರದಲ್ಲಿ ಅರ್ಚಕರ ತಂಡವು ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನಿರಂತರವಾಗಿ ನೆರವೇರಿಸುತ್ತಿದೆ. ಮಳೆಯ ನಡುವೆಯೂ ದರ್ಶನಕ್ಕಾಗಿ ಭಕ್ತರ ಆಗಮನ ಮುಂದುವರಿದಿದ್ದು, ಶ್ರೀ ಕಾವೇರಿ ಮಾತೆಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.
