– ತ್ರಿವೇಣಿ ಸಂಗಮ ಭರ್ತಿ
ಮಡಿಕೇರಿ: ಕೊಡಗು (Kodagu) ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಬ್ರಹ್ಮಗಿರಿ ತಪ್ಪಲಿನಿಂದ ಹಿಡಿದು ಮಡಿಕೇರಿ, ಭಾಗಮಂಡಲ, ಹಾರಂಗಿ ಜಲಾನಯನ ಪ್ರದೇಶದವರೆಗೂ ಧಾರಾಕಾರ ಮಳೆ ಸುರಿಯುತ್ತಿದ್ದು, ಹಾರಂಗಿ ಜಲಾಶಯಕ್ಕೆ (Harangi Dam) ಭಾರೀ ಪ್ರಮಾಣದಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ. ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಕಾವೇರಿ ನದಿಗೆ 20 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಮತ್ತೊಂದೆಡೆ ಭಾಗಮಂಡಲದ (Bhagamandala) ತ್ರಿವೇಣಿ ಸಂಗಮ (Triveni Sangama) ಸಂಪೂರ್ಣ ಭರ್ತಿಯಾಗಿದ್ದು, ಜಿಲ್ಲೆಯ ಹಲವೆಡೆ ಗುಡ್ಡ ಕುಸಿತದ ಘಟನೆಗಳೂ ವರದಿಯಾಗಿವೆ.
ಕಳೆದ ಹಲವು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಅದರಲ್ಲೂ ಬ್ರಹ್ಮಗಿರಿ ತಪ್ಪಲು, ತಲಕಾವೇರಿ, ಭಾಗಮಂಡಲ, ಮಡಿಕೇರಿ ಹಾಗೂ ಹಾರಂಗಿ ಜಲಾನಯನ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿರುವ ಪರಿಣಾಮ ನದಿ-ಹಳ್ಳಗಳು ತುಂಬಿ ಹರಿಯುತ್ತಿವೆ. ಭಾರೀ ಮಳೆಯಿಂದ ಹಾರಂಗಿ ಜಲಾಶಯಕ್ಕೆ ಸುಮಾರು 16 ಸಾವಿರ ಕ್ಯೂಸೆಕ್‌ಗೂ ಅಧಿಕ ನೀರಿನ ಒಳಹರಿವು ದಾಖಲಾಗಿದ್ದು, ಜಲಾಶಯದ ನೀರಿನ ಮಟ್ಟ ವೇಗವಾಗಿ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಜಲಾಶಯದ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಾವೇರಿ ನದಿಗೆ 20 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಇದನ್ನೂ ಓದಿ: ಆಟೋಗೆ ಕಾರು ಡಿಕ್ಕಿ – ರಸ್ತೆಬದಿ ನಿಂತಿದ್ದ 5 ವರ್ಷದ ಬಾಲಕ ದುರ್ಮರಣ, 6 ಕುರಿಗಳು ಸಾವು

ಇನ್ನೂ ಇತ್ತ ಕಾವೇರಿಯ ಉಗಮ ಕ್ಷೇತ್ರ ಭಾಗಮಂಡಲದ ತ್ರಿವೇಣಿ ಸಂಗಮ ಸಂಪೂರ್ಣ ಭರ್ತಿಯಾಗಿದೆ. ನೀರಿನ ಮಟ್ಟ ಹೆಚ್ಚಾದ ಕಾರಣ ಸಂಗಮದ ಸುತ್ತಮುತ್ತಲಿನ ಪ್ರದೇಶ ಜಲಾವೃತವಾಗಿದ್ದು, ಅಲ್ಲದೆ ಸಂಜೆ ವೇಳೆಯಲ್ಲಿ ಬಾರೀ ಮಳೆ ಹೆಚ್ಚಾದ ಹಿನ್ನೆಲೆಯಲ್ಲಿ ನಾಪೋಕ್ಲು ಅಯ್ಯಂಗೇರಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆ ಸಿಬ್ಬಂದಿ ರಸ್ತೆ ಎರಡು ಭಾಗಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ವಾಹನ ಸಂಚಾರಕ್ಕೆ ತಡೆಯೊಡ್ಡಿದ್ದಾರೆ. ಇನ್ನೂ ಪ್ರವಾಸಿಗರು ಹಾಗೂ ಭಕ್ತರು ಭಾಗಮಂಡಲದ ಮೇಲ್ಸಸೇತುವೆ ಮೂಲಕ ಓಡಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮತಪಟ್ಟಿಯಿಂದ 1 ಕೋಟಿ ಮತದಾರರಿಗೆ ಶಾಕ್

ನಿರಂತರ ಮಳೆಯಿಂದ ಜಿಲ್ಲೆಯ ಹಲವೆಡೆ ಗುಡ್ಡ ಕುಸಿತ ಸಂಭವಿಸಿದ್ದು, ಕೆಲ ರಸ್ತೆಗಳಲ್ಲಿ ಮಣ್ಣು ಜರಿದು ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿರುವ ವರದಿಗಳು ಆಗಿದೆ. ಮಡಿಕೇರಿ ತಾಲೂಕಿನ ಮದೆನಾಡು ಗ್ರಾಮದ ರಾಮಪ್ಪ ಅವರ ಮನೆಯ ಹಿಂಭಾಗದಲ್ಲಿ ಗುಡ್ಡ ಕುಸಿತಗೊಂಡಿದೆ. ಮತ್ತೊಂದೆಡೆ ಎರಡನೇ ಮೊಣ್ಣಗೇರಿ ಬಳಿ ಶಾಲೆಗೆ ತೆರಳುವ ರಸ್ತೆಗೆ ಬೃಹತ್ ಗುಡ್ಡ ಕುಸಿತಗೊಂಡಿದೆ. ಬಳಿಕ ಸ್ಥಳೀಯರು ಜೆಸಿಬಿ ಯಂತ್ರದ ಮೂಲಕ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಮಡಿಕೇರಿ ನಗರದ ಸುಬ್ರಮಣ್ಯ ನಗರದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯೋರ್ವರು ನೂತನ ಮನೆ ನಿರ್ಮಾಣ ಮಾಡುವ ವೇಳೆಯಲ್ಲಿ ಮನೆಯ ಹಿಂಭಾಗದ ತಡೆಗೋಡೆ ಕುಸಿತಗೊಂಡಿದ್ದು, ಮನೆಯ ಸದಸ್ಯರು ಅಘಾತಕ್ಕೆ ಒಳಗಾಗಿದ್ದಾರೆ. ಜಿಲ್ಲೆಯ ನಾನಾ ಭಾಗಗಳಲ್ಲಿ ಮಳೆ ಅವಾಂತರಗಳು ಮುಂದುವರೆದಿದ್ದು, ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಪರಿಸ್ಥಿತಿಯ ಮೇಲೆ ಜಿಲ್ಲಾಡಳಿತ ನಿರಂತರ ನಿಗಾ ವಹಿಸಿದೆ. ಇದನ್ನೂ ಓದಿ: ಪಿಒಕೆ ಶಿಖರದಲ್ಲಿ ಹಿಮಪಾತ; ಖ್ಯಾತ ಪರ್ವತಾರೋಹಿ ‘Nims’ Purja ದುರಂತ ಅಂತ್ಯ
