ವಿದ್ಯಾವಾಚಸ್ಪತಿ ಪದ್ಮಶ್ರೀ ಬನ್ನಂಜೆ ಗೋವಿಂದಾಚಾರ್ಯರ (Bannanje Govindacharya) ಜೀವನಗಾಥೆ ಇಂದು ಎನಗೆ ಗೋವಿಂದ ಚಿತ್ರದ ಪ್ರತಿ ಫ್ರೇಮ್‌ನಲ್ಲೂ ಇಂತಹ ಭಾವಚೌಕಟ್ಟನ್ನು ಕಟ್ಟಿಕೊಡುವ ಪ್ರಯತ್ನ ನಡೆದಿದೆ. ಬಾಲಗೋವಿಂದ ಅಮ್ಮನ ಮಡಿಲಲ್ಲಿರುವಾಗ ಆಗುವ ಕೃಷ್ಣ ದರ್ಶನ, ಆ ಅದ್ಭುತ ದರ್ಶನದ ಪುನರಾವರ್ತನೆ, ಗೋವಿಂದಾಚಾರ್ಯರ ಅಭಿಮಾನಿಗಳಲ್ಲಿ, ಅವರ ಪ್ರವಚನಗಳ ನಿರಂತರ ಶ್ರೋತೃಗಳಾದವರಲ್ಲಿ ಪುಳಕವೆಬ್ಬಿಸುವುದು ಸಹಜ. ಮಹಾನ್ ಜ್ಞಾನಿಯೊಬ್ಬರ ಬದುಕಿನ ಅದ್ಭುತಗಳನ್ನು ನಿರ್ದೇಶಕರು ಅವರು ಬೆಳೆದ ಉಡುಪಿ, ಅಂಬಲಪಾಡಿ, ಮಣಿಪಾಲದ ಸಹಜ ಪರಿಸರದಲ್ಲಿ ಅಂದಿನ ಕಾಲಘಟ್ಟದ ಫ್ರೇಮ್‌ನಲ್ಲಿ ಕಟ್ಟಿಕೊಟ್ಟಿದ್ದಾರೆ.
ಆಚಾರ್ಯರ ಬಾಲ್ಯ, ಯೌವನ, ವೈಚಾರಿಕ ವಿಚಾರಗಳ ನಡುವಿನ ಸಂಘರ್ಷ, ನಾಸ್ತಿಕತೆಯ ಭಾವ, ಸ್ವಾಧ್ಯಾಯ, ಸಂಶೋಧನೆ, ಇತ್ಯಾದಿಗಳನ್ನು ಕಟ್ಟಿಕೊಡುತ್ತಲೇ ಯುವ ಬನ್ನಂಜೆಯವರು ಪತ್ರಕರ್ತರಾಗಿ, ಪ್ರವಚನಕಾರರಾಗಿ ಮಾತ್ರವಲ್ಲ ಮುಂದೆ ಮಹಾನ್ ವಿದ್ವಾಂಸರಾಗಿ ಬೆಳೆದುಬಂದ ಚಿತ್ರಣ ಇಲ್ಲಿದೆ. ಹಾಗಾಗಿ, ಈ ಚಿತ್ರವನ್ನು ಜೀವನಗಾಥೆ ಎಂಬುದಕ್ಕಷ್ಟೇ ಸೀಮಿತಗೊಳಿಸಲಾಗದು. ಅವರ ಅಂತರಂಗವನ್ನು, ಜ್ಞಾನ ಸಾಗರವನ್ನು, ಪ್ರಶ್ನಿಸುವ ಮನೋಭಾವದ ಬದುಕು ಮತ್ತು ವ್ಯಕ್ತಿತ್ವವನ್ನು ಕಟ್ಟಿಕೊಡುವ ಪ್ರಯತ್ನ ಎನ್ನಬಹುದು. ಇದನ್ನೂ ಓದಿ: ದುನಿಯಾ ವಿಜಯ್ – ನಾಗರತ್ನ ವಿಚ್ಛೇದನಕ್ಕೆ ಹೈಕೋರ್ಟ್ ಅಸ್ತು; 2 ಕೋಟಿ ಜೀವನಾಂಶಕ್ಕೆ ಆದೇಶ
ಸನಾತನ ಸಂಸ್ಕೃತಿಯ ಸಂಪ್ರದಾಯಗಳ ಅಂತರಾರ್ಥವನ್ನು ತಿಳಿದು ಆಚರಿಸಬೇಕು ಎಂಬುದು ಆಚಾರ್ಯರ ನಿಲುವು. ಹಾಗಾಗಿಯೇ ಅವರು ಮೌಢ್ಯಗಳನ್ನು ಧಿಕ್ಕರಿಸುತ್ತಾರೆ. ಶುದ್ಧತೆ ಇಲ್ಲದೇ ಅಂಜನ ಹಾಕಿದರೆ ಏನೂ ಗೋಚರಿಸದು ಎಂಬುದನ್ನು ದೃಶ್ಯವೊಂದರಲ್ಲಿ ಸಾಬೀತುಪಡಿಸಿದ್ದಾರೆ. ಸರ್ವಮೂಲ ಗ್ರಂಥದ ಅಮೂಲ್ಯವಾದ ತಾಳೆಗರಿಗಳ ಮೂಲ ಪ್ರತಿಯನ್ನು ಕಳೆದುಕೊಂಡಾಗ ಆಚಾರ್ಯರು ವೇದನೆ ಅನುಭವಿಸಿದರು. ಅದನ್ನು ಹುಡುಕಲು ಇನ್ನಿಲ್ಲದ ಪ್ರಯತ್ನ ನಡೆಯಿತು. ಅವರ ವಿರುದ್ಧ ಆರೋಪಗಳ ಪಿತೂರಿ ನಡೆಯಿತು, ಹೀಗೆ ಎಲ್ಲ ನೋವುಗಳನ್ನು ನುಂಗಿಕೊಂಡು ಮತ್ತೆ ಗುರುಕೃಪೆಯಿಂದ ಗ್ರಂಥವನ್ನು ಮರಳಿ ಪಡೆದ ಸನ್ನಿವೇಶ ಮನೋಜ್ಞವಾಗಿ ಮೂಡಿಬಂದಿದೆ. ಅಂದು ಆರೋಪಗಳ ಮಳೆಗರೆದವರು ಮತ್ತೊಮ್ಮೆ ಆತ್ಮಾವಲೋಕನ ಮಾಡಿಕೊಳ್ಳುವಂತೆ ಚಿತ್ರದಲ್ಲಿ ಈ ಪ್ರಸಂಗ ಮೂಡಿಬಂದಿದೆ.
ಆಚಾರ್ಯರ ಬದುಕಿನಲ್ಲಿ ತಲ್ಲಣಗಳು ಎದುರಾಗಲಿ, ವೈಚಾರಿಕ ಭಿನ್ನಾಭಿಪ್ರಾಯ, ಸಂದೇಹಗಳು ಬಂದರೂ ಅವರ ಕೃಷ್ಣನ ಮೇಲಿನ ಭಕ್ತಿ ಎಂದಿಗೂ ಮರೆಯಾಗಲಿಲ್ಲ. ಅದೇ ಅವರ ಆಧ್ಯಾತ್ಮಿಕ ಬೆಳಕು ಎಂಬ ಚಿತ್ರಣ ಇಲ್ಲಿದೆ. ಹಿರಿಯ ಬನ್ನಂಜೆಯವರಾಗಿ ಭಾಸ್ಕರ ರಾವ್ ಇಷ್ಟವಾಗುತ್ತಾರೆ. ಧ್ವನಿಯೊಂದನ್ನು ಹೊರತುಪಡಿಸಿದರೆ ಥೇಟ್ ಆಚಾರ್ಯರೇ ಮುಂದೆ ಬಂದಂತೆ ಪರಕಾಯ ಪ್ರವೇಶ ಮಾಡಿದ್ದಾರೆ. ಯುವ ಬನ್ನಂಜೆಯವರಾಗಿ ಕೃಷ್ಣರಾಜ ಕುತ್ಪಾಡಿಯವರ ಅಭಿನಯವೂ ಅಶೋಕ್ ಅವರ ನಟನೆಗೆ ನಿಕಟವಾದ ಸಾಥ್ ಕೊಟ್ಟಿದೆ. ಇದನ್ನೂ ಓದಿ: ದರ್ಶನ್ ಬಿಟ್ಟು ಸುದೀಪ್ ಬೆನ್ನು ಹತ್ತಿದ ಪ್ರೇಮ್
ಅಷ್ಟಮಠಗಳ ಒಡನಾಟ, ಯತಿಗಳೊಡನೆ, ಆತ್ಮೀಯತೆ. ದೇಶ-ವಿದೇಶಗಳ ಅಧ್ಯಯನಕಾರರಿಗೆ ಜ್ಞಾನದ ನೆರವು, ಸಂಸ್ಕೃತ ಬೋಧನೆ, ಪುರಾಣಗಳಿಗೆ ವ್ಯಾಖ್ಯಾನಗಳು, ಅರ್ಥವಿವರಣೆ ಹೀಗೆ ಹಲವಾರು ದೀರ್ಘ ವಿಚಾರಗಳನ್ನು ಕಾಲಮಿತಿಯಲ್ಲಿ ತೋರಿಸುವ ಪ್ರಯತ್ನ ಇಲ್ಲಿ ನಡೆದಿದೆ. ಆಚಾರ್ಯರ ಶ್ರೀಮತಿಯವರ ಸಾತ್ವಿಕತೆ, ತ್ಯಾಗ, ಮಕ್ಕಳ ಒಡನಾಟ, ಆಚಾರ್ಯರ ಜೀವನವನ್ನು ದಾಖಲಿಸುವ ಮಗಳು ವೀಣಾ ಬನ್ನಂಜೆಯವರ ನಿಜ ಪಾತ್ರ ಎಲ್ಲವೂ ಎರಡೂವರೆ ಗಂಟೆಗಳಲ್ಲಿ ಕಟ್ಟಿಕೊಡುವ ದೊಡ್ಡ ಸಾಹಸ ನಿರ್ದೇಶಕ ಕಾರ್ತಿಕ್ ಸರಗೂರು ಮತ್ತು ಅವರ ತಂಡದಿಂದ ನಡೆದಿದೆ. ಸದ್ಯದಲ್ಲೇ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ, ಬನ್ನಂಜೆಯವರ ಅಭಿಮಾನಿಗಳಿಗಾಗಿ ಈ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲಾಗುವುದು ಎಂದು ಚಿತ್ರತಂಡ ತಿಳಿಸಿದೆ.
