– ಭುವನಾ ಕೆಲಸ ಅವಳ ತಮ್ಮನಿಗೆ ನೀಡಬೇಕು ಅಂತ ದೊಡ್ಡಮ್ಮ ಒತ್ತಾಯ
– ಬಾಯ್ ಕಣೋ.. ಸಂಜೆ ಫೋನ್ ಮಾಡ್ತೀನಿ ಅಂತ ಹೋದ ಅಕ್ಕ ಬರಲೇ ಇಲ್ಲ – ಬಿಕ್ಕಿ ಬಿಕ್ಕಿ ಅತ್ತ ತಮ್ಮ
ನೆಲಮಂಗಲ: ಎಸ್‌ಐಆರ್ ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಗ್ರಾಮ ಲೆಕ್ಕಾಧಿಕಾರಿ ಭುವನಾ ಮನೆಯಲ್ಲಿ ಶೋಕದ ಛಾಯೆ ಆವರಿಸಿದೆ. ಭುವನಾರನ್ನು (Bhuvana) ನೆನೆದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.
ಭುವನ ಚಿಕ್ಕಪ್ಪ ರಮೇಶ್ ಮಾತನಾಡಿ, ವಿಎ ಆಗಿ ತುಮಕೂರಿನಲ್ಲಿ (Tumakuru) ಕೆಲಸ ಮಾಡುತ್ತಿದ್ದಳು. ನಿನ್ನೆ ಎಸ್‌ಐಆರ್ ಕೆಲಸ ಹಿನ್ನೆಲೆ ಬೆಳಗ್ಗೆ 6 ಗಂಟೆಗೆ ನೆಲಮಂಗಲ ತಾಲೂಕಿನ ವರದನಾಯಕನಹಳ್ಳಿ ಮನೆಯಿಂದ ತೆರಳಿದ್ದಳು. ಕಚೇರಿಗೆ ತೆರಳಿ ಫೀಲ್ಡ್ ವರ್ಕ್ ಹಿನ್ನೆಲೆ ತುಮಕೂರು ಜಿಲ್ಲೆಯ ಗೂಳೂರಿನ ಬಳಿ ಲಾರಿ ಅಪಘಾತವಾಗಿದೆ. ಭುವನಾಗೆ ಮದುವೆ ಮಾಡಲು ಹುಡುಗನನ್ನ ಹುಡುಕಾಟ ಮಾಡಲಾಗುತ್ತಿತ್ತು. ಈಗ ಅವಳೇ ಇಲ್ಲ ಎಂದು ದುಃಖಿಸಿದರು. ಇದನ್ನೂ ಓದಿ: SIR ಪ್ರಕ್ರಿಯೆಗೆ ತೆರಳಿದ್ದ ವಿಎ ಭುವನಾ ಅಪಘಾತದಲ್ಲಿ ದುರ್ಮರಣ; ಭಾನುವಾರ ಹುಟ್ಟೂರಲ್ಲಿ ಅಂತ್ಯಕ್ರಿಯೆ

ಎಸ್ಐಆರ್ ಒತ್ತಡದಿಂದ ಈ ರೀತಿ ಆಗಿದೆ. ಎಂಟು ವರ್ಷದಿಂದ ವಿಎ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಳು. ಅಧಿಕಾರಿಗಳು ಯಾರು ಕೂಡ ಮನೆ ಬಳಿ ಬಂದಿಲ್ಲ. ನೌಕರರಿಗೆ ಒತ್ತಡ ಕಡಿಮೆ ಮಾಡಬೇಕು. ನಿಗದಿತ ಸಮಯ ನೀಡಬೇಕು. ಹಳ್ಳಿಯಲ್ಲಿ ಬೆಳೆದಿರುವ ಹೆಣ್ಣುಮಕ್ಕಳಿಗೆ ಸಲ್ಪ ಕಷ್ಟ ಇದೆ. ಸರ್ಕಾರ ಗಮನ ಹರಿಸಬೇಕು ಎಂದು ಮನವಿ ಮಾಡಿಕೊಂಡರು.
ದೊಡ್ಡಮ್ಮ ಮೀನಾಕ್ಷಮ್ಮ ಮಾತನಾಡಿ, ನಾವು ಆಡಿಸಿ ಬೆಳೆಸಿದ್ದ ಹುಡುಗಿ ಇಂದು ಇಲ್ಲ. ಚೆನ್ನಾಗಿ ಓದಿಕೊಂಡಿದ್ದ ಹುಡುಗಿಗೆ ಸರ್ಕಾರಿ ಕೆಲಸ ಸಿಕ್ಕಿತ್ತು. ಮದುವೆ ಮಾಡಲು ಹುಡುಗ ಹುಡುಕಲಾಗುತ್ತಿತ್ತು. ಸಾಕಷ್ಟು ಜನರನ್ನ ನೋಡಿದ್ದೊ. ಸಾಕಷ್ಟು ಕನಸುಗಳನ್ನ ಕಟ್ಟಿಕೊಂಡಿದ್ದ ಹುಡುಗಿ. ಅವಳ ಸಾವಿಗೆ ನ್ಯಾಯ ಬೇಕು. ಭುವನ ಕೆಲಸ ಅವಳ ತಮ್ಮನಿಗೆ ಕೊಡಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: SIR ಪ್ರಕ್ರಿಯೆಗೆ ತೆರಳುತ್ತಿದ್ದಾಗ ಅಪಘಾತ – ಚಿಕಿತ್ಸೆ ಫಲಕಾರಿಯಾಗದೇ ವಿಎ ಸಾವು

ಬಡವರು, ರೈತರಿಗೆ ಅನುಕೂಲ ರೀತಿಯಲ್ಲಿ ಕೆಲಸ ಮಾಡುತ್ತಿದ್ದಳು. ಧೈರ್ಯವಂತೆ ಸಮರ್ಥವಾಗಿ ಕೆಲಸ ನಿಭಾಯಿಸುತ್ತಿದ್ದಳು ಎಂದು ದೊಡ್ಡಮ್ಮ ನೆನಪಿಸಿಕೊಂಡರು.
ಭುವನಾ ತಮ್ಮ ಕಾರ್ತಿಕ್ ಗೌಡ ಪ್ರತಿಕ್ರಿಯಿಸಿ, ನಿನ್ನೆ ಬೆಳಗ್ಗೆ ಬಸ್‌ಗೆ ನಾನೇ ಡ್ರಾಪ್ ಮಾಡಿದ್ದೆ. ತುಂಬಾ ಕೆಲಸದ ಒತ್ತಡ ಇತ್ತು ಅಂತ ಹೇಳ್ತಿದ್ದಳು. ಪೌತಿ ಖಾತೆ ಮಾಡಲು ನನ್ನಿಂದ ಆಗ್ತಿಲ್ಲ ಅಂತ ಹೇಳ್ತಿದ್ದಳು. ಎಸ್ಐಆರ್ ಬಂದಾಗಿನಿಂದ ಹಗಲು-ರಾತ್ರಿ ನಿದ್ದೆ ಇರಲಿಲ್ಲ. ಕೆಲಸ ಬಿಟ್ಟು ಬಿಡ್ತೀನಿ ಅಂತ ಹೇಳ್ತಿದ್ದಳು. ನಾವೇ ಬೇಡ ಅಂತ ಹೇಳಿ ಸಮಾಧಾನ ಪಡಿಸಿದ್ವಿ. ಡಿಸಿ ಹಾಗೂ ತಹಸಿಲ್ದಾರ್ ಒತ್ತಡ ಹಾಕುತ್ತಿದ್ದರು ಎಂದು ಹೇಳಿಕೊಂಡಿದ್ರು. ಬಸ್ ಹತ್ತಿಸಿದ ನಂತರ, ʼಬಾಯ್ ಕಣೊ ಸಂಜೆ 5 ಗಂಟೆಗೆ ಫೋನ್ ಮಾಡ್ತೀನಿʼ ಬಾ ಅಂತ ಹೇಳಿದ್ದಳು. ಅಕ್ಕ ಬರಲೇ ಇಲ್ಲ ಎಂದು ಬಿಕ್ಕಿ ಬಿಕ್ಕಿ ಅತ್ತರು.
