ರಾಮನಗರ: ಬಿಡದಿ ಟೌನ್‌ಶಿಪ್ (Bidadi Township) ಜಟಾಪಟಿ ಹಿನ್ನೆಲೆ ಅಧಿಕಾರಿಗಳ ಮೇಲಿನ ದಾಳಿ ಪ್ರಕರಣದಲ್ಲಿ ಬಂಧನದ ಭೀತಿಯಲ್ಲಿದ್ದ ರೈತರಿಗೆ ರಾಮನಗರ (Ramanagara) ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು (Bail) ಮಂಜೂರು ಮಾಡಿದೆ.
ಕೊಲೆ ಯತ್ನ ಪ್ರಕರಣ ಎದುರಿಸುತ್ತಿದ್ದ 11ಕ್ಕೂ ಹೆಚ್ಚು ರೈತರಿಗೆ (Farmers) ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಆದೇಶಿಸಿದೆ. ಕಳೆದ ಜುಲೈ 13ರಂದು ಬಿಡದಿ ಟೌನ್‌ಶಿಪ್ ಯೋಜನೆ ವ್ಯಾಪ್ತಿಯ ಮಂಡಲಹಳ್ಳಿ ಗ್ರಾಮದಲ್ಲಿ ಜೆಎಂಸಿ ಸರ್ವೇ ಕಾರ್ಯ ಕೈಗೊಳ್ಳಲಾಗಿತ್ತು. ಈ ವೇಳೆ ಸರ್ವೇಗೆ ಅಡ್ಡಿಪಡಿಸಿದ ರೈತರು, ಸರ್ವೇ ಮಾಡಲು ಬಂದಿದ್ದ ಅಧಿಕಾರಿಗಳ ಮೇಲೆ ಪೊರಕೆ, ಕಲ್ಲಿನಿಂದ ಹಲ್ಲೆ ನಡೆಸಿ ಸ್ಥಳದಿಂದ ಓಡಿಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಬಿಡದಿ ಪೊಲೀಸ್ ಠಾಣೆಯಲ್ಲಿ ರೈತರ ವಿರುದ್ಧ ಕೊಲೆ ಯತ್ನ ಸೇರಿ ಒಟ್ಟು ಎರಡು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿದ್ದವು. ಇದನ್ನೂ ಓದಿ: ಎಥೆನಾಲ್ ಅಪಪ್ರಚಾರ| ಮೆಟಾ, ಇನ್‌ಫ್ಲುಯೆನ್ಸರ್ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಗಡ್ಕರಿ
ಕೊಲೆ ಯತ್ನ ಪ್ರಕರಣದ ಹಿನ್ನೆಲೆ ರೈತರು ಇಂದು ರಾಮನಗರ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿ ವಿಚಾರಣೆ ಎದುರಿಸಿದ್ದರು. ರೈತರ ಪರ ವಕೀಲರ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಪ್ರಕರಣದಲ್ಲಿದ್ದ ಎಲ್ಲಾ 11ಕ್ಕೂ ಹೆಚ್ಚು ರೈತರಿಗೂ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಈ ಹಿನ್ನೆಲೆ ರೈತರು ತಮ್ಮ ಹೋರಾಟ ಮುಂದುವರೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು, ಸರ್ಕಾರ ಮಹಿಳೆಯರ ಮೇಲೆ ಕೊಲೆ ಯತ್ನ ಕೇಸ್ ಹಾಕಿ ಅವಮಾನ ಮಾಡಿದೆ. ಇಂತಹ ನೂರು ಕೇಸ್ ದಾಖಲು ಮಾಡಿದ್ರೂ ಯಾವುದೇ ಕಾರಣಕ್ಕೂ ಯೋಜನೆಗೆ ಭೂಮಿ ಕೊಡಲ್ಲ ಎಂದು ರೈತರು ತಿಳಿಸಿದ್ದಾರೆ. ಇದನ್ನೂ ಓದಿ: ಮಲೆ ಮಹದೇಶ್ವರ ವನ್ಯಧಾಮದಲ್ಲಿ ಬೇಟೆಗಾರನಿಗೆ ಗುಂಡೇಟು
