ಉಡುಪಿ: ಎಸ್‌ಐಆರ್‌ನಲ್ಲಿ (SIR) ರಾಜ್ಯ ಸರ್ಕಾರದ ಯಾವುದೇ ಪಾತ್ರ ಇಲ್ಲ ಎಂದು ವಿಪಕ್ಷಗಳ ಆರೋಪಕ್ಕೆ ಸಚಿವ ಯು.ಟಿ.ಖಾದರ್ (U.T.Khader) ಕಿಡಿಕಾರಿದ್ದಾರೆ.
ಉಡುಪಿಯ (Udupi) ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರದ ಯಾವುದೇ ಪಾತ್ರವಿಲ್ಲ. ಚುನಾವಣಾ ಆಯೋಗಕ್ಕೆ ಅಗತ್ಯ ಸಹಕಾರ ನೀಡುವುದು ಮಾತ್ರ ಸರ್ಕಾರದ ಜವಾಬ್ದಾರಿ. ರಾಜಕೀಯ ಆರೋಪ ಮಾಡುವ ಬದಲು ಚುನಾವಣಾ ಆಯೋಗದ ಗಮನಕ್ಕೆ ವಿಷಯಗಳನ್ನು ತರಬೇಕು ಎಂದು ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: ಕೆ.ಆರ್ ಪುರಂ ವ್ಯಾಪ್ತಿಯ ಬಿಎಲ್‌ಒ ಸಸ್ಪೆಂಡ್ – ಕಾರಣ ಏನು?
ಯಾವುದೇ ಅರ್ಹ ಮತದಾರ ಮತದಾನದ ಹಕ್ಕು ಕಳೆದುಕೊಳ್ಳದಂತೆ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಎಸ್‌ಐಆರ್ ದುರುಪಯೋಗವಾಗಬಾರದು. ಅರ್ಹರ ಮತದಾನದ ಹಕ್ಕು ರಕ್ಷಣೆ ಆಗಬೇಕು ಎಂಬುದೇ ಕಾಂಗ್ರೆಸ್‌ನ ನಿಲುವು ಎಂದು ಹೇಳಿದರು.
ಬಿಡದಿ ಟೌನ್‌ಶಿಪ್ ವಿವಾದದ ಬಗ್ಗೆ ಮಾತನಾಡಿ, ಅಭಿವೃದ್ಧಿ ಕೆಲಸಗಳಿಗೆ ಆರಂಭದಲ್ಲಿ ವಿರೋಧಗಳು ಎದುರಾಗುವುದು ಹೊಸದೇನಲ್ಲ. ಇಂದಿರಾ ಗಾಂಧಿ ಕಲರ್ ಟಿವಿ ಹಾಗೂ ರಾಜೀವ್ ಗಾಂಧಿ ಕಂಪ್ಯೂಟರ್ ಪರಿಚಯಿಸಿದಾಗಲೂ ವಿರೋಧ ವ್ಯಕ್ತವಾಗಿತ್ತು. ರಾಜ್ಯದ ಭವಿಷ್ಯದ ಅಭಿವೃದ್ಧಿಗಾಗಿ ನಾಲ್ಕೈದು ಸೆಟಲೈಟ್ ಟೌನ್‌ಗಳ ಅಗತ್ಯವಿದೆ. ಭೂಮಿ ನೀಡುವವರಿಂದ ಮಾತ್ರ ಭೂಮಿ ಪಡೆದು, ಉಳಿದ ವಿಚಾರಗಳನ್ನು ಸರ್ಕಾರ ನೋಡಿಕೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.
108 ಆ್ಯಂಬುಲೆನ್ಸ್ ಸೇವೆ ಕುರಿತು ಮಹತ್ವದ ಘೋಷಣೆ ಮಾಡಿದ ಸಚಿವ ಖಾದರ್, ಇನ್ಮುಂದೆ ತುರ್ತು ಕರೆ ಬಂದ ಬಳಿಕ 15 ನಿಮಿಷದೊಳಗೆ ಅಂಬುಲೆನ್ಸ್ ಸ್ಥಳಕ್ಕೆ ತಲುಪುವಂತೆ ಮಾರ್ಗಸೂಚಿ ರೂಪಿಸಲಾಗುವುದು. ನಿಗದಿತ ಸಮಯದಲ್ಲಿ ತಲುಪದಿದ್ದರೆ ಸಂಬಂಧಿತ ಅಂಬುಲೆನ್ಸ್ ಚಾಲಕನಿಗೆ 5,000 ರೂಪಾಯಿ ದಂಡ ವಿಧಿಸುವ ವ್ಯವಸ್ಥೆ ಜಾರಿಗೆ ತರಲಾಗುವುದು. ಈ ಕುರಿತು ಕ್ಯಾಬಿನೆಟ್‌ನಲ್ಲಿ ಮಾರ್ಗಸೂಚಿ ಅನುಮೋದನೆಗೊಂಡ ಬಳಿಕ, ಮೂರು ತಿಂಗಳೊಳಗೆ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ ಎಂದರು. ಇದನ್ನೂ ಓದಿ: ನೆರವಿಗಾಗಿ ಮತದಾರರ ಸೌಲಭ್ಯ ಕೇಂದ್ರ, ಬಿಎಲ್‌ಒ ಸೌಲಭ್ಯ ಕೇಂದ್ರಗಳ ಸ್ಥಾಪನೆ – ಇಲ್ಲಿದೆ ಸಂಪೂರ್ಣ ವಿವರ
