ಶಿವಮೊಗ್ಗ: ತೀರ್ಥಹಳ್ಳಿ, ಚಿಕ್ಕಮಗಳೂರು, ಶೃಂಗೇರಿ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ(Heavy Rain) ತುಂಗಾ ನದಿ(Tunga River) ಉಕ್ಕಿ ಹರಿಯುತ್ತಿದ್ದು, ಶಿವಮೊಗ್ಗ ಜಿಲ್ಲೆಯ ಗಾಜನೂರು ಬಳಿ ಇರುವ ಪ್ರಸಿದ್ಧ ತುಂಗಾ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದೆ.
ಶಿವಮೊಗ್ಗ ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಮುಂಗಾರು ಮಳೆ ತೀವ್ರಗೊಂಡಿದ್ದು, ಜಿಲ್ಲೆಯ ಜಲಮೂಲಗಳಿಗೆ ಹೊಸ ಕಳೆ ಬಂದಿದೆ. ಈ ಮೂಲಕ ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲೇ ಅತ್ಯಂತ ಮೊದಲು ಭರ್ತಿಯಾದ ಜಲಾಶಯ ಎಂಬ ಹೆಗ್ಗಳಿಕೆಗೆ ತುಂಗಾ ಡ್ಯಾಂ(Tunga Dam) ಪಾತ್ರವಾಗಿದೆ.
ಜಲಾಶಯಕ್ಕೆ ಒಳಹರಿವು ಗಣನೀಯವಾಗಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಆಣೆಕಟ್ಟಿನ ಸುರಕ್ಷತೆಯ ದೃಷ್ಟಿಯಿಂದ ಅಧಿಕಾರಿಗಳು ನದಿಗೆ ನೀರನ್ನು ಹರಿಸುತ್ತಿದ್ದಾರೆ. ಒಟ್ಟು 10 ಕ್ರಸ್ಟ್ ಗೇಟ್‌ಗಳು ಹಾಗೂ 2 ಸ್ಲೂಯಿಸ್ ಗೇಟ್‌ಗಳ (ತೂಬು ಗೇಟ್) ಮೂಲಕ ತುಂಗಾ ನದಿಗೆ ಸದ್ಯ 18,051 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಇದನ್ನೂ ಓದಿ: ದೂದಗಂಗಾ, ವೇದಗಂಗಾ ನದಿಗಳು ಉಕ್ಕಿ ಹರಿದು 4ಕ್ಕೂ ಹೆಚ್ಚು ಸೇತುವೆಗಳು ಜಲಾವೃತ

ತುಂಗಾ ಜಲಾಶಯಕ್ಕೆ 20,565 ಕ್ಯೂಸೆಕ್ ಒಳ ಹರಿವು ಇದ್ದು 18,051 ಕ್ಯೂಸೆಕ್ ನೀರನ್ನು ಹೊರ ಬೀಡಲಾಗುತ್ತಿದೆ. 588.24 ಮೀಟರ್ ಗರಿಷ್ಠ ಮಟ್ಟದ ಜಲಾಶಯದ ಸಂಪೂರ್ಣ ಭರ್ತಿಯಾಗಿದ್ದು 3.24 ಟಿಎಂಸಿ ಸಂಗ್ರಹಗೊಂಡಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಧಾರಾಕಾರ ಮಳೆ: ಉರುಳಿ ಬಿದ್ದ ಬೃಹತ್ ಹುಣಸೆ ಮರ, 4 ಮನೆಗಳಿಗೆ ಹಾನಿ
ಶೃಂಗೇರಿ ಮತ್ತು ತೀರ್ಥಹಳ್ಳಿಯಲ್ಲಿ ಮಳೆಯ ಪ್ರಮಾಣ ಹೀಗೆಯೇ ಮುಂದುವರಿದರೆ ಒಳಹರಿವು ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಹಾಗಾಗಿ ನದಿಗೆ ಹರಿಸುವ ನೀರಿನ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುನ್ನೆಚ್ಚರಿಕಾ ಕ್ರಮವಾಗಿ ತುಂಗಾ ನದಿ ಪಾತ್ರದ ಇಕ್ಕೆಲಗಳಲ್ಲಿರುವ ಸಾರ್ವಜನಿಕರು ಹಾಗೂ ನದಿ ತೀರದ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮತ್ತು ನದಿಗೆ ಇಳಿಯದಂತೆ ಜಿಲ್ಲಾಡಳಿತ ಹಾಗೂ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಜಾಗೃತಿ ಮೂಡಿಸಿದ್ದಾರೆ. ಇದನ್ನೂ ಓದಿ: ಆರು ತಿಂಗಳ ಬಳಿಕ ಕೆಆರ್‌ಎಸ್ ಡ್ಯಾಂಗೆ 1,000 ಕ್ಯೂಸೆಕ್ ನೀರು ಒಳಹರಿವು
