ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಶೋಪಿಯಾನ್ ಜಿಲ್ಲೆಯ ಮೀಮಂದಾರ್ ಹಾಗೂ ಸೈದ್ಪೋರಾ ಭಾಗದ ದಟ್ಟವಾದ ಹಣ್ಣಿನ ತೋಟವೊಂದರಲ್ಲಿ ಅಡಗಿ ಕುಳಿತಿರುವ ಇಬ್ಬರು ಲಷ್ಕರ್-ಎ-ತೊಯ್ಬಾ (LeT) ಸಂಘಟನೆಯ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಭೀಕರ ಗುಂಡಿನ ಚಕಮಕಿ ಮುಂದುವರಿದಿದೆ.
ಭಾರತೀಯ ಸೇನೆ, ಜಮ್ಮು-ಕಾಶ್ಮೀರ ಪೊಲೀಸ್ ಹಾಗೂ ಸಿಆರ್‌ಪಿಎಫ್ (CRPF) ಪಡೆಗಳು ಜಂಟಿಯಾಗಿ ಈ ಬೃಹತ್ ಜಂಟಿ ಕಾರ್ಯಾಚರಣೆಯನ್ನು ನಡೆಸುತ್ತಿದ್ದು, ಉಗ್ರರು ತೋಟದಿಂದ ತಪ್ಪಿಸಿಕೊಳ್ಳದಂತೆ ಇಡೀ ಪ್ರದೇಶವನ್ನು ಸುತ್ತುವರೆಯಲಾಗಿದೆ.
ಭದ್ರತಾ ಪಡೆಗಳ ಬಲೆಗೆ ಬಿದ್ದಿರುವ ಇಬ್ಬರು ಉಗ್ರರನ್ನು ದಕ್ಷಿಣ ಕಾಶ್ಮೀರದ ಕುಲ್ಗಾಮ್ ಮೂಲದ ಜಕೀರ್ ಅಹ್ಮದ್ ಗಣೈ (Zakir Ahmad Ganie) ಮತ್ತು ಆತನ ಸಹಚರ ಲತೀಫ್ ಭಟ್ ಎಂದು ಗುರುತಿಸಲಾಗಿದೆ.
ಇದರಲ್ಲಿ ಜಕೀರ್ ಗಣೈ ಅತ್ಯಂತ ಅಪಾಯಕಾರಿ ಉಗ್ರನಾಗಿದ್ದು, ಈತನನ್ನು ಭದ್ರತಾ ಸಂಸ್ಥೆಗಳು ‘A++’ ಕೆಟಗರಿ ಅಡಿ ಸೇರಿಸಿತ್ತು. ಈತ ಹಲವು ಅಮಾಯಕರ ಹತ್ಯೆ ಪ್ರಕರಣಗಳು ಹಾಗೂ 2025 ರ ಪಹಲ್ಗಾಮ್ ದಾಳಿ ಪ್ರಕರಣದಲ್ಲಿ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ನ್ಯಾಯಾಲಯವು ಈತನ ವಿರುದ್ಧ ಪ್ರಕಟಣಾ ನೋಟಿಸ್ ಕೂಡ ಹೊರಡಿಸಿತ್ತು.

ಕ್ಯಾಮೆರಾದಲ್ಲಿ ಪತ್ತೆ:
ಶುಕ್ರವಾರ ತಡರಾತ್ರಿ ಈ ಇಬ್ಬರು ಉಗ್ರರ ಚಲನವಲನಗಳು ಭದ್ರತಾ ಪಡೆಗಳ ನಿಗಾ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಶನಿವಾರ ಸೇನಾ ಪಡೆಗಳು ಹತ್ತಿರ ಬರುತ್ತಿದ್ದಂತೆ ಉಗ್ರರು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು. ಇದನ್ನೂ ಓದಿ: ಚಿನ್ನದಿಂದ ಆದಾಯ, ಠೇವಣಿ ಇಟ್ಟರೆ ಕಾಸು – ಏನಿದು ಕೇಂದ್ರದ ಹೊಸ ಯೋಜನೆ?
ಇಂಟರ್ನೆಟ್ ಕಡಿತ:
ಕಾರ್ಯಾಚರಣೆಗೆ ಯಾವುದೇ ರೀತಿಯಲ್ಲಿ ಸ್ಥಳೀಯವಾಗಿ ಅಡ್ಡಿ ಉಂಟಾಗಬಾರದು ಹಾಗೂ ಉಗ್ರರಿಗೆ ಮಾಹಿತಿ ರವಾನೆಯಾಗಬಾರದು ಎಂಬ ಮುನ್ನೆಚ್ಚರಿಕೆಯಿಂದ ಶೋಪಿಯಾನ್ ಭಾಗದಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ದಕ್ಷಿಣ ಕಾಶ್ಮೀರವನ್ನು ಸೆಂಟ್ರಲ್ ಕಾಶ್ಮೀರದೊಂದಿಗೆ ಸಂಪರ್ಕಿಸುವ ಪ್ರಮುಖ ಕಾರಿಡಾರ್ ಆಗಿರುವ ಶೋಪಿಯಾನ್‌ನಲ್ಲಿ ಜಕೀರ್‌ನಂತಹ ಉನ್ನತ ಉಗ್ರನನ್ನು ಮಟ್ಟಹಾಕುವುದು ಉಗ್ರರ ಜಾಲವನ್ನು ಧ್ವಂಸಗೊಳಿಸಲು ಅತ್ಯಂತ ನಿರ್ಣಾಯಕವಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
