ನವದೆಹಲಿ: ದೇಶದ ಮನೆಗಳಲ್ಲಿ ಹಾಗೂ ಬ್ಯಾಂಕ್ ಲಾಕರ್‌ಗಳಲ್ಲಿ ಸುಮ್ಮನೆ ಬಿದ್ದಿರುವ ಚಿನ್ನವನ್ನು (Gold) ಸದ್ಬಳಕೆ ಮಾಡಿಕೊಳ್ಳಲು ಮತ್ತು ಆರ್ಥಿಕತೆಗೆ ಶಕ್ತಿ ತುಂಬಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ, ಮುಂಬರುವ ಎರಡು ವಾರಗಳಲ್ಲಿ ಕೇಂದ್ರ ಸರ್ಕಾರವು ಮತ್ತಷ್ಟು ಆಕರ್ಷಕವಾದ, ಪರಿಷ್ಕೃತ ಚಿನ್ನ ನಗದೀಕರಣ ಯೋಜನೆಯನ್ನು (Revamped Gold Monetisation Scheme) ಅಧಿಕೃತವಾಗಿ ಘೋಷಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಹಳೆಯ ಯೋಜನೆಯಲ್ಲಿ ಕೇವಲ ಬ್ಯಾಂಕ್‌ಗಳ ಮೂಲಕ ಮಾತ್ರ ಚಿನ್ನವನ್ನು ಠೇವಣಿ ಇಡಲು ಅವಕಾಶವಿತ್ತು. ಆದರೆ ಪರಿಷ್ಕೃತ ನಿಯಮಾವಳಿಗಳ ಪ್ರಕಾರ, ದೇಶದಾದ್ಯಂತ ಇರುವ ಪ್ರಮುಖ ಜ್ಯುವೆಲ್ಲರಿ ಸಂಸ್ಥೆಗಳನ್ನು ಚಿನ್ನ ಸಂಗ್ರಹಣಾ ಪಾಲುದಾರರು(Collection Partners) ಆಗಿ ಸೇರಿಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಇದರಿಂದ ಸಾರ್ವಜನಿಕರು ತಮಗೆ ಹತ್ತಿರದ ವಿಶ್ವಾಸಾರ್ಹ ಜ್ಯುವೆಲ್ಲರಿ ಅಂಗಡಿಗಳಲ್ಲೇ ತಮ್ಮ ಬಳಿಯಿರುವ ಚಿನ್ನವನ್ನು ಠೇವಣಿ ಇಡಬಹುದಾಗಿದೆ.
ಹೊಸ ಪ್ರಸ್ತಾಪದ ಪ್ರಕಾರ, ಗ್ರಾಹಕರು ತಮ್ಮ ಚಿನ್ನದ ಆಭರಣಗಳನ್ನು ತಕ್ಷಣವೇ ಕರಗಿಸಲು ಇಷ್ಟಪಡದಿದ್ದರೆ, ಅದನ್ನು ಡಿಜಿಟಲ್ (Digital) ರೂಪದಲ್ಲಿ ಕ್ರೆಡಿಟ್ ಮಾಡುವ ವ್ಯವಸ್ಥೆಯನ್ನು ತರಲಾಗುತ್ತಿದೆ. ಇದರಿಂದ ಹಳೆಯ ಒಡವೆಗಳನ್ನು ಕರಗಿಸುವ ಭಯ ದೂರವಾಗಲಿದೆ.
ಹಳೆಯ ಚಿನ್ನವನ್ನು ಜಮಾವಣೆ ಮಾಡುವಾಗ ಎದುರಾಗುತ್ತಿದ್ದ ಐಟಿ (Income Tax) ತಪಾಸಣೆಯ ಭಯ ಮತ್ತು ಕಾಗದ ಪತ್ರಗಳ ಕಿರಿಕಿರಿ ನಿವಾರಿಸಲು ಪ್ರಕ್ರಿಯೆಯನ್ನು ಸರಳಗೊಳಿಸಲಾಗುತ್ತಿದೆ. ಈ ಯೋಜನೆಯ ಬಡ್ಡಿಯ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ ಎನ್ನಲಾಗುತ್ತಿದೆ. ಇದನ್ನೂ ಓದಿ: ಭಾರತದ ದೇವಾಲಯಗಳನ್ನು ನಿರ್ವಹಿಸೋದ್ಯಾರು? – ರಾಜ್ಯಗಳ ಪಾತ್ರ ಏನು?

ಯೋಜನೆಯ ಉದ್ದೇಶವೇನು?
ಭಾರತೀಯರ ಮನೆಗಳಲ್ಲಿ ಅಂದಾಜು 25,000 ದಿಂದ 30,000 ಟನ್‌ಗಳಷ್ಟು ನಿಷ್ಪ್ರಯೋಜಕ ಚಿನ್ನ ಬಿದ್ದಿದೆ ಎಂದು ಅಂದಾಜಿಸಲಾಗಿದೆ. ಹೊಸ ಯೋಜನೆಯ ಮೂಲಕ ಕನಿಷ್ಠ 1,000 ಟನ್ ಚಿನ್ನವನ್ನು ಆರ್ಥಿಕ ವ್ಯವಸ್ಥೆಯೊಳಗೆ ತರುವ ಗುರಿ ಹೊಂದಲಾಗಿದೆ.
ಭಾರತವು ಜಗತ್ತಿನಲ್ಲೇ ಅತಿ ಹೆಚ್ಚು ಚಿನ್ನ ಆಮದು ಮಾಡಿಕೊಳ್ಳುವ ದೇಶಗಳಲ್ಲೊಂದಾಗಿದೆ. ದೇಶದ ಒಳಗಿರುವ ಚಿನ್ನವೇ ಮಾರುಕಟ್ಟೆಗೆ ಚಲಾವಣೆಗೆ ಬಂದರೆ, ವಿದೇಶದಿಂದ ಆಮದು ಮಾಡಿಕೊಳ್ಳುವುದು ಗಣನೀಯವಾಗಿ ಕಡಿಮೆಯಾಗಿ, ದೇಶದ ಚಾಲ್ತಿ ಖಾತೆ ಕೊರತೆ (Current Account Deficit) ನಿಯಂತ್ರಣಕ್ಕೆ ಬರಲಿದೆ. ಇದನ್ನೂ ಓದಿ: ಜು.20 ರಿಂದ ಸಂಸತ್ ಮುಂಗಾರು ಅಧಿವೇಶನ – ನೀಟ್, ಮಹಿಳಾ ಮೀಸಲಾತಿ ಸೇರಿ ಹಲವು ಮಹತ್ವದ ವಿಷಯಗಳ ಚರ್ಚೆ ಸಾಧ್ಯತೆ
ಚಿನ್ನದ ಆಮದು ಕಡಿಮೆಯಾದಷ್ಟೂ ಭಾರತೀಯ ರೂಪಾಯಿಯ ಮೌಲ್ಯ ಅಮೆರಿಕನ್ ಡಾಲರ್ ಎದುರು ಬಲಿಷ್ಠಗೊಳ್ಳುತ್ತದೆ.ವರ್ತಕರಿಗೆ ಅನುಕೂಲ: ಸ್ಥಳೀಯ ಆಭರಣ ವ್ಯಾಪಾರಿಗಳಿಗೆ ಕಡಿಮೆ ವೆಚ್ಚದಲ್ಲಿ ತಯಾರಿಕೆಗೆ ಬೇಕಾದ ಚಿನ್ನ ದೊರೆತು, ಉದ್ಯಮ ವ್ಯವಸ್ಥೆ ಸುಧಾರಿಸುತ್ತದೆ
ಹಳೆಯ ಯೋಜನೆಗೆ ಹಿನ್ನಡೆಯಾಗಿದ್ದು ಯಾಕೆ?
2015 ರಲ್ಲಿ ಜಾರಿಗೆ ತರಲಾಗಿದ್ದ ಚಿನ್ನ ನಗದೀಕರಣ ಯೋಜನೆ (GMS) ನಿರೀಕ್ಷಿತ ಯಶಸ್ಸು ಕಂಡಿರಲಿಲ್ಲ. ಹಳೆಯ ಯೋಜನೆಯಡಿ ಕೇವಲ 38 ರಿಂದ 39 ಟನ್ ಚಿನ್ನ ಮಾತ್ರ ಸಂಗ್ರಹವಾಗಿತ್ತು. ಸಾರ್ವಜನಿಕರಿಗೆ ಬ್ಯಾಂಕ್‌ಗಳ ಮೇಲಿದ್ದ ದಾಖಲಾತಿಗಳ ಭಯ, ತೆರಿಗೆ ಪರಿಶೀಲನೆಯ ಆತಂಕ ಮತ್ತು ಹಿರಿಯರಿಂದ ಬಂದಿರುವ ಚಿನ್ನದ ಮೇಲಿನ ಭಾವನಾತ್ಮಕವಾಗಿ ನಂಟಿನಿಂದ ಒಡವೆಗಳನ್ನು ಕರಗಿಸಲು ಹಿಂದೇಟು ಹಾಕಿದ್ದಾರೆ.
ಈ ಎಲ್ಲಾ ಲೋಪದೋಷಗಳನ್ನು ಸರಿಪಡಿಸಿ, ಹಬ್ಬದ ಸೀಸನ್ ಆರಂಭವಾಗುವ ಮುನ್ನವೇ ಹೆಚ್ಚು ಸುಲಭ ಹಾಗೂ ಜನಸ್ನೇಹಿಯಾದ ಹೊಸ ನಿಯಮಾವಳಿಗಳನ್ನು ಜಾರಿಗೆ ತರಲು ಆರ್‌ಬಿಐ (RBI), ಹಣಕಾಸು ಸಚಿವಾಲಯ ಹಾಗೂ ಬುಲಿಯನ್ ಮಾರುಕಟ್ಟೆಯ ತಜ್ಞರು ಜಂಟಿ ಸಭೆಗಳನ್ನು ನಡೆಸಿ ಅಂತಿಮ ರೂಪುರೇಷೆ ಸಿದ್ಧಪಡಿಸುತ್ತಿದ್ದಾರೆ ಎಂದು ವರದಿಯಾಗಿದೆ.
