ಮಂಡ್ಯ: ಹಳೆ ಮೈಸೂರು ಭಾಗದ ಜೀವನಾಡಿ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ (Srirangapatna) ತಾಲೂಕಿನ ಕೆಆರ್‌ಎಸ್ ಜಲಾಶಯಕ್ಕೆ (KRS Dam) ಬರೊಬ್ಬರಿ ಆರು ತಿಂಗಳ ಸುದೀರ್ಘ ಕಾಯುವಿಕೆಯ ನಂತರ ಒಂದು ಸಾವಿರ ಕ್ಯೂಸೆಕ್ ನೀರು ಒಳಹರಿವು ಹರಿದುಬಂದಿದೆ.
ಕಾವೇರಿ ಜಲಾನಯನ ಪ್ರದೇಶದ ಕೆಲವೆಡೆ ಜಿಟಿಜಿಟಿ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ಬರುವ ನೀರಿನ ಪ್ರಮಾಣದಲ್ಲಿ ಅಲ್ಪಮಟ್ಟದ ಏರಿಕೆ ಕಂಡುಬಂದಿದೆ. ಇಂದು ಜಲಾಶಯಕ್ಕೆ 1,449 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, ಜಲಾಶಯದಿಂದ 760 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ. 124.80 ಗರಿಷ್ಠ ಮಟ್ಟದ ಕೆಆರ್‌ಎಸ್ ಸದ್ಯ ಜಲಾಶಯದ ನೀರಿನ ಮಟ್ಟ 80.90 ಅಡಿಗೆ ತಲುಪಿದೆ. ಇನ್ನೂ 49.452 ಟಿಎಂಸಿ ಗರಿಷ್ಠ ಸಾಮರ್ಥ್ಯದ ಡ್ಯಾಂನಲ್ಲಿ ಈಗ 11.188 ಟಿಎಂಸಿ ನೀರಿದ್ದು, ಇದರಲ್ಲಿ 5 ಟಿಎಂಸಿ ಡೆಡ್ ಸ್ಟೋರೇಜ್ ಆಗಿದೆ. ಇದನ್ನೂ ಓದಿ: ಜನರಿಗೆ ಭಯ ಹುಟ್ಟಿಸುವ ರೀತಿ ಬಂದೂಕು ಹಿಡಿದು ರೀಲ್ಸ್ – ಮೂವರು ಯುವಕರ ಬಂಧನ
ಕಳೆದ ವರ್ಷ ಇದೇ ದಿನಕ್ಕೆ ಹೋಲಿಸಿದರೆ ಈ ಬಾರಿಯ ಪರಿಸ್ಥಿತಿ ತೀರಾ ಆತಂಕಕಾರಿಯಾಗಿದೆ. ಕಳೆದ ವರ್ಷ ಇದೇ ದಿನ ಜಲಾಶಯಕ್ಕೆ ಬರೋಬ್ಬರಿ 25,757 ಕ್ಯೂಸೆಕ್ ಒಳಹರಿವು ಇತ್ತು. ಅಷ್ಟೇ ಅಲ್ಲದೆ, ಜಲಾಶಯ ಭರ್ತಿಯಾಗಿ ಭೋರ್ಗರೆಯುತ್ತಾ 40 ಸಾವಿರ ಕ್ಯೂಸೆಕ್‌ಗೂ ಅಧಿಕ ನೀರನ್ನು ನದಿಗೆ ಹರಿಸಲಾಗಿತ್ತು. ಆದರೆ ಈ ವರ್ಷ ಮುಂಗಾರು ಕೈಕೊಟ್ಟಿರುವುದರಿಂದ ಜಲಾಶಯದ ಸುತ್ತ ಮುತ್ತ ಬರದ ಛಾಯೆ ಆವರಿಸಿದೆ. ಇದನ್ನೂ ಓದಿ: ಜಡಿ ಮಳೆಗೆ ಕುಸಿದ ಬೃಹತ್ ತಡೆಗೋಡೆ – 2 ಮನೆಗಳು ಜಖಂ
