ಟೋಕಿಯೋ: ಜಪಾನ್‌ನ (Japan) ದಕ್ಷಿಣ ಭಾಗದ ಕ್ಯುಶು ದ್ವೀಪದಲ್ಲಿರುವ ಕುಮಾಮೊಟೊ ಪ್ರಾಂತ್ಯದಲ್ಲಿ ಸಂಭವಿಸಿದ್ದ 7.1 ತೀವ್ರತೆಯ ಪ್ರಬಲ ಭೂಕಂಪದಿಂದಾಗಿ (Earthquake) 13 ಜನ ಸಾವನ್ನಪ್ಪಿದ್ದಾರೆ ಎಂದು ಪ್ರಧಾನಿ ಸನಾಯೆ ತಕೈಚಿ (Sanae Takaichi) ಅವರು ಮಾಹಿತಿ ನೀಡಿದ್ದಾರೆ.
ಯುಎಸ್ ಜಿಯೋಲಾಜಿಕಲ್ ಸರ್ವೆ ಪ್ರಕಾರ, ಭೂಕಂಪದ ತೀವ್ರತೆಯು 6.8 ರಷ್ಟಿದ್ದು, 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ. ಆದರೆ ಆರಂಭಿಕ ವರದಿಗಳು ಇದು 7.1 ತೀವ್ರತೆ ಹೊಂದಿತ್ತು ಎಂದು ತಿಳಿಸಿವೆ. ಮಂಗಳವಾರ ಮಧ್ಯಾಹ್ನ 4:27ಕ್ಕೆ ಸಂಭವಿಸಿದ ಈ ಪ್ರಬಲ ನಡುಕದಿಂದಾಗಿ ಹಲವೆಡೆ ಬೆಂಕಿ ಕಾಣಿಸಿಕೊಂಡಿದ್ದು, ಹಲವೆಡೆ ಕಟ್ಟಡಗಳು ಕುಸಿದಿದ್ದು, ಸೇತುವೆಗಳು ಜಖಂಗೊಂಡಿವೆ ಮತ್ತು ಗೂಡ್ಸ್ ರೈಲುಗಳು ಉರುಳಿಬಿದ್ದಿವೆ. ಇದನ್ನೂ ಓದಿ: ಜಪಾನ್‌ನಲ್ಲಿ ಮತ್ತೆ ಭೂಕಂಪ; ಸುನಾಮಿ ಎಚ್ಚರಿಕೆ, ಹಲವರಿಗೆ ಗಾಯ
ಭೂಕಂಪದ ಬಳಿಕ ಜಪಾನ್ ಸರ್ಕಾರ ಸುನಾಮಿ ಎಚ್ಚರಿಕೆ ನೀಡಿದೆ. ಒಂದು ಮೀಟರ್ ಎತ್ತರದ ಅಲೆಗಳು ಏಳುವ ಸಾಧ್ಯತೆ ಇರುವುದರಿಂದ ಕರಾವಳಿ ಭಾಗದ ಜನರು ತಕ್ಷಣ ಸುರಕ್ಷಿತ ಹಾಗೂ ಎತ್ತರದ ಪ್ರದೇಶಗಳಿಗೆ ತೆರಳುವಂತೆ ಸೂಚಿಸಲಾಗಿದೆ.
ಭೂಕಂಪದ ಬಳಿಕ ಪರಮಾಣು ವಿದ್ಯುತ್ ಸ್ಥಾವರಗಳಲ್ಲಿ ಯಾವುದೇ ತಕ್ಷಣದ ಅಸಹಜತೆ ಕಂಡುಬಂದಿಲ್ಲ ಎಂದು ಪರಮಾಣು ನಿಯಂತ್ರಣ ಪ್ರಾಧಿಕಾರ ತಿಳಿಸಿದೆ. ಆದರೂ ಪರಿಸ್ಥಿತಿಯ ಮೇಲೆ ಅಧಿಕಾರಿಗಳು ನಿಗಾ ವಹಿಸಿದ್ದಾರೆ.
ಕುಮಾಮೊಟೊ, ನಾಗಸಾಕಿ, ಕಾಗೋಶಿಮಾ, ಫುಕುವೋಕಾ, ಸಾಗಾ, ಓಯಿಟಾ ಹಾಗೂ ಮಿಯಾಜಾಕಿ ಸೇರಿದಂತೆ ಹಲವು ಪ್ರಾಂತ್ಯಗಳಿಗೆ ತುರ್ತು ಎಚ್ಚರಿಕೆ ನೀಡಲಾಗಿದೆ. ಇದು ಒಂದು ವಾರದೊಳಗೆ ಜಪಾನ್‌ನಲ್ಲಿ ಸಂಭವಿಸಿದ ಎರಡನೇ ಪ್ರಬಲ ಭೂಕಂಪವಾಗಿದೆ. ಜೂನ್ 25ರಂದು ಉತ್ತರ ಜಪಾನ್‌ನಲ್ಲಿ 7.2 ತೀವ್ರತೆಯ ಭೂಕಂಪ ಸಂಭವಿಸಿದ್ದರೂ ಹೆಚ್ಚಿನ ಹಾನಿ ಆಗಿರಲಿಲ್ಲ.ಇದನ್ನೂ ಓದಿ: ಪಶ್ಚಿಮ ಏಷ್ಯಾದಲ್ಲಿ ಮತ್ತೆ ಉದ್ವಿಗ್ನ – ಇರಾಕ್‌ನಲ್ಲಿರೋ ಅಮೆರಿಕದ ದೂತವಾಸ ಕಚೇರಿ ಬಳಿ ಇರಾನ್ ಡ್ರೋನ್ ದಾಳಿ
