ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ (Belagavi) ಕಳೆದ ಮೂರ್ನಾಲ್ಕು ದಿನಗಳಿಂದ ಬಿಟ್ಟೂಬಿಡದೇ ಧಾರಾಕಾರ ಮಳೆ ಹಾಗೂ ಬಿರುಗಾಳಿ ಸುರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಭಾರಿ ಮಳೆಯ (Heavy Rain) ಆರ್ಭಟಕ್ಕೆ ನಗರದ ಖಾಸಬಾಗದ ಉಪ್ಪಾರ ಗಲ್ಲಿಯಲ್ಲಿ ಬೃಹತ್ ಹುಣಸೆ ಮರ ಹಾಗೂ ರೆಂಬೆಗಳು ಧರೆಗುರುಳಿದ್ದು, ನಾಲ್ಕು ಮನೆಗಳಿಗೆ (House) ತೀವ್ರ ಹಾನಿಯಾಗಿದೆ.
ಮರ ಬಿದ್ದ ರಭಸಕ್ಕೆ ಸ್ಥಳೀಯ ನಿವಾಸಿಗಳಾದ ಅನಿಲ್ ಮುಟ್ಟೇಕರ್, ಆನಂದ ಭದ್ವಾಂಕರ್, ಏಕನಾಥ ಭದ್ವಾಂಕರ್ ಹಾಗೂ ಪ್ರಶಾಂತ ಗೋರ್ಲೆ ಎಂಬುವವರ ಮನೆಗಳು ಜಖಂಗೊಂಡಿವೆ. ಘಟನೆಯ ವೇಳೆ ಮನೆಯಲ್ಲಿದ್ದ ಕೆಲ ಅಗತ್ಯ ವಸ್ತುಗಳು ನಾಶವಾಗಿದ್ದು, ಬಡ ಕುಟುಂಬಗಳು ಬೀದಿಗೆ ಬೀಳುವಂತಾಗಿದೆ.
ಸದ್ಯ ಮನೆ ಕಳೆದುಕೊಂಡು ಸಂಕಷ್ಟದಲ್ಲಿರುವ ಸಂತ್ರಸ್ತ ಕುಟುಂಬಸ್ಥರು ಸರ್ಕಾರ ಹಾಗೂ ಅಧಿಕಾರಿಗಳು ತಮಗೆ ಸೂಕ್ತ ಪರಿಹಾರ ನೀಡಬೇಕೆಂದು ಕಣ್ಣೀರಿಡುತ್ತಾ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಆರು ತಿಂಗಳ ಬಳಿಕ ಕೆಆರ್‌ಎಸ್ ಡ್ಯಾಂಗೆ 1,000 ಕ್ಯೂಸೆಕ್ ನೀರು ಒಳಹರಿವು
ವಿಷಯ ತಿಳಿಯುತ್ತಿದ್ದಂತೆ ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಜಂಟಿಯಾಗಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಸದ್ಯ ಬಿದ್ದಿರುವ ಬೃಹತ್ ಮರವನ್ನು ಕತ್ತರಿಸಿ ರಸ್ತೆಯಿಂದ ತೆರವುಗೊಳಿಸುವ ಕಾರ್ಯಾಚರಣೆ ತೀವ್ರಗತಿಯಲ್ಲಿ ಸಾಗಿದೆ.
