ತಿರುವನಂತಪುರಂ: ಕೇರಳದಲ್ಲಿ (Kerala) ಮಳೆ ಅಬ್ಬರ ಶುರುವಾಗಿದ್ದು, ಕಾವೇರಿಗೆ ಮತ್ತಷ್ಟು ನೀರು ಬರುವ ಸಾಧ್ಯತೆ ಇದೆ. ಕೇರಳದ 8 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ವಯನಾಡು, ಶಬರಿಮಲೆ, ಪಂಪಾ ಪ್ರದೇಶದಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ವಯನಾಡಿನಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಬರಿಮಲೆ ಪ್ರದೇಶದಲ್ಲಿ ಆತಂಕ ಹೆಚ್ಚಿಸಿದೆ. ತೆಕ್ಕೇಕರದಲ್ಲಿ ಮನೆ ಕುಸಿದು ಅಮ್ಮ-ಮಗ ಸಾವನ್ನಪ್ಪಿದ್ದಾರೆ. ಪತ್ತನಂತಿಟ್ಟ ಜಿಲ್ಲೆಯ ರಾನ್ನಿ ನಗರದಲ್ಲಿ ಜಲಾವೃತವಾಗಿದೆ. ಇಡುಕ್ಕಿ (Idukki) ಹಾಗೂ ಕೊಟ್ಟಾಯಂ ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಇದುವರೆಗೆ 6 ಮಂದಿ ಮೃತಪಟ್ಟಿದ್ದಾರೆ. ಹಲವರು ಮಣ್ಣಿನಡಿಯೇ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ರಕ್ಷಣಾ ತಂಡಗಳಿAದ ಕಾರ್ಯಾಚರಣೆ ಮುಂದುವರಿದಿದೆ. ಇದನ್ನೂ ಓದಿ: ಕೇರಳ | ಇಡುಕ್ಕಿಯಲ್ಲಿ ಭಾರೀ ಮಳೆಗೆ ಭೂಕುಸಿತ – ಮೂವರು ಸಾವು, ಹಲವರು ಮಣ್ಣಿನಡಿ ಸಿಲುಕಿರುವ ಶಂಕೆ
ಇಡುಕ್ಕಿಯ ವಾಗಮನ್ ಪ್ರದೇಶದಲ್ಲಿ ಭೂಕುಸಿತ ಮನೆ ಮೇಲೆ ಬಿದ್ದ ಪರಿಣಾಮ ವೈಕಂ ಮೂಲದ ಪ್ರಭಾಕರನ್ ನಾಯರ್ ಮೃತಪಟ್ಟಿದ್ದಾರೆ. ಆದರೆ, ಅವರ ಮೃತದೇಹ ಇನ್ನೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊಚ್ಚಿ-ಧನುಷ್ಕೋಡಿ ರಾಷ್ಟ್ರೀಯ ಹೆದ್ದಾರಿಯ ಅಡಿಮಾಲಿ ಸಮೀಪದ ಮಚ್ಚಿಪ್ಲಾವು ಪ್ರದೇಶದಲ್ಲಿ ಭೂಕುಸಿತ ಸಂಭವಿಸಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಇದೇ ದಿನ ಇಡುಕ್ಕಿಯ ಮತ್ತೊಂದು ಭಾಗದಲ್ಲಿ ಭೂಕುಸಿತ ಮನೆ ಮೇಲೆ ಬಿದ್ದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ಕೊಟ್ಟಾಯಂ ಜಿಲ್ಲೆಯ ಪೂಂಜಾರ್‌ನ ಪಯ್ಯನಿತ್ತೊಟ್ಟಂ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಜೋಹ್ನಿಯವರ ಪುತ್ರ ಜೋಸೆಫ್ ಮೃತಪಟ್ಟಿದ್ದಾರೆ. ಅವರ ತಾಯಿ ಮಣ್ಣಿನಡಿ ಸಿಲುಕಿರುವ ಶಂಕೆ ಇದ್ದು, ಅವರನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ಮುಂದುವರಿದಿದೆ. ಕೊಟ್ಟಾಯಂ ಜಿಲ್ಲೆಯ ಎರಟ್ಟುಪೇಟ, ಕಂಜಿರಪ್ಪಳ್ಳಿ, ಕೂಟ್ಟಿಕ್ಕಲ್ ಹಾಗೂ ಎರುಮೇಲಿ ಪ್ರದೇಶಗಳಲ್ಲಿ ಭಾರೀ ಮಳೆಯಿಂದ ಪ್ರವಾಹ ಉಂಟಾಗಿದೆ. ಹಲವು ವಸತಿ ಪ್ರದೇಶಗಳು ಜಲಾವೃತಗೊಂಡಿದ್ದು, ರಸ್ತೆ ಸಂಪರ್ಕ ಕಡಿತವಾಗಿದೆ. ರಕ್ಷಣಾ ಕಾರ್ಯಾಚರಣೆಗಳನ್ನು ದೊಡ್ಡ ಮಟ್ಟದಲ್ಲಿ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಮಾಲತಿ ಹೊಳೆಯಲ್ಲಿ ಸಿಲುಕಿದ ಕಾರು – ಸಂಕಷ್ಟದಲ್ಲಿದ್ದವರನ್ನು ಪ್ರಾಣದ ಹಂಗು ತೊರೆದು ರಕ್ಷಿಸಿದ ಸ್ಥಳೀಯರು
