ಉಡುಪಿ: ರಸ್ತೆ ದಾಟುತ್ತಿದ್ದ ವೇಳೆ ಖಾಸಗಿ ಬಸ್‌ವೊಂದು ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ನಗರದ ನೈವೇದ್ಯ ಹೋಟೆಲ್ ಸಮೀಪದ ಲಯನ್ಸ್ ಸರ್ಕಲ್ ಬಳಿ ನಡೆದಿದೆ.
ಮೃತರನ್ನು ಬಿಜೆಪಿ ಮುಖಂಡ ಮಂಜುಕೊಳ ಅವರ ಪತ್ನಿ, ನಗರಸಭೆಯ ಮಾಜಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಎಂದು ಗುರುತಿಸಲಾಗಿದೆ. ಕಡಿಯಾಳಿಯ ಬಿಜೆಪಿ ಕಚೇರಿಯಲ್ಲಿ ಸಭೆ ಮುಗಿಸಿ, ತಾಲೂಕು ಪಂಚಾಯತ್ ಕಟ್ಟಡದಲ್ಲಿರುವ ಉಡುಪಿ ಶಾಸಕರ ಕಚೇರಿಗೆ ತೆರಳಿದ್ದು, ಅಲ್ಲಿಂದ ಅವರು ಮನೆಗೆ ಹೋಗಲು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಖಾಸಗಿ ಬಸ್ಸೊಂದು ಡಿಕ್ಕಿ ಹೊಡೆದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದುಬಂದಿದೆ.
ಮಾಹಿತಿ ತಿಳಿದು ಉಡುಪಿ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಅಪಘಾತದ ಕುರಿತು ತನಿಖೆ ಆರಂಭಿಸಿದ್ದಾರೆ.
