ಅಮರಾವತಿ: ಆಂಧ್ರಪ್ರದೇಶದ (Andhra Pradesh) ರಾಜಮಂಡ್ರಿಯಲ್ಲಿ (Rajahmundry) ಕಾರು ಡಿಕ್ಕಿ (Car Accident) ಹೊಡೆದು ತೀವ್ರವಾಗಿ ಗಾಯಗೊಂಡಿದ್ದ 28 ವರ್ಷದ ವೈದ್ಯ ವಿದ್ಯಾರ್ಥಿನಿ (Medical Student) ಭಾನುವಾರ ಹೈದರಾಬಾದ್‌ನಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಡಾ. ಪ್ರಿಯಾಂಕಾ ಮೃತ ವಿದ್ಯಾರ್ಥಿನಿ. ಇವರು ರಾಜಮಂಡ್ರಿಯ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದರು. ಆಗಸ್ಟ್ 3 ರಂದು ನಗರದ ಮಾಲ್ ಬಳಿ ನಡೆದ ಅಪಘಾತದಲ್ಲಿ ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು. ಆರಂಭದಲ್ಲಿ ಅವರನ್ನು ರಾಜಮಂಡ್ರಿಯ ಆಸ್ಪತ್ರೆಗೆ ಸಾಗಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆ ಮತ್ತು ವೆಂಟಿಲೇಟರ್ ಬೆಂಬಲಕ್ಕಾಗಿ ಹೈದರಾಬಾದ್‌ಗೆ ಸ್ಥಳಾಂತರಿಸಲಾಗಿತ್ತು. ವೈದ್ಯರು ಆಕೆಯನ್ನು ಉಳಿಸಲು ತೀವ್ರ ಪ್ರಯತ್ನಪಟ್ಟಿದ್ದರು. ಬಳಿಕ ಆಕೆಯ ಮೆದುಳು ನಿಷ್ಕ್ರಿಯವಾಗಿದೆ ಎಂದು ವೈದ್ಯರು ಘೋಷಿಸಿದ್ದರು. ಇಂದು ಅವರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಹಿಟ್ & ರನ್‌ಗೆ 6 ವರ್ಷದ ಬಾಲಕಿ ಬಲಿ – ಯಾರೂ ಸಹಾಯ ಮಾಡ್ಲಿಲ್ಲ ಅಂತ ಅಜ್ಜಿ ಕಣ್ಣೀರು
ಮದ್ಯದ ಅಮಲಿನಲ್ಲಿದ್ದ ಇಬ್ಬರು ಯುವಕರು ಆ.3 ರಂದು ತಮ್ಮ ಎಸ್‌ಯುವಿ ಟಾಟಾ ನೆಕ್ಸಾನ್‌ನಲ್ಲಿ ಪ್ರಿಯಾಂಕ ಅವರ ಸ್ಕೂಟರ್‌ಗೆ ಹಿಂದಿನಿಂದ ಗುದ್ದಿದ್ದರು. ಈ ಅಪಘಾತದಲ್ಲಿ ಅವರ ತಲೆಗೆ ಗಂಭೀರ ಗಾಯವಾಗಿತ್ತು. ಅಲ್ಲದೇ ಸ್ಕೂಟರ್‌ನಲ್ಲಿದ್ದ ಅವರ ಸ್ನೇಹಿತೆ ಸಹ ಗಾಯಗೊಂಡಿದ್ದರು.
ಅಪಘಾತದ ಬಳಿಕ ಪರಾರಿಯಾಗಿದ್ದ (Hit And Run) ಸುರವರಪು ದುಷ್ಯಂತ್ ಮತ್ತು ಆಂಡ್ರ್ಯೂ ಜೋಸೆಫ್ ಎಡ್ವರ್ಡ್ಸ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೂ ಈ ಇಬ್ಬರೂ ಅಪಘಾತಕ್ಕೂ ಮುನ್ನ ಮಾಲ್‌ನ ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರಂಭದಲ್ಲಿ ಬಂಧಿತರ ವಿರುದ್ಧ ಬಿಎನ್‌ಎಸ್ ಸೆಕ್ಷನ್ 338 ರ ಅಡಿಯಲ್ಲಿ ʻದುರುದ್ದೇಶಪೂರಿತ ಅಥವಾ ನಿರ್ಲಕ್ಷ್ಯದ ಕೃತ್ಯದಿಂದ ಗಂಭೀರ ಗಾಯʼ ಉಂಟುಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ತನಿಖೆಯ ಆಧಾರದ ಮೇಲೆ, ಪೊಲೀಸರು ನಂತರ ಸೆಕ್ಷನ್ 308 (ಕೊಲೆಗೆ ಸಮಾನವಲ್ಲದ ಅಪರಾಧಿ ನರಹತ್ಯೆ ಪ್ರಯತ್ನ) ಸೇರಿಸಿದ್ದಾರೆ.
ಮಗಳ ಸಾವಿನ ಬಗ್ಗೆ ಪ್ರತಿಕ್ರಿಯಿಸಿದ ಡಾ. ಪ್ರಿಯಾಂಕಾ ತಂದೆ, ನನ್ನ ಮಗಳು ನಮ್ಮ ಕುಟುಂಬದಲ್ಲಿ ಮೊದಲ ವೈದ್ಯೆ. ಆಕೆಯ ಸಾವು ನಮ್ಮ ಕುಟುಂಬಕ್ಕೆ ತೀವ್ರ ನೋವುಂಟು ಮಾಡಿದೆ ಎಂದು ಕಣ್ಣೀರಿಟ್ಟಿದ್ದಾರೆ. ಇನ್ನೂ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವೈದ್ಯ ವಿದ್ಯಾರ್ಥಿಗಳು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ನೆಲಮಂಗಲದಲ್ಲಿ ಹಿಟ್ & ರನ್‌ಗೆ ಯುವಕ ಬಲಿ



