– ಆಹಾರ ಸುರಕ್ಷತಾ ಅಧಿಕಾರಿಗಳಿಂದ ದಾಳಿ; 51 ಕೆಜಿ ಆಹಾರ ಪದಾರ್ಥ ವಶಕ್ಕೆ
– ಕೊಳೆತ ಮಾಂಸ, ಅವಧಿ ಮೀರಿದ ಆಹಾರ; ಪದೇ ಪದೇ ಬಳಸಿದ ಅಡುಗೆ ಎಣ್ಣೆ ಜಪ್ತಿ
ಬೆಂಗಳೂರು: ರಾಜಧಾನಿ ಬೆಂಗಳೂರಿನ ಐಷಾರಾಮಿ, ಆಹಾರ ಪ್ರಿಯರ ಹಾಟ್‌ಸ್ಪಾಟ್ ಹೋಟೆಲ್‌ಗಳು ಹಾಗೂ ರೆಸ್ಟೋರೆಂಟ್‌ಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು (Food Safety Officer) ವೀಕೆಂಡ್‌ನಲ್ಲಿ ಮೆಗಾ ಕಾರ್ಯಾಚರಣೆ ನಡೆಸಿದ್ದಾರೆ. ಯುಬಿ ಸಿಟಿ, ಎಂಜಿ ರಸ್ತೆ, ಬ್ರಿಗೇಡ್ ರೋಡ್ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿರುವ ಹೋಟೆಲ್‌ಗಳ ಮೇಲೆ ದಾಳಿ ನಡೆಸಿ ಕೊಳೆತ ಮಾಂಸ ಹಾಗೂ ಅವಧಿ ಮೀರಿದ ಆಹಾರ ಪದಾರ್ಥಗಳನ್ನ ಜಪ್ತಿ ಮಾಡಿದ್ದಾರೆ.
ಆಹಾರ ಇಲಾಖೆ ಆಯುಕ್ತರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹತ್ತಕ್ಕೂ ಹೆಚ್ಚು ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆಯ ಅಧಿಕಾರಿಗಳು ತಂಡಗಳಾಗಿ ದಾಳಿ ನಡೆಸಿದ್ದಾರೆ. ಯುಬಿ ಸಿಟಿ ಸ್ಕೈ ಹೋಟೆಲ್ (UB City Sky Hotels) ಸೇರಿದಂತೆ ಅದರ ಸುತ್ತಮುತ್ತಲಿನ ಪ್ರತಿಷ್ಠಿತ ಹೋಟೆಲ್‌ಗಳ ಅಡುಗೆಮನೆ ಹಾಗೂ ಆಹಾರ ಸಂಗ್ರಹಣಾ ಸ್ಥಳಗಳನ್ನು ಪರಿಶೀಲಿಸಲಾಗಿದೆ.


ಕೊಳೆತ ಮಾಂಸ, ಮೀನು, ತರಕಾರಿ ವಶ
ಅಧಿಕಾರಿಗಳ ಪರಿಶೀಲನೆ ವೇಳೆ ಕೆಲವು ಹೋಟೆಲ್‌ಗಳಲ್ಲಿ ಕೊಳೆತ ಮಾಂಸ ಸೇರಿದಂತೆ ವಿವಿಧ ಆಹಾರ ಪದಾರ್ಥಗಳು ಪತ್ತೆಯಾಗಿವೆ. ಕೆಲವು ಕಡೆ ಅವಧಿ ಮೀರಿದ ಆಹಾರ ಹಾಗೂ ಸರಿಯಾದ ಲೇಬಲ್ ಇಲ್ಲದ ಆಹಾರ ಪದಾರ್ಥಗಳನ್ನ ಸಂಗ್ರಹಿಸಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ದಾಳಿಯ ವೇಳೆ ಸುಮಾರು 51 ಕೆಜಿ ಆಹಾರ ಪದಾರ್ಥಗಳನ್ನ ವಶಕ್ಕೆ ಪಡೆಯಲಾಗಿದೆ. ಇದರಲ್ಲಿ ಮಾಂಸ, ಮೀನು ಹಾಗೂ ತರಕಾರಿ ಸೇರಿದಂತೆ ವಿವಿಧ ಆಹಾರ ಪದಾರ್ಥಗಳು ಸೇರಿವೆ.
ಇದಲ್ಲದೆ, ಪದೇ ಪದೇ ಬಳಸಲಾಗಿದ್ದ ಅಡುಗೆ ಎಣ್ಣೆಯನ್ನೂ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಒಟ್ಟು ಸುಮಾರು 25 ಲೀಟರ್ ಅಡುಗೆ ಎಣ್ಣೆ ಸೀಜ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಸ್ಕೈ ಲಾಂಜ್ ಅಡುಗೆಮನೆ ಸೀಜ್
ಯುಬಿ ಸಿಟಿಯ ಸ್ಕೈ ಲೌಂಜ್ ಹೋಟೆಲ್‌ನ ಅಡುಗೆಮನೆಯಲ್ಲೂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಅಡುಗೆಮನೆಯ ನಿರ್ವಹಣೆಯಲ್ಲಿ ಅನೈರ್ಮಲ್ಯ ಕಂಡುಬಂದ ಹಿನ್ನೆಲೆ ಹಾಗೂ 45 ಕೆಜಿ ಕೊಳೆ ಮಾಂಸ (ಚಿಕನ್ ಹಾಗೂ ದನಸ ಮಾಂಸ) ಪತ್ತೆಯಾದ ಹಿನ್ನೆಲೆ ಅಧಿಕಾರಿಗಳು ಕಿಚನ್‌ನ್ನು ಸೀಜ್ ಮಾಡಿ ಲಾಕ್ ಮಾಡಿದ್ದಾರೆ.
ಅಧಿಕಾರಿಗಳ ಪರಿಶೀಲನೆ ವೇಳೆ ಮಾಂಸ ಹಾಗೂ ಗೋಮಾಂಸ ಸೇರಿದಂತೆ ಕೆಲವು ಆಹಾರ ಪದಾರ್ಥಗಳು ಕೊಳೆತು ಫಂಗಸ್ ಆದ ಸ್ಥಿತಿಯಲ್ಲಿ ಮಾಂಸ ಪತ್ತೆಯಾಗಿರುವುದು ಕಂಡುಬಂದಿದೆ. ಅಲ್ಲದೇ, ಸುಮಾರು 10 ದಿನಗಳ ಅವಧಿ ಮೀರಿದ ಹಾಲು ಮತ್ತು ಮೊಸರು ಕೂಡ ಪತ್ತೆಯಾಗಿದೆ.

ಅವಧಿ ಮೀರಿದ ಮಶ್ರೂಮ್, ಲೇಬಲ್ ಇಲ್ಲದ ಕೇಕ್
ಯುಬಿ ಸಿಟಿ ಒಳಭಾಗದಲ್ಲಿರುವ ಕೆಲವು ರೆಸ್ಟೋರೆಂಟ್‌ಗಳ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಅವಧಿ ಮೀರಿದ ಮಶ್ರೂಮ್ (ಹಣಬೆ), ಸರಿಯಾದ ಲೇಬಲ್ ಇಲ್ಲದ ಕೇಕ್‌ಗಳು ಸೇರಿದಂತೆ ಹಲವು ಆಹಾರ ಪದಾರ್ಥಗಳನ್ನ ವಶಕ್ಕೆ ಪಡೆಯಲಾಗಿದೆ. ಆಹಾರ ಪದಾರ್ಥಗಳ ಮೇಲೆ ಅಗತ್ಯ ಮಾಹಿತಿಯ ಲೇಬಲ್ ಇಲ್ಲದೆ ಮಾರಾಟಕ್ಕೆ ಮುಂದಾಗಿದ್ದ ಕೆಲವು ರೆಸ್ಟೋರೆಂಟ್‌ಗಳಿಗೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.
ಜೆಡಬ್ಲ್ಯೂ ಮ್ಯಾರಿಯಟ್ ಮೇಲೂ ದಾಳಿ
ಯುಬಿ ಸಿಟಿ ಸಮೀಪದಲ್ಲಿರುವ ಜೆಡಬ್ಲ್ಯೂ ಮ್ಯಾರಿಯಟ್ ಹೋಟೆಲ್ ಮೇಲೂ ಆಹಾರ ಸುರಕ್ಷತಾ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಹೋಟೆಲ್‌ನ ಅಡುಗೆಮನೆ ಹಾಗೂ ಆಹಾರ ಸಂಗ್ರಹಣಾ ಪ್ರದೇಶಗಳನ್ನು ಪರಿಶೀಲಿಸಿ, ವಿವಿಧ ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಲಾಗಿದೆ.
ಯಾವ ಹೋಟೆಲ್‌ಗಳಲ್ಲಿ ಏನೇನು ಜಪ್ತಿ?
1. ಹೋಟೆಲ್ ಸ್ಕೈ, ಯುಬಿ ಸಿಟಿ
– ಕೊಳೆತ ಕೋಳಿ / ಬೀಫ್ – 45 ಕೆಜಿ
– ತರಕಾರಿ ಕಟ್ಲೆಟ್ – 6 ಕೆಜಿ
– ಬಳಸಿದ ಅಡುಗೆ ಎಣ್ಣೆ – 15 ಲೀಟರ್
– ಒಟ್ಟು ಆಹಾರ ಪದಾರ್ಥಗಳು: 51 ಕೆಜಿ
ಆಹಾರ ಪದಾರ್ಥಗಳು ಬಳಕೆಗೆ ಯೋಗ್ಯವಲ್ಲವೆಂದು ಸಾಬೀತು
2.ರಾಯಲ್ ಚೈನ್ ಹೋಟೆಲ್
-ಬಾತುಕೋಳಿ – 50 ಕೆಜಿ
-ಮೀನು – 5 ಕೆಜಿ
-ವಶಪಡಿಸಿಕೊಂಡ ಒಟ್ಟು: 55 ಕೆ.ಜಿ
3. ಮದ್ರಾಸ್ ಕಿಚನ್ ಹೋಟೆಲ್
-ಹಸಿರು ಬಟಾಣಿ – 5 ಕೆಜಿ
4.ಟೆಸ್ಕಾನ್ ಹೋಟೆಲ್
– ಅಣಬೆ – 5 ಕೆಜಿ
5.ಸೆನ್ಚೆಜ್ ಹೋಟೆಲ್
-ಮೀನು – 3 ಕೆಜಿ – ವಶಪಡಿಸಿಕೊಳ್ಳಲಾಗಿದೆ
-ಕೇಕ್, ಆಲೂಗಡ್ಡೆ ಮತ್ತು ಟ್ಯಾಕೋಸ್ – 7 ಕೆಜಿ – ಸೀಜ್
06. ಸ್ಕೈ ಲೌಂಜ್, ಯು ಬಿ ಸಿಟಿ
* ಬೆಂಗಳೂರಿನ ಅಡುಗೆಮನೆಯನ್ನು ಅನೈರ್ಮಲ್ಯ ನಿರ್ವಹಣೆಗಾಗಿ ಮುಚ್ಚಲಾಯಿತು
* ಎಲ್ಲಾ ಮಾಂಸ ಮತ್ತು ಗೋಮಾಂಸ ಕೊಳೆತ
* 10 ದಿನಗಳ ಅವಧಿ ಮುಗಿದ ಹಾಲು ಮತ್ತು ಮೊಸರು ಪತ್ತೆ
ಒಟ್ಟು ಆಹಾರ ಪದಾರ್ಥಗಳು: 132 ಕೆ.ಜಿ
-ಬಳಸಿದ ಅಡುಗೆ ಎಣ್ಣೆ: 15 ಲೀಟರ್
-ಆಹಾರ ಪದಾರ್ಥಗಳ ಒಟ್ಟು ಪ್ರಮಾಣ: 132 ಕೆಜಿ


