– ನಾಲ್ವರು ರೈತರ 15 ಎಕರೆ ಜಮೀನು ಗ್ರಾಮ ಸಹಾಯಕಿ ಹೆಸರಿಗೆ ಖಾತೆ
– ಕೆಐಎಡಿಬಿಗೆ ಭೂಮಿ ಸ್ವಾಧೀನಪಡಿಸಿ ಹಣ ಹೊಡೆಯುವ ಸಂಚು?
ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ(Bagepalli) ತಹಶೀಲ್ದಾರ್ ಮನೀಷಾ ಪತ್ರಿ(Manisha N. Patri) ಅವರ ವಿರುದ್ಧ ಸುಮಾರು 45 ಕೋಟಿ ರೂಪಾಯಿ ಮೌಲ್ಯದ ಬೃಹತ್ ಭೂ ಹಗರಣದ(Land Scam) ಗಂಭೀರ ಆರೋಪ ಕೇಳಿಬಂದಿದೆ.
ಬಾಗೇಪಲ್ಲಿ ತಾಲೂಕಿನ ಪುಲವಾರಪಲ್ಲಿ ಗ್ರಾಮದ ನಾಲ್ವರು ರೈತರ ಜಮೀನಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ತಮ್ಮದೇ ಕಚೇರಿಯ ಗ್ರಾಮ ಸಹಾಯಕಿ ಹೆಸರಿಗೆ ಅಕ್ರಮವಾಗಿ ಪೌತಿ ಖಾತೆ ಮಾಡಿಕೊಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ.
ಏನಿದು ಪ್ರಕರಣ?
ಪುಲವಾರಪಲ್ಲಿ ಗ್ರಾಮದ ರೈತರಾದ ಕೆ.ವಿ. ಲಕ್ಷ್ಮಯ್ಯ, ಅಂಜನಪ್ಪ, ಅಕ್ಕಾಯಮ್ಮ ಹಾಗೂ ವೆಂಕಟರೆಡ್ಡಿ ಅವರಿಗೆ ಸೇರಿದ ಸುಮಾರು 15 ಎಕರೆ ಜಮೀನನ್ನು ಬಾಗೇಪಲ್ಲಿ ತಹಶೀಲ್ದಾರ್ ಕಚೇರಿಯ ಗ್ರಾಮ ಸಹಾಯಕಿ ಶಿವಮ್ಮ ಎಂಬುವವರ ಹೆಸರಿಗೆ ಅಕ್ರಮವಾಗಿ ಪೌತಿ ಖಾತೆ ಮಾಡಲಾಗಿತ್ತು. ಬರೋಬ್ಬರಿ 45 ಕೋಟಿ ರೂಪಾಯಿ ಮೌಲ್ಯದ ಈ ಜಮೀನನ್ನು ನಕಲಿ ದಾಖಲೆಗಳ ಮೂಲಕ ಶಿವಮ್ಮ ಹೆಸರಿಗೆ ವರ್ಗಾಯಿಸಿ, ಬಳಿಕ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ (KIADB) ಭೂಸ್ವಾಧೀನ ಮಾಡಿಸಿ ಕೋಟ್ಯಂತರ ರೂಪಾಯಿ ಪರಿಹಾರದ ಹಣ ಲಪಟಾಯಿಸುವ ಹುನ್ನಾರ ನಡೆಸಲಾಗಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಕಠಿಣ ಕ್ರಮ:
ತಹಶೀಲ್ದಾರ್ ವಿರುದ್ಧ ಕೇಳಿಬಂದ ಈ ಗಂಭೀರ ಆರೋಪವನ್ನು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಿದ್ದರು. ತನಿಖಾ ತಂಡ ನೀಡಿದ ಮಧ್ಯಂತರ ವರದಿಯ ಆಧಾರದ ಮೇಲೆ ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಜಿಲ್ಲಾಧಿಕಾರಿಗಳು ಚಾಟಿ ಬೀಸಿದ್ದಾರೆ.
ಅಕ್ರಮ ಖಾತೆಗೆ ಸಹಕರಿಸಿದ ಗ್ರಾಮ ಸಹಾಯಕಿ ಶಿವಮ್ಮ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಕಂದಾಯ ನಿರೀಕ್ಷಕ ಪ್ರಶಾಂತ್, ಗ್ರಾಮ ಆಡಳಿತಾಧಿಕಾರಿಗಳಾದ ಮಂಜುಳಾ ಬಾಳವ್ವಗೋಡ ಹಾಗೂ ಮಂಜುನಾಥ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಪ್ರಕರಣದ ಕೇಂದ್ರಬಿಂದುವಾಗಿರುವ ತಹಶೀಲ್ದಾರ್ ಮನೀಷಾ ಪತ್ರಿ ಅವರ ವಿರುದ್ಧ ಇಲಾಖಾ ವಿಚಾರಣೆ ನಡೆಸುವಂತೆ ಕೋರಿ ಜಿಲ್ಲಾಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ತಹಶೀಲ್ದಾರ್ ಸ್ಪಷ್ಟನೆ ಏನು?:
ಈ ಭೂ ಅಕ್ರಮದ ವಿಚಾರ ಸಾರ್ವಜನಿಕವಾಗಿ ಬಯಲಾಗುತ್ತಿದ್ದಂತೆಯೇ ಎಚ್ಚೆತ್ತ ಅಧಿಕಾರಿಗಳು, ತರಾತುರಿಯಲ್ಲಿ ಮತ್ತೆ ಮೂಲ ರೈತರ ಹೆಸರಿಗೆ ಪೌತಿ ಖಾತೆಯನ್ನು ಬದಲಾಯಿಸಿದ್ದಾರೆ.
ಇನ್ನು ತಮ್ಮ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿರುವ ತಹಶೀಲ್ದಾರ್ ಮನೀಷಾ ಪತ್ರಿ, ಪೌತಿ ಖಾತೆ ಮಾಡುವ ಸಂದರ್ಭದಲ್ಲಿ ಕಣ್ತಪ್ಪಿನಿಂದ ಖಾತೆ ಬದಲಾವಣೆಯಾಗಿದೆ. ತಾಂತ್ರಿಕವಾಗಿ ಆಟೋ ಮ್ಯುಟೇಷನ್ (Auto Mutation) ಮೂಲಕ ಈ ಪ್ರಕ್ರಿಯೆ ನಡೆದಿದೆಯೇ ಹೊರತು, ಇದರಲ್ಲಿ ಯಾವುದೇ ಉದ್ದೇಶಪೂರ್ವಕ ಅಕ್ರಮ ಅಥವಾ ದುರುದ್ದೇಶವಿಲ್ಲಎಂದು ಸ್ಪಷ್ಟನೆ ನೀಡಿದ್ದಾರೆ.
ಪ್ರಶ್ನೆಗಳಿಗೆ ಸಿಗಬೇಕಿದೆ ಉತ್ತರ:
ಈ ಭೂ ಖಾತೆ ಬದಲಾವಣೆ ಪ್ರಕರಣ ಸಾರ್ವಜನಿಕವಾಗಿ ಬಯಲಾಗುತ್ತಿದ್ದಂತೆಯೇ ಎಚ್ಚೆತ್ತ ಅಧಿಕಾರಿಗಳು, ತರಾತುರಿಯಲ್ಲಿ ಮತ್ತೆ ಮೂಲ ರೈತರ ಹೆಸರಿಗೇ ಜಮೀನಿನ ಪೌತಿ ಖಾತೆಯನ್ನು ಬದಲಾವಣೆ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ಈ ಮೂಲಕ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯಿತೇ ಎಂಬ ಅನುಮಾನ ಮೂಡಿದ್ದು, ಸಾರ್ವಜನಿಕ ವಲಯದಲ್ಲಿ ಹಲವು ಗಂಭೀರ ಪ್ರಶ್ನೆಗಳು ಉದ್ಭವಿಸಿವೆ
ಆರಂಭದಲ್ಲಿ ನಾಲ್ವರು ರೈತರಿಗೆ ಸೇರಿದ 15 ಎಕರೆ ಜಮೀನಿನ ಖಾತೆ, ತಹಶೀಲ್ದಾರ್ ಕಚೇರಿಯ ಗ್ರಾಮ ಸಹಾಯಕಿ ಶಿವಮ್ಮ ಅವರ ಹೆಸರಿಗೆ ಬದಲಾವಣೆಯಾಗಿದ್ದು ಹೇಗೆ?ಈ ಅಕ್ರಮ ಖಾತೆ ವರ್ಗಾವಣೆ ಪ್ರಕ್ರಿಯೆಯಲ್ಲಿ ಕಂದಾಯ ಇಲಾಖೆಯ ಯಾವೆಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ನೇರವಾಗಿ ಅಥವಾ ಪರೋಕ್ಷವಾಗಿ ಭಾಗಿಯಾಗಿದ್ದಾರೆ? ಜಮೀನಿನ ಹಕ್ಕು ಬದಲಾಯಿಸಲು ಬೇಕಾದ ನಕಲಿ ದಾಖಲೆಗಳು ಹಾಗೂ ವಂಶವೃಕ್ಷವನ್ನು ಸೃಷ್ಟಿಸಿದ ಕಿಂಗ್ಪಿನ್ಗಳು ಯಾರು? ತಹಶೀಲ್ದಾರ್ ಹೇಳುವಂತೆ ಒಂದು ವೇಳೆ ಇದು ಕೇವಲ ‘ಕಣ್ತಪ್ಪಿನಿಂದ’ ಅಥವಾ ‘ಆಟೋ ಮ್ಯುಟೇಷನ್’ ಮೂಲಕ ನಡೆದ ಖಾತೆ ಬದಲಾವಣೆಯೇ ಆಗಿದ್ದರೆ, ಬರೋಬ್ಬರಿ 45 ಕೋಟಿ ರೂಪಾಯಿ ಮೌಲ್ಯದ ಇಷ್ಟೊಂದು ದೊಡ್ಡ ಪ್ರಮಾಣದ ಜಮೀನಿನ ದಾಖಲೆಗಳಲ್ಲಿ ಬದಲಾವಣೆ ಆಗುವಾಗ ಕಂದಾಯ ಇಲಾಖೆಯ ಹಂತ-ಹಂತದ ಪರಿಶೀಲನೆ ಹೇಗೆ ನಡೆಯಿತು? ಈ ಎಲ್ಲಾ ಪ್ರಶ್ನೆಗಳಿಗೆ ಸಮಗ್ರ ತನಿಖೆಯ ಮೂಲಕವೇ ಉತ್ತರ ಸಿಗಬೇಕಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸ್ಥಳೀಯ ರೈತರ ಆಗ್ರಹಿಸಿದ್ದಾರೆ.
ಏನಿದು ಪೌತಿ ಖಾತೆ?
ಜಮೀನು ಅಥವಾ ಆಸ್ತಿಯ ಮಾಲೀಕರು ಮರಣ ಹೊಂದಿದ ನಂತರ, ಅವರ ಹೆಸರಿನಲ್ಲಿರುವ ಆಸ್ತಿಯನ್ನು ಅವರ ಕಾನೂನುಬದ್ಧ ವಾರಸುದಾರರ ಅಥವಾ ಕುಟುಂಬಸ್ಥರ ಹೆಸರಿಗೆ ವರ್ಗಾವಣೆ ಮಾಡುವುದನ್ನು ಪೌತಿ ಖಾತೆ ಎಂದು ಕರೆಯಲಾಗುತ್ತದೆ.

