– ಇ-ಕೆವೈಸಿ ಮಾಡಿಸದಿದ್ದರೆ ದುಬಾರಿ ಬೆಲೆ ನೀಡಬೇಕಾದೀತು!
ಬೆಂಗಳೂರು: ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬಳಸುವ ಗ್ರಾಹಕರೇ, ಈ ಸುದ್ದಿಯನ್ನು ಮಿಸ್ ಮಾಡದೇ ನೋಡಿ. ನಿಮ್ಮ ಮನೆಯ ಗ್ಯಾಸ್ ಕನೆಕ್ಷನ್‌ಗೆ ಇನ್ನೂ E-KYC ಆಗಿಲ್ವಾ? ಹಾಗಿದ್ದರೆ ತಡ ಮಾಡದೇ ಕೂಡಲೇ ಇ-ಕೆವೈಸಿ ಮಾಡಿಸಿಕೊಳ್ಳಿ. ಇಲ್ಲದಿದ್ದರೆ ಗೃಹ ಬಳಕೆಯ ಸಿಲಿಂಡರ್ ಪೂರೈಕೆಯಲ್ಲಿ ಸಮಸ್ಯೆಯಾಗುವ ಸಾಧ್ಯತೆ ಇದ್ದು, ಒಂದು ಸಿಲಿಂಡರ್‌ಗೆ ದುಬಾರಿ ಬೆಲೆ ನೀಡಬೇಕಾದೀತು.
ಆಗಸ್ಟ್ 16ರ ಒಳಗೆ E-KYC ಪೂರ್ಣಗೊಳಿಸುವಂತೆ ಗ್ರಾಹಕರಿಗೆ ಸೂಚನೆ ನೀಡಲಾಗುತ್ತಿದೆ. ಗೃಹ ಬಳಕೆಯ LPG ಸಂಪರ್ಕ ಹೊಂದಿರುವ ಪ್ರತಿಯೊಬ್ಬ ಗ್ರಾಹಕರೂ ಇ-ಕೆವೈಸಿ ಪೂರ್ಣಗೊಳಿಸಿಕೊಳ್ಳುವಂತೆ ತೈಲ ಕಂಪನಿಗಳು ಹಾಗೂ ಗ್ಯಾಸ್ ವಿತರಕರು ಮನವಿ ಮಾಡುತ್ತಿದ್ದಾರೆ.

ಗ್ರಾಹಕರ ಮಾಹಿತಿಯನ್ನು ಪರಿಶೀಲಿಸುವುದು, ದಾಖಲೆಗಳನ್ನು ಅಪ್‌ಡೇಟ್ ಮಾಡುವುದು ಹಾಗೂ ನಿಜವಾದ ಫಲಾನುಭವಿಗಳನ್ನು ಗುರುತಿಸುವ ಉದ್ದೇಶದಿಂದ E-KYC ಪ್ರಕ್ರಿಯೆ ನಡೆಸಲಾಗುತ್ತಿದೆ. ಈಗಾಗಲೇ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಡೆಡ್‌ಲೈನ್ ನೀಡಿದ್ದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL), ಇದೀಗ ಆಗಸ್ಟ್ 16ರವರೆಗೆ ಗಡುವನ್ನು ವಿಸ್ತರಿಸಿದೆ.
ಆಗಸ್ಟ್ 16ರ ಬಳಿಕವೂ E-KYC ಮಾಡಿಸದಿದ್ದರೆ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಸಂಪರ್ಕವನ್ನು ನಿರ್ಬಂಧಿಸುವ ಅಥವಾ ಸಿಲಿಂಡರ್ ಪೂರೈಕೆಯಲ್ಲಿ ಸಮಸ್ಯೆಯಾಗುವ ಸಾಧ್ಯತೆ ಇದೆ ಎಂದು ಗ್ಯಾಸ್ ವಿತರಕರು ತಿಳಿಸಿದ್ದಾರೆ.
ಸದ್ಯ ಸಬ್ಸಿಡಿ ದರದಲ್ಲಿ ದೊರೆಯುತ್ತಿರುವ ಗೃಹ ಬಳಕೆಯ ಸಿಲಿಂಡರ್‌ನ ಬೆಲೆ ಸುಮಾರು 945 ರೂ. ಇದೆ. ಆದರೆ E-KYC ಮಾಡಿಸದ ಗ್ರಾಹಕರು ಸಬ್ಸಿಡಿ ಸೌಲಭ್ಯ ಕಳೆದುಕೊಂಡರೆ, ಅದೇ ಸಿಲಿಂಡರ್‌ಗೆ ಮಾರುಕಟ್ಟೆ ದರದಂತೆ ಸುಮಾರು 2,108 ರೂ. ಪಾವತಿಸಬೇಕಾಗಬಹುದು ಎಂದು ವಿತರಕರು ತಿಳಿಸಿದ್ದಾರೆ.

ಹೀಗಾಗಿ ಗ್ರಾಹಕರು ಆಗಸ್ಟ್ 16ರೊಳಗೆ ತಮ್ಮ ಸಮೀಪದ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ E-KYC ಮಾಡಿಸಿಕೊಳ್ಳಬಹುದು. ಇಲ್ಲವೇ ಲಭ್ಯವಿರುವ ಅಧಿಕೃತ ಆನ್‌ಲೈನ್ ಅಥವಾ ಮೊಬೈಲ್ ಸೇವೆಯ ಮೂಲಕವೂ E-KYC ಪೂರ್ಣಗೊಳಿಸಿಕೊಳ್ಳಬಹುದು.
ಸೂಚನೆ: E-KYC ಪ್ರಕ್ರಿಯೆ ಹಾಗೂ ಗಡುವಿನ ಕುರಿತು ಗ್ರಾಹಕರು ಕೇಂದ್ರ ಸರ್ಕಾರ, ಸಂಬಂಧಪಟ್ಟ ತೈಲ ಕಂಪನಿ ಅಥವಾ ಅಧಿಕೃತ ಗ್ಯಾಸ್ ವಿತರಕರಿಂದಲೇ ಮಾಹಿತಿ ಪಡೆದು ಖಚಿತಪಡಿಸಿಕೊಳ್ಳಬೇಕು. ಯಾವುದೇ ಅನಧಿಕೃತ ಲಿಂಕ್‌ಗಳಿಗೆ ವೈಯಕ್ತಿಕ ಮಾಹಿತಿ ಅಥವಾ OTP ನೀಡಬೇಡಿ.
