– ಗೊಂದಲಕ್ಕೊಳಗಾಗದೆ ಎಚ್ಚರದಿಂದಿರಿ: ಡಿಸಿ ಸಿಂಧೂ ರೂಪೇಶ್
ಮಂಗಳೂರು: ಜಗತ್ತಿನಾದ್ಯಂತ ಭೀತಿ ಹುಟ್ಟಿಸಿದ ಕೊರೊನಾ ವೈರಸ್ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ತಲ್ಲಣ ಮೂಡಿಸಿದೆ. ಕೇರಳದಲ್ಲಿ ಕೊರೊನಾ ಪತ್ತೆಯಾದ ಬೆನ್ನಲ್ಲೇ ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಬೆಡ್ ಕಾಯ್ದಿದಿರಿಸಲಾಗಿದೆ. ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಬಂದರು,ಬಸ್ ನಿಲ್ದಾಣದಲ್ಲೂ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
ಭಾರತದಲ್ಲಿ ಮೊದಲ ಕೊರೊನಾ ಸೋಂಕು ಕೇರಳದ ವಿದ್ಯಾರ್ಥಿಯಲ್ಲಿ ಪತ್ತೆಯಾಗಿದ್ದು ಕೇರಳದೊಂದಿಗೆ ಗಡಿ ಭೂಭಾಗ ಹಂಚಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಆತಂಕ ಮೂಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೂ ಸೋಂಕು ಬಾಧಿತರು ಕಂಡು ಬರದಿದ್ದರೂ ಅತೀ ಹೆಚ್ಚಾಗಿ ಕೇರಳದಿಂದ ರೋಗಿಗಳು ಮಂಗಳೂರಿನ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿರುವುದರಿಂದ ಜನ ಕೊರೊನಾ ಭೀತಿಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ನವಮಂಗಳೂರು ಬಂದರು, ರೈಲ್ವೆ ಸ್ಟೇಷನ್, ಕೆಎಸ್ಆರ್‌ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣ, ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳಲ್ಲಿ ಜಾಗೃತಿ ನೀಡುವ ಕಾರ್ಯ ನಡೆಯುತ್ತಿದೆ.
Advertisement
Advertisement
ಮಂಗಳೂರು ವಿಮಾನ ನಿಲ್ದಾಣದ ಆಯಕಟ್ಟಿನ ಜಾಗಗಳಲ್ಲಿ ಎಲ್‍ಇಡಿ ಫಲಕದಲ್ಲಿ ಕೊರೊನಾ ಸೋಂಕಿನ ಎಚ್ಚರಿಕೆ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಆದರೆ ಚೀನಾದಿಂದ ನೇರವಾಗಿ ಮಂಗಳೂರಿಗೆ ವಿಮಾನ ಯಾನ ಸೇವೆ ಇಲ್ಲ. ಹೀಗಾಗಿ ಜನರು ನಿರಾಳವಾಗಿರಬಹುದು ಎಂದು ಜಿಲ್ಲಾಡಳಿತ ಸೂಚಿಸಿದೆ. ಈ ನಡುವೆ ಕೊರೊನಾ ಬಾಧಿತರು ಎಲ್ಲಾದರೂ ಖಾಸಗಿ ಆಸ್ಪತ್ರೆಗಳಲ್ಲಿ ಇದ್ದರೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಕೊರೊನಾ ಬಗ್ಗೆ ಯಾವುದೇ ಗೊಂದಲ ಇಲ್ಲದೆ ಜಾಗೃತಿ ವಹಿಸುವಂತೆ ಜಿಲ್ಲಾಡಳಿತ ಜನರಿಗೆ ಮನವಿ ಮಾಡಿದೆ.
Advertisement
Advertisement
ಕೊರೊನಾ ವೈರಸ್ ಬಾಧಿತರು ಕಂಡು ಬಂದಲ್ಲಿ ತಕ್ಷಣ ಚಿಕಿತ್ಸೆ ಗೆಂದು ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ರತ್ಯೇಕ 10 ಬೆಡ್‍ಗಳನ್ನು ಕಾಯ್ದಿರಿಸಲಾಗಿದೆ. ಪ್ರತಿ ಖಾಸಗಿ ಆಸ್ಪತ್ರೆಯಲ್ಲೂ ತಲಾ 5 ಬೆಡ್‍ಗಳನ್ನು ಮೀಸಲಿಡಲಾಗಿದೆ. ಕೊರೊನಾ ಬಗ್ಗೆ ಜಿಲ್ಲಾಡಳಿತ ಹೆಲ್ಪ್ ಲೈನ್ ನಂಬರನ್ನೂ ತೆರೆದಿದ್ದು, ಯಾವುದೇ ಭಯ ಮತ್ತು ಗೊಂದಲವಿದ್ದರೂ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಲು ಕೋರಿದೆ. ಕೊರೊನಾ ವೈರಸ್ ಕಡಲನಗರಿಯಲ್ಲೂ ಆತಂಕ ಮೂಡಿಸಿದ್ದು, ವೈರಸ್‍ನ ಸೋಂಕು ಜಿಲ್ಲೆಗೆ ತಾಗದಂತೆ ಜಿಲ್ಲಾಡಳಿತ ಸಕಲ ಕ್ರಮಕೈಗೊಂಡಿದೆ.