ಬೆಳಗಾವಿ: ಆದಿತ್ಯರಾಜ್ ಕ್ಯಾಪಿಟಲ್(Adityaraj Capital) ಸಂಸ್ಥೆಯ ಮೇಲೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಸಂಸ್ಥೆಯ ಮಾಲೀಕ ಬಲರಾಮ್ ಮಾನೆ (Balram Mane) ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಬಿಡುಗಡೆ ಮಾಡುವ ಮೂಲಕ ಪ್ರತ್ಯಕ್ಷನಾಗಿದ್ದಾನೆ. ಸ್ಥಳದಿಂದಲೇ ವಿಡಿಯೋ ಮಾಡಿ ಹರಿಬಿಟ್ಟಿರುವ ಆತ, ತನ್ನ ಸಂಸ್ಥೆ ಕಾನೂನುಬದ್ಧವಾಗಿಯೇ ಕಾರ್ಯನಿರ್ವಹಿಸುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾನೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಮಾತನಾಡಿರುವ ಬಲರಾಮ್ ಮಾನೆ, “ನಾವು ಯಾವುದೇ ನಿಯಮಗಳನ್ನು ಗಾಳಿಗೆ ತೂರಿ ಸಂಸ್ಥೆ ನಡೆಸುತ್ತಿಲ್ಲ, ಎಲ್ಲವೂ ಕಾನೂನು ಪ್ರಕಾರವೇ ನಡೆಯುತ್ತಿದೆ. ಠೇವಣಿದಾರರು ಯಾರೂ ಧೈರ್ಯ ಕಳೆದುಕೊಳ್ಳಬಾರದು. ನಿಮ್ಮ ಬೆವರಿನ ಹಣ ನಮ್ಮ ಬಳಿ ಸುರಕ್ಷಿತವಾಗಿದೆ. ನಾವು ಪ್ರತಿಯೊಬ್ಬರಿಗೂ ಟಿಡಿಎಸ್ (TDS) ಕಡಿತಗೊಳಿಸಿದ ನಂತರವೇ ಶೇರಿಂಗ್ ಅಮೌಂಟ್ ನೀಡಿದ್ದೇವೆ” ಎಂದು ಹೂಡಿಕೆದಾರರಿಗೆ ಭರವಸೆ ನೀಡಿದ್ದಾನೆ.
ನ್ಯಾಯಾಲಯದ ಮೇಲೆ ತನಗಿರುವ ವಿಶ್ವಾಸವನ್ನು ವ್ಯಕ್ತಪಡಿಸಿರುವ ಆತ, “ನಾಳೆ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿದಾಗ ನಾವು ಖಂಡಿತವಾಗಿ ವಿಜಯ ಸಾಧಿಸುತ್ತೇವೆ. ನಾನು ನಿಮಗಾಗಿಯೇ ಹೋರಾಡುತ್ತಿದ್ದೇನೆ. ಈ ಕಾನೂನು ಸಂಘರ್ಷದಲ್ಲಿ ಗೆದ್ದು ಆದಿತ್ಯರಾಜ್ ಕಂಪನಿ ಮತ್ತೆ ಪುಟಿದೇಳಲಿದೆ. ನಾನು ಶೀಘ್ರದಲ್ಲೇ ಹಿಂತಿರುಗಿ ಬರುತ್ತೇನೆ, ನಾವೆಲ್ಲರೂ ಮತ್ತೆ ಸಿಗೋಣ” ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.
ತಲೆಮರೆಸಿಕೊಂಡಿರುವ ಆರೋಪಿ ಬಲರಾಮ್ ಮಾನೆ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಈ ಕುರಿತು ನಿನ್ನೆಯಷ್ಟೇ ಪ್ರತಿಕ್ರಿಯಿಸಿದ್ದ ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ್ ಜಿ. ಬೊರಸೆ ಅವರು, “ಆರೋಪಿಯ ಬಂಧನಕ್ಕಾಗಿ ಈಗಾಗಲೇ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಬಲೆ ಬೀಸಲಾಗಿದೆ. ಶೀಘ್ರದಲ್ಲಿಯೇ ಬಲರಾಮ್ ಮಾನೆಯನ್ನು ಬಂಧಿಸಲಾಗುವುದು” ಎಂದು ಹೇಳಿದ್ದರು.
ಏನಿದು ವಂಚನೆ ಕೇಸ್?
ಬೆಳಗಾವಿಯಲ್ಲಿ ಹೆಚ್ಚಿನ ಬಡ್ಡಿ ನೀಡುವುದಾಗಿ ಆಮಿಷವೊಡ್ಡಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಠೇವಣಿ ಸಂಗ್ರಹಿಸಿ ವಂಚಿಸಿದ ಆರೋಪ ಮಹಾರಾಷ್ಟ್ರ ಮೂಲದ ಬಲರಾಮ್ ಮಾನೆ ಮೇಲಿದೆ. ಪ್ರತಿ ತಿಂಗಳು 5% ರಷ್ಟು ಬಡ್ಡಿ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಹಣ ಸಂಗ್ರಹಿಸಲಾಗಿತ್ತು. ಇದನ್ನೂ ಓದಿ: ವನ್ಯಜೀವಿ ಬೇಟೆಗಾಗಿ ಸಂಚು – ಸ್ಕಾರ್ಪಿಯೋ ಕಾರಿನಲ್ಲಿ ಬಂದಿದ್ದ 7 ಮಂದಿ ಅರೆಸ್ಟ್
ಹೂಡಿಕೆದಾರರನ್ನು ನಂಬಿಸಲು ‘ಆಕ್ಸಿಸ್ ಸೆಕ್ಯುರಿಟೀಸ್ ಲಿಮಿಟೆಡ್’ ಸಂಸ್ಥೆಗೆ ಲಿಂಕ್ ಆಗಿರುವಂತಹ ನಕಲಿ ಪ್ರಮಾಣಪತ್ರಗಳನ್ನು ನೀಡಲಾಗುತ್ತಿತ್ತು. ಸಹಕಾರ ಇಲಾಖೆ ಹಾಗೂ ಪೊಲೀಸರ ಜಂಟಿ ಅಧಿಕಾರಿಗಳ ತಂಡ ಭಾಗ್ಯನಗರದ ಕಚೇರಿಯ ಮೇಲೆ ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು ಕಚೇರಿಯನ್ನು ಸೀಜ್ ಮಾಡಿದೆ. ತನಿಖೆ ತೀವ್ರಗೊಳ್ಳುತ್ತಿದ್ದಂತೆ ಕಂಪನಿಯ ಅಧಿಕೃತ ವೆಬ್‌ಸೈಟ್ www.adityacapital.com ದಿಢೀರ್ ಸ್ಥಗಿತಗೊಳಿಸಲಾಗಿದೆ.
