ಬೆಂಗಳೂರು:ವಿಜಯಪುರ ಜಿಲ್ಲಾ ಕೇಂದ್ರದಲ್ಲಿ ರೈಲ್ವೆ ಸಂಪರ್ಕ ಬಲವರ್ಧನೆಗಾಗಿ ಕೋಚ್ ಡಿಪೋ (Train Coach Depot) ಸ್ಥಾಪಿಸಬೇಕು ಮತ್ತು ರೈಲು ನಿಲ್ದಾಣದಲ್ಲಿ ಇನ್ನೊಂದು ಆಗಮನ ಮತ್ತು ನಿರ್ಗಮನ ದ್ವಾರವನ್ನು ಅಭಿವೃದ್ಧಿ ಪಡಿಸಬೇಕೆಂದು ಕೋರಿ ಕೇಂದ್ರ ರೈಲ್ವೆ ಸಹಾಯಕ ಸಚಿವ ವಿ.ಸೋಮಣ್ಣನವರ (V Somanna) ಜೊತೆ ಚರ್ಚಿಸಲಾಗಿದೆ. ಈ ಸಂಬಂಧವಾಗಿ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw)ಅವರಿಗೂ ಪತ್ರ ಬರೆಯಲಾಗಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್(MB Patil) ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಈ ವಿಚಾರ ಕುರಿತು ಸೋಮಣ್ಣನವರಿಗೂ ಪತ್ರ ಬರೆಯಲಾಗಿದೆ. ಹಿಂದೆ ವಿಜಯಪುರ ರೈಲು ನಿಲ್ದಾಣದ(Vijayapura Railway Station) ಆವರಣದಲ್ಲೇ ಇದ್ದ ಗೂಡ್ಸ್ ಶೆಡ್ಡನ್ನು ಈಗ ಅಲಿಯಾಬಾದಿಗೆ ಸ್ಥಳಾಂತರಿಸಲಾಗಿದೆ. ಹೀಗಾಗಿ ಕೋಚ್ ಡಿಪೋ ಸ್ಥಾಪನೆಗೆ ಜಾಗದ ಕೊರತೆಯೇನೂ ಇಲ್ಲ. ಇಲ್ಲಿ ಕೋಚ್ ಡಿಪೋ ಬಂದರೆ ಇದನ್ನು ನಿರ್ವಹಣಾ ಹಬ್ ಆಗಿ ಬೆಳೆಸಬಹುದು. ಜತೆಗೆ ವಿಜಯಪುರ ಮತ್ತು ಉತ್ತರ ಕರ್ನಾಟಕದ (North Karnataka) ಪ್ರದೇಶಗಳಿಗೆ ಮತ್ತಷ್ಟು ಪರಿಣಾಮಕಾರಿಯಾಗಿ ರೈಲು ಸಂಪರ್ಕ ಒದಗಿಸಬಹುದು ಎಂದಿದ್ದಾರೆ. ಇದನ್ನೂ ಓದಿ: 3-4 ತಿಂಗಳಲ್ಲಿ ವಿಜಯಪುರಕ್ಕೆ ವಂದೇ ಭಾರತ್ ಸ್ಲೀಪರ್ ಆರಂಭ
ವಿಜಯಪುರವು ಚಾರಿತ್ರಿಕ ಸ್ಥಳವಾಗಿದ್ದು, ವರ್ಷವಿಡೀ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುತ್ತಿರುವ ಪ್ರವಾಸೋದ್ಯಮ ತಾಣವಾಗಿದೆ. ಅದರಲ್ಲೂ ವಾರಾಂತ್ಯ, ಹಬ್ಬ ಹರಿದಿನಗಳು ಮತ್ತು ರಜೆ ದಿನಗಳಲ್ಲಿ ಜನದಟ್ಟಣೆ ಸೃಷ್ಟಿಯಾಗುತ್ತದೆ. ಆದ್ದರಿಂದ ವಿಜಯಪುರ ರೈಲು ನಿಲ್ದಾಣದಲ್ಲಿ ಹೆಚ್ಚುವರಿಯಾಗಿ ಇನ್ನೊಂದು ಆಗಮನ-ನಿರ್ಗಮನ ದ್ವಾರವನ್ನು ಸ್ಥಾಪಿಸಬೇಕು ಎಂದು ಪಾಟೀಲ ತಮ್ಮ ಪತ್ರದಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಆಟೋ ಚಾಲಕರಿಗೆ ಸಿಹಿ ಸುದ್ದಿ: ಎಲ್‌ಪಿಜಿ ದರ ಬರೋಬ್ಬರಿ 10 ರೂ. ಇಳಿಕೆ
