ಸ್ಯಾಂಡಲ್‌ವುಡ್ (Sandalwood) ಅಂಗಳದಲ್ಲಿ ಸದ್ದಿಲ್ಲದೆ ಸೆಟ್ಟೇರಿ, ಬಿಡುಗಡೆಗೆ ಸಜ್ಜಾಗಿರುವ ಸಿನಿಮಾ ‘ಕೇಕೆ’. ಈ ಚಿತ್ರದ ವಿಶೇಷ ಐಟಂ ಹಾಡನ್ನು(Item song) ಇಂದು ಕಲಾವಿದರ ಸಂಘದಲ್ಲಿ ಲೋಕಾರ್ಪಣೆ ಮಾಡಲಾಯಿತು. ‘ಕೇಕೆ’ ಚಿತ್ರವನ್ನು ಸೋಮಶೇಖರ್ ಜಿ.ಕೆ. ನಿರ್ದೇಶಿಸಿದ್ದು, ಬಹುತೇಕ ಹೊಸ ಕಲಾವಿದರೇ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ರಮಾಲಿ ನಾಯ್ಕ್ ಮತ್ತು ಕಲ್ಯಾಣ್ (ಬಳ್ಳಾರಿ-ಹೊಸಪೇಟೆ) ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಭರತ್ ಇಂಡಿಯಾ ಛಾಯಾಗ್ರಹಣ ನಿರ್ವಹಿಸಿದ್ದಾರೆ.
‘ಕೇಕೆ’ ಚಿತ್ರಕ್ಕೆ ‘ಉಪೇಂದ್ರ ಐ ಲವ್ ಯೂ’ ಚಿತ್ರದ ಖ್ಯಾತಿಯ ಕಿರಣ್ ತೋಟಂಬೈಲ್ ಸಂಗೀತ ಸಂಯೋಜಿಸಿದ್ದಾರೆ. ಇದೀಗ ಬಿಡುಗಡೆಯಾಗಿರುವ ‘ಗುಂಟೂರು ಅಮ್ಮಾಯಿ’ ಹಾಡಿಗೆ ಸಂಗೀತದ ಜೊತೆಗೆ ಸಾಹಿತ್ಯವನ್ನೂ ಕಿರಣ್ ಅವರೇ ಬರೆದಿದ್ದಾರೆ. ಐಶ್ವರ್ಯ ರಂಗರಾಜನ್ ಧ್ವನಿಯಾಗಿದ್ದು, ಆಲಾಪನಾ ಆಡಿಯೋ ಮೂಲಕ ಹಾಡು ಬಿಡುಗಡೆಯಾಗಿದೆ. ಆಲಾಪನಾ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಹಾಡು ವೀಕ್ಷಣೆಗೆ ಲಭ್ಯವಿದೆ.
‘ಗುಂಟೂರು ಅಮ್ಮಾಯಿ’ ಹಾಟ್ ಬೀಟ್ಸ್ ಹೊಂದಿರುವ ತೆಲುಗು ಮಿಶ್ರಿತ ಕನ್ನಡ ಹಾಡಾಗಿದೆ. ಕೇಳುವುದಕ್ಕೆ ರಸವತ್ತಾಗಿರುವ ಈ ಹಾಡು, ನೋಡುವುದಕ್ಕೂ ಅಷ್ಟೇ ರಂಗಿನವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಿಚಾರಗಳಿಗೆ ವೈರಲ್ ಆಗಿದ್ದ ಸೋನು ಶ್ರೀನಿವಾಸ್ ಗೌಡ (Sonu Sinivas Gowda) ಈ ಹಾಡಿಗೆ ಹೆಜ್ಜೆ ಹಾಕಿರುವುದು ವಿಶೇಷ. ಆದರೆ ಈ ಹಾಡಿನ ಬಿಡುಗಡೆ ಬಳಿಕ, ಕನ್ನಡ ಚಿತ್ರದಲ್ಲಿ ಯಾಕೆ ತೆಲುಗು ಸಾಹಿತ್ಯದ ಹಾಡು ಎಂಬ ಪ್ರಶ್ನೆ ಎತ್ತಿದ ಪತ್ರಕರ್ತರು ಹಾಗೂ ಚಿತ್ರತಂಡದ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ಬಳಿಕ, ಸಾಧ್ಯವಾದಲ್ಲಿ ತಿದ್ದುಪಡಿ ಮಾಡಿಕೊಳ್ಳುವುದಾಗಿ ಸಂಗೀತ ನಿರ್ದೇಶಕ ಕಿರಣ್ ತಿಳಿಸಿದರು.ಇದನ್ನೂ ಓದಿ: `ಟಾಕ್ಸಿಕ್’ ಲೇಡಿಸ್ ಗ್ಯಾಂಗ್ ಬರ್ತಿದೆ ದಾರಿ ಬಿಡಿ
ಇದೇ ಮೊದಲ ಬಾರಿಗೆ ಸಿನಿಮಾ ಹಾಡಿಗೆ ಹೆಜ್ಜೆ ಹಾಕಿರುವ ಸೋನು ಶ್ರೀನಿವಾಸ್ ಗೌಡ, ಮೊದಲ ಅನುಭವವನ್ನು ಹಂಚಿಕೊಂಡು, ಈ ಅವಕಾಶ ನೀಡಿದ್ದಕ್ಕೆ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದರು. ಪ್ರೇಕ್ಷಕರ ಆಶೀರ್ವಾದ ಬೇಕೆಂದು ಮನವಿ ಮಾಡಿದರು. ಅಂದಹಾಗೆ, ‘ಗುಂಟೂರು ಅಮ್ಮಾಯಿ’ ಹಾಡಿನ ಬಿಡುಗಡೆಯೊಂದಿಗೆ ಸೋನು ಅವರ ಹುಟ್ಟುಹಬ್ಬವನ್ನೂ ಚಿತ್ರತಂಡ ಆಚರಿಸಿತು. ‘ಕೇಕೆ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲೇ ಚಿತ್ರದ ಇನ್ನಿತರ ಮಾಹಿತಿಗಳನ್ನು ಹಂಚಿಕೊಳ್ಳುವುದಾಗಿ ಚಿತ್ರತಂಡ ತಿಳಿಸಿತು. ಇದನ್ನೂ ಓದಿ: ಕುಟುಂಬದ ಹೃದಯ ಕಲಕುವ ಭಾಗ್ಯವಂತರು ಸೀರಿಯಲ್
