ಕ್ಯಾಲಿಫೋರ್ನಿಯಾ: ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಆ್ಯಪ್ ವಾಟ್ಸಪ್ (WhatsApp) ತನ್ನ ಬಳಕೆದಾರರ ಗೌಪ್ಯತೆಯನ್ನು (Privacy) ಮತ್ತಷ್ಟು ಬಲಪಡಿಸಲು ಶೀಘ್ರದಲ್ಲೇ ಅತ್ಯಂತ ಪ್ರಮುಖ ಬದಲಾವಣೆಯೊಂದನ್ನು ತರಲು ಸಜ್ಜಾಗಿದೆ.
ಇನ್ನು ಮುಂದೆ ಬಳಕೆದಾರರು ತಮ್ಮ ವೈಯಕ್ತಿಕ ಫೋನ್ ನಂಬರ್ ಹಂಚಿಕೊಳ್ಳದೆಯೇ ಇತರರೊಂದಿಗೆ ಚಾಟ್ ಮಾಡಲು ಅನುವು ಮಾಡಿಕೊಡುವ ಯೂಸರ್ ನೇಮ್ (Username) ವೈಶಿಷ್ಟ್ಯವನ್ನು ವಾಟ್ಸಪ್ ಪರೀಕ್ಷಿಸುತ್ತಿದೆ.
ಹೈಡ್ ಮಾಡಿ:
ಪ್ರಸ್ತುತ ಈಗ ವಾಟ್ಸಪ್‌ನಲ್ಲಿ ಯಾರೊಂದಿಗಾದರೂ ಚಾಟ್ ಮಾಡಬೇಕಾದರೆ ಅಥವಾ ಗ್ರೂಪ್‌ಗೆ ಸೇರಬೇಕಾದರೆ ಫೋನ್ ನಂಬರ್ ಕಾಣಿಸುವುದು ಕಡ್ಡಾಯ. ಆದರೆ ಈ ಹೊಸ ಫೀಚರ್ ಜಾರಿಯಾದ ನಂತರ ಇನ್‌ಸ್ಟಾಗ್ರಾಮ್, ಎಕ್ಸ್ ಅಥವಾ ಟೆಲಿಗ್ರಾಂ ಮಾದರಿಯಲ್ಲಿಯೇ ಪ್ರತಿಯೊಬ್ಬರಿಗೂ ವಿಶಿಷ್ಟವಾದ ಯೂಸರ್ ನೇಮ್ ನೀಡಲಾಗುತ್ತದೆ. ನಿಮ್ಮ ನಂಬರ್ ಇಲ್ಲದವರೂ ಸಹ ಕೇವಲ ನಿಮ್ಮ ಯೂಸರ್ ನೇಮ್ ಹುಡುಕುವ ಮೂಲಕ ನಿಮಗೆ ಮೆಸೇಜ್ ಕಳುಹಿಸಬಹುದಾಗಿದೆ.
your phone number is personal and sometimes you want to connect without handing it over. that’s why we’re introducing usernames for WhatsApp.
starting this week, you can reserve a username to use later this year when we launch the feature. It takes just a few seconds, make sure…
— WhatsApp (@WhatsApp) June 29, 2026
ಯೂಸರ್ ನೇಮ್ ರಿಸರ್ವ್:
ಇನ್‌ಸ್ಟಾಗ್ರಾಮ್ ಮತ್ತು ಟೆಲಿಗ್ರಾಂ ಆ್ಯಪ್‌ಗಳ ಮಾದರಿಯಲ್ಲಿಯೇ ವಾಟ್ಸಪ್‌ನಲ್ಲೂ ತಮ್ಮ ಇಷ್ಟದ ಯೂಸರ್ ನೇಮ್ ಅನ್ನು ಸೆಟ್ ಮಾಡಿಕೊಳ್ಳಬಹುದು. ವಿಶಿಷ್ಟವಾದ ಯೂಸರ್ ನೇಮ್‌ಗಳನ್ನು ರಿಸರ್ವ್ ಮಾಡಲು ಅವಕಾಶ ಸಿಗಲಿದೆ. ಮೊದಲು ಬಂದವರಿಗೆ ಆದ್ಯತೆಯ ಮೇರೆಗೆ ಈ ಹೆಸರುಗಳು ಸಿಗಲಿದ್ದು, ನಿಮ್ಮ ಪ್ರೊಫೈಲ್‌ಗೆ ಸೂಕ್ತವಾದ ಹೆಸರನ್ನು ನೀವೇ ಆಯ್ದುಕೊಳ್ಳಬಹುದು. ಇದರಿಂದ ಅಪರಿಚಿತರಿಗೆ ನಿಮ್ಮ ಫೋನ್ ನಂಬರ್ ತಿಳಿಯದಂತೆ ಗೌಪ್ಯತೆ ಕಾಯ್ದುಕೊಳ್ಳಬಹುದು. ಇದನ್ನೂ ಓದಿ: ಆಪಲ್ ಉತ್ಪನ್ನಗಳ ಬೆಲೆ ಭಾರೀ ಏರಿಕೆ – ಹಿಂದೆ ಎಷ್ಟಿತ್ತು? ಈಗ ಎಷ್ಟಾಗಿದೆ?
ಪಿನ್ ಭದ್ರತೆ:
ಗೌಪ್ಯತೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ವಾಟ್ಸಪ್ ‘ಯೂಸರ್ ನೇಮ್ ಪಿನ್’ ವೈಶಿಷ್ಟ್ಯವನ್ನೂ ಪರಿಚಯಿಸುತ್ತಿದೆ. ಇದರ ಅನ್ವಯ ಯಾರಾದರೂ ನಿಮ್ಮ ಯೂಸರ್ ನೇಮ್ ಹುಡುಕಿ ನಿಮಗೆ ಮೊದಲ ಬಾರಿಗೆ ಸಂದೇಶ ಕಳುಹಿಸಬೇಕಾದರೆ ನೀವು ಸೆಟ್ ಮಾಡಿರುವ 4 ಅಂಕಿಗಳ ರಹಸ್ಯ ಪಿನ್ ಅನ್ನು ಅವರು ನಮೂದಿಸಬೇಕಾಗುತ್ತದೆ. ಇದರಿಂದ ಅನಗತ್ಯ ಸ್ಪ್ಯಾಮ್ ಸಂದೇಶಗಳಿಗೆ ಬ್ರೇಕ್ ಬೀಳಲಿದೆ.
ಲಾಭ ಏನು?
ಅಪರಿಚಿತ ವ್ಯಕ್ತಿಗಳು ಅಥವಾ ವೃತ್ತಿಪರ ಕೆಲಸಗಳಿಗಾಗಿ ಗ್ರೂಪ್‌ಗಳಲ್ಲಿ ಕಾಂಟ್ಯಾಕ್ಟ್ ನಂಬರ್ ಹಂಚಿಕೊಳ್ಳಲು ಹಿಂಜರಿಯುವವರಿಗೆ, ವಿಶೇಷವಾಗಿ ಮಹಿಳೆಯರ ಸುರಕ್ಷತೆಗೆ ಈ ವೈಶಿಷ್ಟ್ಯ ಸಹಾಯವಾಗಲಿದೆ. ಯಾರಾದರೂ ನಿಮ್ಮ ಯೂಸರ್ ನೇಮ್ ಹೊಂದಿದ್ದರೂ ಸಹ ನಿಮ್ಮ ಅನುಮತಿಯಿಲ್ಲದೆ ಅವರಿಗೆ ನಿಮ್ಮ ಫೋನ್ ನಂಬರ್ ಕಾಣಿಸುವುದಿಲ್ಲ.
ಜಾರಿ ಯಾವಾಗ ?
ಈ ವೈಶಿಷ್ಟ್ಯವು ಪ್ರಸ್ತುತ ಆಂಡ್ರಾಯ್ಡ್ ಮತ್ತು ಐಒಎಸ್‌ನ ಆಯ್ದ ಬೀಟಾ (Beta) ಆವೃತ್ತಿಗಳಲ್ಲಿ ಅಂತಿಮ ಹಂತದ ಪರೀಕ್ಷೆಯಲ್ಲಿದ್ದು, ಶೀಘ್ರದಲ್ಲೇ ಜಾಗತಿಕವಾಗಿ ಎಲ್ಲಾ ಬಳಕೆದಾರರ ಫೋನ್‌ಗಳಿಗೆ ಅಪ್‌ಡೇಟ್ ರೂಪದಲ್ಲಿ ಲಭ್ಯವಾಗಲಿದೆ.
