– ಮುದ್ದೇನಹಳ್ಳಿ ಹೋಂ ಸ್ಟೇನಲ್ಲಿ ಯುವತಿ ಸಾವು ಪ್ರಕರಣ
– ಕೊಠಡಿಯಲ್ಲಿ ಗಾಂಜಾ ಸೇವನೆಗೆ ಬಳಸುವ ಹುಕ್ಕಾ ಪತ್ತೆ
ಚಿಕ್ಕಬಳ್ಳಾಪುರ: ಜಿಲ್ಲೆಯ ಮುದ್ದೇನಹಳ್ಳಿ ಸಮೀಪದ ಹೋಂ ಸ್ಟೇನಲ್ಲಿ ಯುವತಿ ಸಾಯಿ ಸುರಭಿ(Sai Surabhi) ನಿಗೂಢವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಸಾಕ್ಷ್ಯವೊಂದು ಲಭ್ಯವಾಗಿದೆ. ಘಟನಾ ಸ್ಥಳದಲ್ಲಿ ಯುವಕ ಸಂಜೀತ್ ಆಲಿ(Sanjith Ali) ಬರೆದಿದ್ದಾನೆ ಎನ್ನಲಾದ ಭಾವನಾತ್ಮಕ ಡೆತ್ ನೋಟ್ (Death Note) ಪತ್ತೆಯಾಗಿದ್ದು, ಇಡೀ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಡೆತ್ ನೋಟ್‌ನಲ್ಲಿ ಏನಿದೆ?
ಹೋಂ ಸ್ಟೇನ ಚೇರ್ ಮೇಲಿದ್ದ ಡೈರಿಯಲ್ಲಿ ಸಂಜೀತ್ ಆಲಿ ಬರೆದಿದ್ದಾನೆ ಎನ್ನಲಾದ ಸಾಲುಗಳು ಪತ್ತೆಯಾಗಿವೆ. ಅದರಲ್ಲಿ, ಪ್ರಿಯತಮೆ ಹಿಂದೂ. ನಾನು ಮುಸ್ಲಿಂ ಆಗಿ ಹುಟ್ಟಿದ್ದೇ ತಪ್ಪಾ?, ಅನ್ಯಧರ್ಮಿಯರೆಂಬ ಕಾರಣಕ್ಕೆ ನಮ್ಮ ಮದುವೆ ಆಗಲಿಲ್ಲ. ನಾವು ಮದುವೆಯಾಗಲು(Marriage) ಈ ಸಮಾಜ ಬಿಡಲಿಲ್ಲ ಎಂದು ತಮ್ಮ ಪ್ರೀತಿಯ (Love) ವಿಫಲತೆ ಹಾಗೂ ಸಮಾಜದ ವಿರೋಧದ ಬಗ್ಗೆ ಅತ್ಯಂತ ಭಾವುಕವಾಗಿ ಬರೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸದ್ಯ ಈ ಡೆತ್ ನೋಟ್ ಅನ್ನು ವಶಕ್ಕೆ ಪಡೆದಿರುವ ಮುದ್ದೇನಹಳ್ಳಿ ಪೊಲೀಸರು ಇದರ ನಿಖರತೆ ಹಾಗೂ ಹ್ಯಾಂಡ್‌ರೈಟಿಂಗ್ ಅನ್ನು ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: ಹೋಂಸ್ಟೇನಲ್ಲಿ ಯುವತಿ ಸಾವು; ಸಂಜೀತ್ ಅಲಿ ಸಹವಾಸ ಮಾಡಿ ತಪ್ಪು ಮಾಡಿಬಿಟ್ಟೆ ಹೊಸ ಬದುಕು ಕಟ್ಟಿಕೊಳ್ತೀನಿ ಎಂದಿದ್ದ ಸುರಭಿ
ಕೊಲೆಯೋ? ಆತ್ಮಹತ್ಯೆಯೋ?
ಮೇಲ್ನೋಟಕ್ಕೆ ಇದು ಪ್ರೇಮ ವೈಫಲ್ಯದ ಆತ್ಮಹತ್ಯೆಯಂತೆ ಕಂಡರೂ, ಪೊಲೀಸರಿಗೆ ತನಿಖೆಯಲ್ಲಿ ಹಲವು ಗಂಭೀರ ಅನುಮಾನಗಳು ಮೂಡಿವೆ. ಯುವತಿ ಸುರಭಿ ಸುಮಾರು 10 ಅಡಿ ಎತ್ತರದ ಫ್ಯಾನ್‌ಗೆ ನೇಣು ಬಿಗಿದುಕೊಂಡಿರುವುದು ತನಿಖಾಧಿಕಾರಿಗಳಿಗೆ ಸಂಶಯ ಮೂಡಿಸಿದೆ.
ಸಂಜೀತ್ ಆಲಿ ಪ್ರಸ್ತುತ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಯ ಐಸಿಯು (ICU) ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸುರಭಿ ನೇಣು ಬಿಗಿದುಕೊಂಡ ಬಳಿಕ ಈತನೂ ಆತ್ಮಹತ್ಯೆಗೆ ಯತ್ನಿಸಿದ್ದನೇ? ಅಥವಾ ಅಲ್ಲಿ ಬೇರೇನಾದರೂ ನಡೆದಿತ್ತೇ? ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ ಹೋಂ ಸ್ಟೇನಲ್ಲಿ ಬೆಂಗಳೂರಿನ ಯುವತಿ ಸಾವು: ಇದು ಲವ್ ಜಿಹಾದ್ ಕೊಲೆ ಎಂದ ತಾಯಿ
ಸುರಭಿ ಶವ ಪತ್ತೆಯಾದ ಕೊಠಡಿಯಲ್ಲಿ ಕೆಲವು ಔಷಧಿಗಳು, ಗಾಂಜಾ ಸೇವನೆಗೆ ಬಳಸುವ ಹುಕ್ಕಾ ಮತ್ತು ಓಲ್ಡ್ ಮಾಂಕ್ ಮದ್ಯದ ಬಾಟಲಿಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಮೃತ ಯುವತಿ ಸುರಭಿಯ ಅಂತ್ಯಕ್ರಿಯೆ ನಿನ್ನೆ(ಜೂನ್ 30) ನೆರವೇರಿದೆ. ಸ್ಥಳದಲ್ಲಿ ಸಿಕ್ಕ ಸಾಕ್ಷ್ಯಗಳು ಮತ್ತು ಮದ್ಯದ ಬಾಟಲಿಗಳನ್ನು ಪೊಲೀಸರು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಿಕೊಟ್ಟಿದ್ದಾರೆ. ಎಫ್‌ಎಸ್‌ಎಲ್ ಮತ್ತು ಮರಣೋತ್ತರ ಪರೀಕ್ಷೆಯ (Post-Mortem) ವರದಿ ಬಂದ ಬಳಿಕವಷ್ಟೇ ಸುರಭಿ ಸಾವಿನ ಹಿಂದಿನ ಅಸಲಿ ಸತ್ಯ ಮತ್ತು ನಿಖರ ಕಾರಣ ಏನೆಂಬುದು ಅಧಿಕೃತವಾಗಿ ಹೊರಬರಬೇಕಿದೆ.
