ಚಿಕ್ಕಮಗಳೂರು: ಭಾರೀ ಮಳೆಯಿಂದ ಹಳ್ಳಿ ದ್ವೀಪದಂತಾಗಿ ನೀರು ಹೋಗಲು ಜಾಗವಿಲ್ಲದ ಕಾರಣ ಸ್ಥಳೀಯರು ರಸ್ತೆಯನ್ನೇ ಅಗೆದು ನೀರನ್ನು ಹೊರಗೆ ಬಿಟ್ಟಿರುವ ಘಟನೆ ಜಿಲ್ಲೆಯ ಬಯಲುಸೀಮೆ ಭಾಗ ಕಡೂರು ತಾಲೂಕಿನ ನಿಡುವಳ್ಳಿ ಗ್ರಾಮದಲ್ಲಿ ನಡೆದಿದೆ.
ಕಡೂರು ತಾಲೂಕಿನಾದ್ಯಂತ ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನಿಡುವಳ್ಳಿ ಗ್ರಾಮದಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಇಡೀ ರಾತ್ರಿ ಪರದಾಡುವಂತಾಗಿದೆ. ಮನೆಯವರು ಇಡೀ ರಾತ್ರಿ ನೀರನ್ನು ತೆಗೆದು ಹೊರಹಾಕಿದ್ದಾರೆ. ಧಾರಾಕಾರ ಮಳೆಯಿಂದ ಮನೆಗಳಿಗೆ ನೀರು ನುಗ್ಗಿದ್ದಷ್ಟೇ ಅಲ್ಲದೆ ನೂರಾರು ಎಕರೆ ತೋಟಗಳು ಕೂಡ ಜಲಾವೃತಗೊಂಡಿವೆ. ಇದನ್ನೂ ಓದಿ: ಗಂಗೆಗೂ ಜಲ ದಿಗ್ಬಂಧನ – ದಕ್ಷಿಣ ಕಾಶಿ ಶಿವಗಂಗೆ ಬೆಟ್ಟದಲ್ಲಿ ವಿಸ್ಮಯ ರೀತಿಯಲ್ಲಿ ಜಲೋಧ್ಬವ
Advertisement
Advertisement
ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ನೀರು ಎಲ್ಲೆಂದರಲ್ಲಿ ನುಗ್ಗಿದ ಪರಿಣಾಮ ಹಳ್ಳಿಗರು ಇಡೀ ರಾತ್ರಿ ಪರದಾಡಿದ್ದಾರೆ. ಇಡೀ ಹಳ್ಳಿ ತುಂಬಾ ನೀರು ತುಂಬಿಕೊಂಡು ಮನೆಗಳಿಗೆ ನೀರು ನುಗ್ಗುತ್ತಿದ್ದ ಪರಿಣಾಮ ಸ್ಥಳೀಯರು ಅಧಿಕಾರಿಗಳ ಗಮನಕ್ಕೆ ತಂದು ರಸ್ತೆಯನ್ನೇ ಅಗೆದು ನೀರನ್ನು ಹೊರಬಿಟ್ಟಿದ್ದಾರೆ. ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಮನೆಯಲ್ಲಿದ್ದ ಗೃಹಪಯೋಗಿ ವಸ್ತುಗಳ ಜೊತೆ ರೈತರು ಬೆಳೆದಿದ್ದ ಬೆಳೆಗಳು ಕೂಡ ಮಣ್ಣು ಪಾಲಾಗಿವೆ. ಇದನ್ನೂ ಓದಿ: ನವೆಂಬರ್ 1ಕ್ಕೆ ಪುನೀತ್ ರಾಜ್ ಕುಮಾರ್ ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ
Advertisement
ವಿಶಿಷ್ಟ ಹವಾಗುಣ ಹೊಂದಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಲೆನಾಡು, ಅರೆಮಲೆನಾಡು ಹಾಗೂ ಬಯಲುಸೀಮೆ ಮೂರೂ ಪ್ರದೇಶಗಳಿವೆ. ಕಡೂರು ಅಪ್ಪಟ ಬಯಲು ಸೀಮೆ ಭಾಗ. ಆದರೆ ಕಳೆದ ರಾತ್ರಿ ಮಲೆನಾಡು ಭಾಗದಲ್ಲಿ ಸುರಿಯುವಂತೆ ಧಾರಾಕಾರ ಮಳೆ ಸುರಿದ ಪರಿಣಾಮ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.