ಬಳ್ಳಾರಿ: ನಿರ್ಮಾಣಗೊಂಡ ಕೇವಲ ಹತ್ತೇ ದಿನಗಳಲ್ಲಿ ಸರ್ವಿಸ್ ರಸ್ತೆ ಕುಸಿದ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಬಳ್ಳಾರಿ (Ballari) ಲೋಕಸಭಾ ಕ್ಷೇತ್ರದ ಸಂಸದ ಇ. ತುಕಾರಾಂ(E Tukaram) ಅವರು ಸ್ಥಳೀಯ ನಿವಾಸಿಗಳ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಡಣಾಪುರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 50ರ ಮೇಲ್ಸೆತುವೆ (Flyover) ಮತ್ತು ಸರ್ವಿಸ್ ರಸ್ತೆ ನಿರ್ಮಾಣದ ಕಾಮಗಾರಿ ನಡೆಯುತ್ತಿದೆ. ಸುಮಾರು 33 ಕೋಟಿ ರೂಪಾಯಿ ವೆಚ್ಚದ ಈ ಕಾಮಗಾರಿಗೆ ಕೇವಲ ಎರಡು ತಿಂಗಳ ಹಿಂದೆಯಷ್ಟೇ ಸಂಸದ ಇ. ತುಕಾರಾಂ ಅವರು ಭೂಮಿ ಪೂಜೆ ನೆರವೇರಿಸಿದ್ದರು. ಆದರೆ, ಸರ್ವಿಸ್ ರಸ್ತೆ ನಿರ್ಮಾಣಗೊಂಡು ಕೇವಲ 10 ದಿನ ಕಳೆಯುವುದರೊಳಗೆ ಸಂಪೂರ್ಣವಾಗಿ ಕುಸಿದಿದ್ದು, ಅದರ ಮೇಲೆ ಬರುತ್ತಿದ್ದ ಭಾರಿ ಟ್ರಕ್ ಪಲ್ಟಿಯಾಗುವ ಹಂತದಲ್ಲಿ ಸಿಲುಕಿಕೊಂಡಿತ್ತು.
ಗುತ್ತಿಗೆ ಕಂಪನಿಯು ಹಣ ಉಳಿಸುವ ದುರಾಸೆಯಿಂದ ರಸ್ತೆ ನಿರ್ಮಾಣದ ವೇಳೆ ಮಣ್ಣು ಹಾಕುವ ಬದಲಿಗೆ ಕೇವಲ ‘ಫ್ಲೈ ಆ್ಯಷ್’ (Fly Ash – ಬೂದಿ/ತ್ಯಾಜ್ಯ) ಬಳಸಿ ರಸ್ತೆ ನಿರ್ಮಿಸಿದೆ. ಹೀಗಾಗಿಯೇ ರಸ್ತೆ ಕುಸಿಯುತ್ತಿದೆ ಎಂದು ಸ್ಥಳೀಯರು ಜಿಲ್ಲಾಡಳಿತ, ಸಂಸದರು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ವಿರುದ್ಧ ಆಕ್ರೋಶ ಹೊರಹಾಕಿದ್ದರು. ಜನರ ತೆರಿಗೆ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಗುತ್ತಿಗೆ ಕಂಪನಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳು ಪಟ್ಟು ಹಿಡಿದಿದ್ದರು.
ಸ್ಥಳೀಯರ ಆಕ್ರೋಶದ ಹಿನ್ನೆಲೆಯಲ್ಲಿ ಕಾಮಗಾರಿ ಪರಿಶೀಲನೆ ನಡೆಸಲು ಸಂಸದ ಇ. ತುಕಾರಾಂ ಅವರು ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕಳಪೆ ಕಾಮಗಾರಿಯ ಕುರಿತು ಪ್ರಶ್ನಿಸಿದ ಮತ್ತು ಅಳಲು ತೋಡಿಕೊಂಡ ಗ್ರಾಮಸ್ಥರನ್ನು ಸಮಾಧಾನಪಡಿಸುವ ಹಾಗೂ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಳ್ಳುವ ಬದಲಾಗಿ, ಸಂಸದರು ಸ್ಥಳೀಯರ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಸಾರ್ವಜನಿಕರ ಸಮ್ಮುಖದಲ್ಲೇ ಗ್ರಾಮಸ್ಥರ ವಿರುದ್ಧ ಅಶ್ಲೀಲ ಪದಗಳನ್ನು ಬಳಸಿ ನಿಂದಿಸಿದ್ದಾರೆ ಎಂದು ವರದಿಯಾಗಿದೆ.
ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದರೇ ಈ ರೀತಿ ಸಾರ್ವಜನಿಕರ ವಿರುದ್ಧ ಏಕವಚನ ಮತ್ತು ಅಶ್ಲೀಲ ಪದಗಳನ್ನು ಬಳಸಿರುವುದು ಡಣಾಪುರ ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದ್ದು, ಸಂಸದರ ವರ್ತನೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
