ಚೆನ್ನೈ: ಪರಪುರುಷನ ಜೊತೆ ಪತ್ನಿ ಓಡಿ ಹೋಗಿದ್ದಕ್ಕೆ ಮನನೊಂದು, ಇಬ್ಬರು ಮಕ್ಕಳಿಗೆ ಕರೆಂಟ್ ಶಾಕ್ ಕೊಟ್ಟು ಹತ್ಯೆ ಮಾಡಿ ವ್ಯಕ್ತಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನಲ್ಲಿ (Tamil Nadu) ನಡೆದಿದೆ.
ಟುಟಿಕೋರಿನ್ ಜಿಲ್ಲೆಯ ಪುದುಕೊಟ್ಟೈ ಬಳಿಯ ಸವೇರಿಯಾರ್ಪುರಂನ ಟ್ರಕ್ ಚಾಲಕ ಮೇರಿ ಮೈಕೆಲ್, ಆತನ ಮಗಳು ಒಂಬತ್ತನೇ ತರಗತಿ ವಿದ್ಯಾರ್ಥಿನಿ ಮೇರಿ ನಿರೋಷಾ (14) ಮತ್ತು ಮಗ ಏಳನೇ ತರಗತಿ ವಿದ್ಯಾರ್ಥಿನಿ ಮೇರಿ ಕೆನಿಸ್ಟನ್ (12) ಮೃತರು. ಇದನ್ನೂ ಓದಿ: Twisha Sharma Case: ನೇಣು ಬಿಗಿದುಕೊಳ್ಳಲು ಜಿಮ್ ಬೆಲ್ಟ್ ಬಳಸಿದ್ದ ತ್ವಿಷಾ? – ಏಮ್ಸ್ ವರದಿಯಲ್ಲೇನಿದೆ?
ಪತ್ನಿ ತನ್ನನ್ನು ಬಿಟ್ಟು ಬೇರೆ ಪುರುಷನೊಂದಿಗೆ ಹೋದ ನಂತರ ಆ ವ್ಯಕ್ತಿ ಕಂಗಾಲಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮೈಕೆಲ್ ಪತ್ನಿ ಆರು ತಿಂಗಳ ಹಿಂದೆ ಕುಟುಂಬವನ್ನು ತೊರೆದು ಬೇರೊಬ್ಬ ವ್ಯಕ್ತಿಯೊಂದಿಗೆ ವಾಸಿಸುತ್ತಿದ್ದಳು ಎನ್ನಲಾಗಿದೆ. ಇದರಿಂದ ಮೈಕೆಲ್ ಖಿನ್ನತೆಗೆ ಒಳಗಾಗಿದ್ದ. ನಂತರ ಕೆಲಸಕ್ಕೆ ಹೋಗುವುದನ್ನೇ ನಿಲ್ಲಿಸಿದ್ದ.
ಶುಕ್ರವಾರ ರಾತ್ರಿ ಮಕ್ಕಳಿಗೆ ಊಟ ಮಾಡಿಸಿ ಮಲಗುವಂತೆ ಹೇಳಿದ್ದಾನೆ. ನಂತರ ಮಕ್ಕಳಿಗೆ ಕರೆಂಟ್ ಶಾಕ್ ಕೊಟ್ಟು ಕೊಂದಿದ್ದಾನೆ. ಕೊನೆಗೆ ಅದೇ ವಿದ್ಯುತ್ ತಂತಿಯಿಂದ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೈಕೆಲ್ ತಂದೆ 75 ವರ್ಷದ ಆಂಥೋನಿ ಮುತ್ತು ಮನೆಯ ಹೊರಗೆ ಮಲಗಿದ್ದರು. ಶನಿವಾರ ಮಧ್ಯಾಹ್ನದವರೆಗೂ ಬಾಗಿಲು ಲಾಕ್ ಆಗಿದ್ದಾಗ, ನೆರೆಹೊರೆಯವರಿಗೆ ಮಾಹಿತಿ ನೀಡಿದರು. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಇದನ್ನೂ ಓದಿ: ಶೌಚಕ್ಕೆ ಹೋಗಬೇಕೆಂದು ಒಂಟಿ ಮಹಿಳೆ ಮನೆಗೆ ನುಗ್ಗಿ, ಗುಪ್ತಾಂಗ ತೋರಿಸಿದ್ದ ಡೆಲಿವರಿ ಬಾಯ್ ಅರೆಸ್ಟ್
ಬಾಗಿಲು ಒಡೆದು ಒಳಗೆ ಹೋದ ಪೊಲೀಸರು, ವಿದ್ಯುತ್ ತಂತಿಗಳು ದೇಹಕ್ಕೆ ಬಿಗಿದುಕೊಂಡು ಹಾಸಿಗೆಯ ಮೇಲೆ ಮೃತರಾಗಿ ಬಿದ್ದಿರುವುದನ್ನು ಕಂಡುಕೊಂಡರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಟುಟಿಕೋರಿನ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಗಿದೆ. ಪುದುಕೊಟ್ಟೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
