ಭೋಪಾಲ್: ತ್ವಿಷಾ ಶರ್ಮಾ (Twisha Sharma Case) ಸಾವಿನ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ, ನ್ಯಾಯಾಲಯದ ಆದೇಶದ ಮೇರೆಗೆ ಎರಡನೇ ಬಾರಿ ಮರಣೋತ್ತರ ಪರೀಕ್ಷೆ (Postmortem examination) ನಡೆಸಿದ್ದ ದೆಹಲಿಯ ಏಮ್ಸ್ ವೈದ್ಯಕೀಯ ಮಂಡಳಿ (AIIMS) ತನ್ನ ಅಂತಿಮ ವಿಧಿವಿಜ್ಞಾನ ವರದಿಯನ್ನು ಸಿಬಿಐಗೆ ಸಲ್ಲಿಸಿದೆ.
ಈ ವರದಿ ಪ್ರಕರಣದ ತನಿಖೆಯಲ್ಲಿ ಪ್ರಮುಖ ಸಾಕ್ಷ್ಯವಾಗುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ, ತ್ವಿಷಾ ನೇಣು ಬಿಗಿದುಕೊಳ್ಳಲು ಬಳಸಲಾಗಿದೆ ಎಂದು ಶಂಕಿಸಿರುವ ಜಿಮ್ ಬೆಲ್ಟ್‌ನ ಲೋಹದ ರಿಂಗ್‌ನಲ್ಲಿ ಆಕೆಯ ಚರ್ಮದ ಕಣಗಳು ಪತ್ತೆಯಾಗಿವೆ. ಈ ಬೆಲ್ಟ್ ತ್ವಿಷಾಳ ಕುತ್ತಿಗೆಯಲ್ಲಿದ್ದ ಗಾಯದ ಗುರುತುಗಳಿಗೆ ಹೊಂದಿಕೆಯಾಗಿರುವುದೂ ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ತಿಳಿದುಬಂದಿದೆ. ಆದರೆ, ಏಮ್ಸ್ ವೈದ್ಯಕೀಯ ಮಂಡಳಿಯ ಅಂತಿಮ ವೈದ್ಯಕೀಯ ಅಭಿಪ್ರಾಯವನ್ನು ನ್ಯಾಯಾಲಯದ ಸೂಚನೆಯಂತೆ ಮುಚ್ಚಿದ ಲಕೋಟೆಯಲ್ಲಿ ಸಿಬಿಐಗೆ ಸಲ್ಲಿಸಲಾಗಿದೆ. ಹೀಗಾಗಿ ವರದಿಯ ಸಂಪೂರ್ಣ ವಿವರಗಳನ್ನು ಇನ್ನೂ ಸಾರ್ವಜನಿಕವಾಗಿ ಬಹಿರಂಗಪಡಿಸಲಾಗಿಲ್ಲ.ಇದನ್ನೂ ಓದಿ: Twisha Sharma Case: ತ್ವಿಷಾ ಶರ್ಮಾ ಅತ್ತೆ ಮನೆಯಲ್ಲಿ ಕಳ್ಳತನ; ಸಾಕ್ಷ್ಯ ನಾಶಕ್ಕೆ ಯತ್ನವೇ ಎಂಬ ಅನುಮಾನ
ಒಟ್ಟು 11 ಪುಟಗಳ ವಿಧಿವಿಜ್ಞಾನ ವರದಿಯನ್ನು ಜುಲೈ 10ರಂದು ಸಿಬಿಐಗೆ ಹಸ್ತಾಂತರಿಸಲಾಗಿದೆ. ಮಧ್ಯಪ್ರದೇಶ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನದ ಹಿನ್ನೆಲೆಯಲ್ಲಿ ಈ ವರದಿ ಸದ್ಯ ಗೌಪ್ಯವಾಗಿಯೇ ಉಳಿದಿದೆ.
ಮೊದಲ ಮರಣೋತ್ತರ ಪರೀಕ್ಷೆಯ ವೇಳೆ ಪ್ರಕರಣದಲ್ಲಿ ಬಳಸಲಾಗಿದೆ ಎಂದು ಶಂಕಿಸಿರುವ ಜಿಮ್ ಬೆಲ್ಟ್ (ಲಿಗೇಚರ್) ಅನ್ನು ವೈದ್ಯಕೀಯ ಮಂಡಳಿಯ ಮುಂದೆ ಹಾಜರುಪಡಿಸಿರಲಿಲ್ಲ. ಇದರಿಂದ ತನಿಖೆಯಲ್ಲಿ ಉದ್ಭವಿಸಿದ್ದ ಹಲವು ಪ್ರಮುಖ ಪ್ರಶ್ನೆಗಳಿಗೆ ಉತ್ತರ ಸಿಕ್ಕಿರಲಿಲ್ಲ. ಈ ಕಾರಣದಿಂದಲೇ ಮಧ್ಯಪ್ರದೇಶ ಹೈಕೋರ್ಟ್, ದೆಹಲಿಯ ಏಮ್ಸ್ ವೈದ್ಯಕೀಯ ಮಂಡಳಿಯಿಂದ ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ನಡೆಸುವಂತೆ ಆದೇಶಿಸಿತ್ತು.ಇದನ್ನೂ ಓದಿ: Twisha Sharma Case: ಪತಿ, ಅತ್ತೆಯನ್ನು ಮನೆಗೆ ಕರೆತಂದು ಅಪರಾಧ ದೃಶ್ಯ ಮರುಸೃಷ್ಟಿ ಮಾಡಿದ ಸಿಬಿಐ
ನ್ಯಾಯಾಲಯದ ಸೂಚನೆಯಂತೆ ಐವರು ತಜ್ಞರನ್ನು ಒಳಗೊಂಡ ವೈದ್ಯಕೀಯ ಮಂಡಳಿಯನ್ನು ರಚಿಸಲಾಗಿತ್ತು. ಈ ತಂಡ ಮೇ 24ರಂದು ಎರಡನೇ ಮರಣೋತ್ತರ ಪರೀಕ್ಷೆ ನಡೆಸಿದ್ದು, ಪ್ರಕರಣ ನಡೆದ ಸ್ಥಳಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.
